ತಿರುವನಂತಪುರಂ: ಕೋವಿಡ್ನಿಂದ ದಿನೇ ದಿನೇ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಕೊರೊನಾದ ಎರಡನೇ ಅಲೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್ಡೌನ್ ಮಾಡಬಹುದು ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಕೇರಳದ ಆರೋಗ್ಯ ಸಚಿವೆಗೆ ಗೌರವ ಸಲ್ಲಿಸಿದ ವಿಶ್ವಸಂಸ್ಥೆ
ಕೊರೊನಾ ಕಾಣಿಸಿಕೊಂಡ ಆರಂಭದಲ್ಲಿ ಕೇರಳ ರಾಜ್ಯದಲ್ಲಿ ಕೋವಿಡ್-19 ನಿಯಂತ್ರಣಕ್ಕಾಗಿ ಉತ್ತಮ ಮತ್ತು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆದರೆ ಈಗ ಜನರು ಬೇಜವಾಬ್ದಾರಿಯಿಂದ ಕೊರೊನಾ ಮಾರ್ಗಸೂಚಿಗಳನ್ನು ಗಾಳಿಗೆ ತೂರಿದ್ದಾರೆ. ಇದರಿಂದ ಕೊರೊನಾ ಗಂಭೀರತೆಯನ್ನು ಜನರು ಮರೆಯುತ್ತಿದ್ದಾರೆ. ಹೀಗೆ ಮುಂದುವರಿದರೆ ಎರಡನೇ ಬಾರಿಗೆ ಲಾಕ್ಡೌನ್ ಹೇರುವ ಜೊತೆಗೆ ಮತ್ತಷ್ಟು ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
Advertisement
Advertisement
ಮತ್ತೆ ಲಾಕ್ಡೌನ್ ತಪ್ಪಿಸಲು ರಾಜ್ಯವು ಉತ್ತಮವಾಗಿ ಪ್ರಯತ್ನಿಸುತ್ತಿದೆ. ಆದರೆ ಜನರು ಅಧಿಕಾರಿಗಳೊಂದಿಗೆ ಸಹಕರಿಸಲು ಸಿದ್ಧರಿಲ್ಲದಿದ್ದರೆ ರಾಜ್ಯದಲ್ಲಿ ಮತ್ತೆ ಸಂಪೂರ್ಣ ಲಾಕ್ಡೌನ್ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಕೆ.ಕೆ.ಶೈಲಜಾ ತಿಳಿಸಿದ್ದಾರೆ.
Advertisement
ರಾಜ್ಯದಲ್ಲಿ ಇದುವರೆಗೆ 1,67,939 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಇದರಲ್ಲಿ 1,14,530 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ಇನ್ನೂ ಕೊರೊನಾಗೆ ರಾಜ್ಯದಲ್ಲಿ 656 ಜನರು ಬಲಿಯಾಗಿದ್ದಾರೆ. ಇದು ಒಟ್ಟು ಪ್ರಕರಣಗಳಲ್ಲಿ ಶೇ.0.39 ಆಗಿದೆ ಎಂಬ ಮಾಹಿತಿ ನೀಡಿದರು.
Advertisement
20-40 ವಯಸ್ಸಿನವರಲ್ಲಿ ಹೆಚ್ಚಾಗಿ ಕೊರೊನಾ ಅತಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಕೋವಿಡ್ನಿಂದ ಸಾವನ್ನಪ್ಪಿದವರಲ್ಲಿ ಶೇ. 72 ರಷ್ಟು 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ಹೆಚ್ಚಿನ ಪ್ರಕರಣಗಳು ಕಂಡುಬಂದರೆ ಕೇರಳವು ಮತ್ತಷ್ಟು ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ ಎಂದು ಇದು ತೋರಿಸುತ್ತದೆ.
ಕೊರೊನಾ ಸೋಂಕು ಕಾಣಿಸಿಕೊಂಡ 10-15 ದಿನಗಳ ನಂತರ ಮತ್ತೆ ಕೋವಿಡ್ ಟೆಸ್ಟ್ ಮಾಡಲಾಗುತ್ತದೆ. ಆಗ ವರದಿಯಲ್ಲಿ ನೆಗೆಟಿವ್ ಬಂದರೆ ಮಾತ್ರ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತದೆ. ಆದರೆ ಕೇಂದ್ರದ ಸಲಹೆಯಂತೆ ರೋಗಿಗೆ ಯಾವುದೇ ರೋಗಲಕ್ಷಣಗಳು ಕಾಣಿಸಿಕೊಳ್ಳದಿದ್ದರೆ 4 ಅಥವಾ 5 ದಿನಗಳಲ್ಲಿ ಕೋವಿಡ್ ರೋಗಿಯನ್ನು ಬಿಡುಗಡೆ ಮಾಡಬಹುದು ಎಂದು ಸಚಿವರು ತಿಳಿಸಿದರು.
ವಿಶ್ವಸಂಸ್ಥೆ ಗೌರವಿಸಿತ್ತು:
ಹೆಮ್ಮಾರಿ ಕೋವಿಡ್-19 ಹರಡುವುದನ್ನು ನಿಯಂತ್ರಿಸಿದ್ದಕ್ಕಾಗಿ ಕೇರಳ ಆರೋಗ್ಯ ಸಚಿವ ಕೆ.ಕೆ.ಶೈಲಜಾ ಟೀಚರ್ ಅವರಿಗೆ ಈ ಹಿಂದೆ ವಿಶ್ವಸಂಸ್ಥೆ ವಿಶೇಷ ಗೌರವ ಸಲ್ಲಿಸಿತ್ತು. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಹಾಗೂ ಸಾಮಾನ್ಯ ಸಭೆಯ ಅಧ್ಯಕ್ಷರ ನೇತೃತ್ವ ವಹಿಸಿದ್ದ ಸಾರ್ವಜನಿಕ ಸೇವಾ ದಿನಾಚರಣೆಯಲ್ಲಿ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ಪಾಲ್ಗೊಂಡಿದ್ದರು. ಜೂನ್ 23ರಂದು ವರ್ಚುವಲ್ ಕಾರ್ಯಕ್ರಮದಲ್ಲಿ ಕೋವಿಡ್ ತಡೆಗಟ್ಟುವಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ವಿವಿಧ ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಭಾರತದಿಂದ ಕೇರಳದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರಿಗೆ ಮಾತ್ರ ಆಹ್ವಾನ ಸಿಕ್ಕಿತ್ತು.