– ನದಿ, ಜಲಾಶಯದಲ್ಲಿ ನೀರಿನ ಹರಿವು ಹೆಚ್ಚಳ
ಮಡಿಕೇರಿ: ಕರ್ನಾಟಕದ ಕಾಶ್ಮೀರ ಕೊಡಗಿನಲ್ಲಿ ಮಳೆ ಅಬ್ಬರಿಸುತ್ತಿದ್ದು, ಬೆಳಗ್ಗೆಯಿಂದ ಬಿಡುವು ಕೊಟ್ಟಿದ್ದ ಮಳೆರಾಯ ಮಧ್ಯಾಹ್ನದ ನಂತರ ಮತ್ತೆ ಅಬ್ಬರ ಜೋರು ಮಾಡಿದ್ದಾನೆ.
Advertisement
ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆ ಆಗುತ್ತಿದೆ. ಅಲ್ಲದೆ ಬಿಡುವು ಕೊಡದೇ ಗಾಳಿ-ಮಳೆ ಆಗುತ್ತಿರುವುದರಿಂದ ನದಿ, ಹಳ್ಳ, ತೊರೆ ಮತ್ತು ಝರಿಗಳಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದೆ. ಮೈ ಕೊರೆಯುವ ಚಳಿಯ ನಡುವೆ ಜಿಲ್ಲೆಯ ಜನತೆ ಕೊಡೆಗಳನ್ನು ಹಿಡಿದು ದೈನಂದಿನ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದಾರೆ.
Advertisement
Advertisement
ಬ್ರಹ್ಮಗಿರಿ, ಭಾಗಮಂಡಲ ಹಾಗೂ ತಲಕಾವೇರಿ, ವಿರಾಜಪೇಟೆ ಸೇರಿದಂತೆ ನಾಪೋಕ್ಲು ಭಾಗಗಳಲ್ಲಿ ಮಳೆಯ ಅಬ್ಬರ ತುಸು ಜೋರಾಗಿದೆ. ದಿನಗಳು ಕಳೆದಂತೆ ಕಾವೇರಿ ನದಿಯಲ್ಲೂ ನಿಧಾನವಾಗಿ ನೀರಿನ ಹರಿವು ಹೆಚ್ಚುತ್ತಿದೆ. ಸೋಮವಾರಪೇಟೆ ಭಾಗದಲ್ಲೂ ಉತ್ತಮ ಮಳೆ ಆಗುತ್ತಿರುವುದರಿಂದ ಹಾರಂಗಿ ಜಲಾಶಯದಲ್ಲೂ ನೀರಿನ ಒಳ ಹರಿವು ಹೆಚ್ಚುತ್ತಿದೆ.
Advertisement
ಹಾಗೆಯೇ ಜೋಳ ಹಾಗೂ ಭತ್ತ ನಾಟಿಗೆ ರೈತರು ಭೂಮಿಯನ್ನು ಹದಗೊಳಿಸಿಕೊಂಡು ಕೃಷಿ ಚಟುವಟಿಕೆಗೆ ಉತ್ಸಾಹದಲ್ಲಿದ್ದಾರೆ. ಮತ್ತೊಂದೆಡೆ ಮಳೆ ಬರಲಿ ಆದರೆ ಪ್ರವಾಹ ಸೃಷ್ಟಿಸದಿರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ಜೊತೆಗೆ ಹಾವೇರಿ ಜಿಲ್ಲೆಯಲ್ಲಿ ಇವತ್ತು ಸಾಧಾರಣ ಮಳೆಯಾಗಿದೆ. ಜಿಲ್ಲೆಯ ಶಿಗ್ಗಾಂವಿ, ಬ್ಯಾಡಗಿ, ಹಿರೇಕೆರೂರು ಹಾಗೂ ಹಾನಗಲ್ ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ಸಾಧಾರಣವಾಗಿ ಮಳೆಯಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಒಂದು ಗಂಟೆಗೂ ಅಧಿಕ ಹೊತ್ತು ಮಳೆರಾಯ ಅಬ್ಬರ ನಡೆಸಿದ್ದು, ಹಳ್ಳಿ ಮತ್ತು ನಗರಗಳಲ್ಲಿ ಮಳೆ ಅವಾಂತರ ಸೃಷ್ಟಿ ಮಾಡಿದೆ. ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದ್ದು, ಚರಂಡಿಗಳು ತುಂಬಿ ಹರಿದಿವೆ.