Connect with us

Crime

ಕೆಲಸಕ್ಕಾಗಿ ಮನೆಗೆ ಕರ್ಕೊಂಡು ಹೋಗಿ ಡ್ರಗ್ಸ್ ಕೊಟ್ಳು- 10 ಮಂದಿ ಕಾಮುಕರಿಂದ ಗ್ಯಾಂಗ್‍ರೇಪ್

Published

on

– ಸಂತ್ರಸ್ತೆಯ ಸಂಬಂಧಿಯಿಂದ್ಲೇ ಹೀನ ಕೃತ್ಯ
– ಅನೇಕ ದಿನಗಳವರೆಗೂ ಸಾಮೂಹಿಕ ಅತ್ಯಾಚಾರ

ಹೈದರಾಬಾದ್: 16 ವರ್ಷದ ಹುಡುಗಿಗೆ ಡ್ರಗ್ಸ್ ಕೊಟ್ಟು 10 ಮಂದಿ ಕಾಮುಕರು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಆಂಧ್ರ ಪ್ರದೇಶದ ರಾಜಮಂಡ್ರಿ ಜಿಲ್ಲೆಯಲ್ಲಿ ನಡೆದಿದೆ.

ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, 10 ಮಂದಿ ಆರೋಪಿಗಳನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದ 11ನೇ ಆರೋಪಿ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ಮಾಡುತ್ತಿದ್ದಾರೆ.

ಏನಿದು ಪ್ರಕರಣ?
ಸಂತ್ರಸ್ತೆಯ ದೂರದ ಸಂಬಂಧಿ ಆರೋಪಿ ಅನಿತಾ, ಅಂಗಡಿಯ ಕೆಲಸಕ್ಕಾಗಿ ಕಳುಹಿಸುವಂತೆ ಹುಡುಗಿಯ ತಾಯಿಯ ಬಳಿ ಮನವಿ ಮಾಡಿಕೊಂಡಿದ್ದಳು. ನಂತರ ಜೂನ್ 23 ರಂದು ಅನಿತಾ ಏಳು ಮಂದಿ ಕುಳಿತಿದ್ದ ಆಟೋದಲ್ಲಿ ಅಪ್ರಾಪ್ತೆಯನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾಳೆ. ಅಲ್ಲಿ ಸಂತ್ರಸ್ತೆಗೆ ಚಹಾದಲ್ಲಿ ಡ್ರಗ್ಸ್ ಮಿಕ್ಸ್ ಮಾಡಿ ಕುಡಿಸಿದ್ದಾಳೆ. ನಂತರ 10 ಮಂದಿ ಕಾಮುಕರು ಅಪ್ರಾಪ್ತೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿ ಅನಿತಾ ತನ್ನ ಮನೆಯಲ್ಲಿ ಅಪ್ರಾಪ್ತೆಯನ್ನು ಅನೇಕ ದಿನಗಳವರೆಗೂ ಇರಿಸಿಕೊಂಡಿದ್ದಳು. ಅಲ್ಲದೇ ಪ್ರತಿದಿನವೂ ಅಪ್ರಾಪ್ತೆಗೆ ಡ್ರಗ್ಸ್ ಕೊಟ್ಟು ಸಾಮೂಹಿಕವಾಗಿ ಅತ್ಯಾಚಾರ ಎಸಗಲಾಗಿದೆ. ಇತ್ತ ತಾಯಿ ಮಗಳು ತುಂಬಾ ದಿನಗಳಾದರೂ ಮನೆಗೆ ವಾಪಸ್ ಬಂದಿಲ್ಲ ಎಂದು ನಾಪತ್ತೆಯಾಗಿದ್ದಾಳೆ ಎಂದು ಜುಲೈ 12 ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಟಿಎಸ್‍ಎನ್ ರಾವ್ ತಿಳಿಸಿದ್ದಾರೆ.

ಅದೇ ದಿನ ಅಪ್ರಾಪ್ತೆಯನ್ನು ಬಿಟ್ಟು ಅನಿತಾ ತನ್ನ ಹಳ್ಳಿಗೆ ತೆರಳಿದ್ದಳು. ಜುಲೈ 15 ರಂದು ಸಂತ್ರಸ್ತೆ ತನ್ನ ತಾಯಿಯ ಬಳಿಗೆ ವಾಪಸ್ ಆಗಿದ್ದು, ನಡೆದ ವಿಚಾರವನ್ನು ಕುಟುಂಬದವರಿಗೆ ತಿಳಿಸಿದ್ದಾಳೆ. ಬಳಿಕ ಜುಲೈ 18 ರಂದು ಕುಟುಂಬವು ಈ ಕುರಿತು ದೂರು ದಾಖಲಿಸಿದ್ದರು. ನಾವು ಈ ಪ್ರಕರಣ ಸಂಬಂಧ ಎಫ್‍ಐಆರ್ ದಾಖಲಿಸಿದ್ದೇವೆ ಎಂದು ರಾವ್ ಹೇಳಿದರು.

ಆರೋಪಿ ಅನಿತಾ ಮಾನವ ಕಳ್ಳಸಾಗಾಣಿಕೆಯಲ್ಲಿ ಭಾಗಿಯಾಗಿದ್ದಾಳೆ. ಈಕೆಯ ಕೆಲಸದಲ್ಲಿ ಕೆಲ ಪುರುಷರು ಭಾಗಿಯಾಗಿದ್ದು, ಈ ವಿಚಾರ ಸಂತ್ರಸ್ತೆಯ ಕುಟುಂಬವರಿಗೆ ತಿಳಿದಿರಲಿಲ್ಲ. ಸದ್ಯಕ್ಕೆ ಸಂತ್ರಸ್ತೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುತ್ತಿದೆ ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಐಪಿಸಿ ಸೆಕ್ಷನ್ ಮತ್ತು ಪೋಕ್ಸೋ ಕಾಯ್ದೆಯಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Click to comment

Leave a Reply

Your email address will not be published. Required fields are marked *