ChikkamagaluruKarnatakaLatestMain Post

ಕೆಲಸಕ್ಕೆ ಹಾಜರಾದ ಸಿಬ್ಬಂದಿಗೆ ಮಾತ್ರ ಸೋಮವಾರ ಸಂಬಳ: ಡಿಸಿ

ಚಿಕ್ಕಮಗಳೂರು: ಮುಷ್ಕರ, ಜೀವ ಬೆದರಿಕೆ ಮಧ್ಯೆಯೂ ಸೇವೆಗೆ ಹಾಜರಾದ ಕೆಎಸ್‍ಆರ್‍ಟಿಸಿ ಚಾಲಕರು ಹಾಗೂ ನಿರ್ವಾಹಕರಿಗೆ ಮಾತ್ರ ಸೋಮವಾರ ಸಂಬಳ ನೀಡುವುದಾಗಿ ಕೆಎಸ್‍ಆರ್ ಟಿಸಿ ಡಿಸಿ ವೀರೇಶ್ ತಿಳಿಸಿದ್ದಾರೆ.

ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಆರನೇ ವೇತನ ಅಯೋಗದ ಜಾರಿಗೆ ಆಗ್ರಹಿಸಿ ಸಾರಿಗೆ ಸಿಬ್ಬಂದಿಗಳು ನಡೆಸುತ್ತಿರುವ ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರ ಹಾಗೂ ಜಿಲ್ಲಾ ಡಿಸಿಗಳು ಸಿಬ್ಬಂದಿಗಳಿಗೆ ಸೇವೆಗೆ ಮರಳುವಂತೆ ಮನವಿ ಮಾಡಿದ್ದಾರೆ. ಆದರೆ ಬಹುತೇಕ ಸಿಬ್ಬಂದಿ ಸೇವೆಗೆ ಹಾಜರಾಗದೆ ಮುಷ್ಕರಕ್ಕೆ ಮುಂದಾಗಿದ್ದಾರೆ. ಈ ಮಧ್ಯೆಯೂ ಕೆಲ ಸಿಬ್ಬಂದಿ ಸೇವೆಗೆ ಹಾಜರಾಗಿದ್ದಾರೆ. ಹೀಗಾಗಿ ಮುಷ್ಕರ, ಜೀವ ಬೆದರಿಕೆ, ಇತರ ಸಿಬ್ಬಂದಿಯಿಂದ ಬೈಸಿಕೊಂಡರೂ ಸೇವೆಗೆ ಬಂದಿದ್ದಾರೋ ಅಂತಹವರಿಗೆ ಸೋಮವಾರ ಸಂಬಳ ನೀಡುವುದಾಗಿ ಕೆಎಸ್‍ಆರ್ ಟಿಸಿ ಡಿಸಿ ವೀರೇಶ್ ಮಾಹಿತಿ ನೀಡಿದ್ದಾರೆ.

ಈಗಾಗಲೇ ಇಲಾಖೆಯ ಆಡಳಿತ ಸಿಬ್ಬಂದಿ ಹಾಗೂ ತಾಂತ್ರಿಕ ಸಿಬ್ಬಂದಿಗೆ ಏಪ್ರಿಲ್ 1 ಹಾಗೂ ಏಪ್ರಿಲ್ 5ರಂದು ಸಂಬಳ ಆಗಿದೆ. ಸೋಮವಾರ ಮುಷ್ಕರದ ಮಧ್ಯೆಯೂ ಸೇವೆಗೆ ಹಾಜರಾಗಿರೋ ಚಾಲಕರು ಹಾಗೂ ನಿರ್ವಾಹಕರಿಗೆ ಸಂಬಳ ನೀಡಲು ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರು ಸೂಚಿಸಿರುವುದಾಗಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ರಸ್ತೆಗೆ ಇಳಿಯುತ್ತಿರೋ ಬಸ್‍ಗಳ ಸಂಖ್ಯೆ ಕೂಡ ಏರಿಕೆಯಾಗ್ತಿದೆ. ಮುಷ್ಕರದ ಎರಡನೇ ದಿನ ಮೂರು, ಮೂರನೇ ದಿನ 6, ನಾಲ್ಕನೇ ದಿನ 36 ಬಸ್ ಹಾಗೂ ಐದನೇ ದಿನ 29 ಕೆಂಪು ಬಸ್‍ಗಳು ರಸ್ತೆಗೆ ಇಳಿದಿವೆ. ಹೀಗಾಗಿ ಜಿಲ್ಲೆಯ ಆರು ಡಿಪೋಗಳಲ್ಲಿ ಯಾರು ಸೇವೆಗೆ ಬಂದಿದ್ದಾರೋ ಅವರಿಗೆ ಸೋಮವಾರ ಸಂಬಳ ನೀಡುವುದಾಗಿ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

Back to top button