ಉಡುಪಿ: ದೇಶದ ಬೆನ್ನೆಲುಬು ರೈತರ ಪರವಾದ ಬಜೆಟ್ ಮಂಡನೆಯಾಗಿದೆ. ಮೋದಿ ಸರ್ಕಾರ ಕೃಷಿ, ಆರೋಗ್ಯ, ರಕ್ಷಣೆ ಮೊದಲ ಆದ್ಯತೆ ನೀಡಿದೆ ಎಂದು ಸಚಿವ ಎಸ್ ಅಂಗಾರ ಹೇಳಿದರು
ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಭವಿಷ್ಯದ ಹಿತದೃಷ್ಟಿಯಿಂದ ಬಜೆಟ್ ಪೂರಕವಾಗಿದೆ. ಕೊರೊನಾ, ಪ್ರಾಕೃತಿಕ ವಿಕೋಪ ನಡುವೆ ಅತಿ ಉತ್ತಮ ಬಜೆಟ್ ಮಂಡನೆಯಾಗಿದೆ. ಬಿಜೆಪಿ ಭವಿಷ್ಯದ ಹಿತದೃಷ್ಟಿಯಿಂದ ಕೆಲಸ ಮಾಡುವ ಪಕ್ಷ. ದೇಶದ ಮುಂದಿನ ಅಭಿವೃದ್ಧಿ ಪೂರಕ ಬಜೆಟ್ ಇದಾಗಿದೆ ಎಂದು ವಿವರಿಸಿದರು.
Advertisement
Advertisement
ಕರ್ನಾಟಕ ರಾಜ್ಯ ಬಜೆಟ್ ಗೆ ಸಂಬಂಧಿಸಿದಂತೆ ಕರಾವಳಿ ಮೀನುಗಾರಿಕಾ ಬಂದರು ಭೇಟಿ, ಎರಡು ಬಾರಿ ಅಧಿಕಾರಿಗಳ ಸಭೆ, ಸಿಎಂ ನೇತೃತ್ವ ಸಭೆಯಲ್ಲಿ ಭಾಗಿಯಾಗಿದ್ದೇನೆ. ಮುಂದಿನ ಬಜೆಟ್ ಅನುಷ್ಠಾನಕ್ಕೆ ಜನರ ಬೇಡಿಕೆ, ಮನವಿಗಳ ಸೇರ್ಪಡೆಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
Advertisement
Advertisement
ಉಡುಪಿ ಜಿಲ್ಲೆಯ ಮೀನುಗಾರಿಕಾ ಬಂದರುಗಳಿಗೆ ಕಳೆದ ಒಂದು ವಾರದಲ್ಲಿ ಓಡಾಟ ನಡೆಸಿದ್ದೇನೆ. ಕಾಪು ಉಡುಪಿ ಕುಂದಾಪುರ ಬೈಂದೂರು ಮೀನುಗಾರರ ಜೊತೆ ಚರ್ಚೆ ನಡೆಸಿದ್ದೇನೆ. ಮನವಿಗಳನ್ನ ಪಡೆದು ಮಂಗಳವಾರ ಬೆಂಗಳೂರಿನಲ್ಲಿ ಸಿಎಂ ನೇತೃತ್ವದ ಸಭೆಯಲ್ಲಿ ಪಾಲ್ಗೊಂಡು ಅದನ್ನ ಚರ್ಚಿಸುತ್ತೇನೆ. ಮುಖ್ಯಮಂತ್ರಿಗಳ ಮುಂದೆ ಜನರ ಮನವಿಗಳ ನೀಡುತ್ತೇನೆ ಎಂದರು.
ಉಡುಪಿಯ ಪಡುಕರೆಯಲ್ಲಿ ಮರಿನಾ ನಿರ್ಮಾಣದ ಬಗ್ಗೆ ಸಾಕಷ್ಟು ಮಾಹಿತಿಗಳು ಬಂದಿದೆ. ಅಧಿಕಾರಿಗಳ ಜೊತೆ ಮಾತನಾಡಿ ಈ ಕುರಿತು ಮಾಹಿತಿಯನ್ನು ಸಂಗ್ರಹ ಮಾಡುತ್ತೇನೆ. ಮಲ್ಪೆಯಲ್ಲಿ ಸ್ಲಿಪ್ ವೇ ಸಮಸ್ಯೆ ಇದ್ದು ಮೀನುಗಾರರು ಈ ವಿಚಾರವನ್ನು ನನ್ನ ಗಮನಕ್ಕೆ ತಂದಿದ್ದಾರೆ. ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಸಮಸ್ಯೆಗೆ ಪರಿಹಾರ ಒದಗಿಸಿ ಕೊಡುತ್ತೇನೆ ಎಂದರು. ಬಿಜೆಪಿಯ ಜಿಲ್ಲಾ ಮುಖಂಡರುಗಳಾದ ಕುಯಿಲಾಡಿ ಸುರೇಶ್ ನಾಯಕ್, ಉದಯ ಕುಮಾರ್ ಶೆಟ್ಟಿ, ಯಶ್ ಪಾಲ್ ಸುವರ್ಣ, ಸುರೇಶ್ ಶೆಟ್ಟಿ ಗುರ್ಮೆ, ಜಿಲ್ಲಾ ಪಂಚಾಯತ್ ನ ಉಪಾಧ್ಯಕ್ಷೆ ಶೆಟ್ಟಿ ಶೀಲಾ ಕೆ ಶೆಟ್ಟಿ ಮತ್ತು ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.