ಚಾಮರಾಜನಗರ: ಸುಮಾರು 800 ಎಕರೆ ಕೃಷಿ ಭೂಮಿಗೆ ಆಸರೆಯಾಗಿದ್ದ ಕೆರೆ ಸರಿಯಾದ ನಿರ್ವಹಣೆ ಇಲ್ಲದೆ ಒಡೆದಿದ್ದು, ನಾಟಿ ಮಾಡಿದ ಗದ್ದೆಗಳಿಗೆ ನೀರು ನುಗ್ಗಿದೆ. ಫಸಲು ಭೂಮಿಯನ್ನು ಕಳೆದು ಕೊಂಡು ರೈತರು ಸಂಕಷ್ಟ ಎದುರಿಸುವಂತಾಗಿದೆ.
Advertisement
ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದ ಈ ಬೃಹತ್ ಕೆರೆ ಸುಮಾರು 750 ಎಕರೆಯಿದ್ದು, ಕಬಿನಿಯಿಂದ ಬಂದ ನೀರು ತುಂಬಿತ್ತು. ಕೆರೆಯ ಏರಿ ಒಡೆಯುವ ಮುನ್ಸೂಚನೆ ರೈತರಿಗೆ ಮೊದಲೆ ತಿಳಿದು, ಅಧಿಕಾರಿಗಳ ಗಮನಕ್ಕೂ ತಂದಿದ್ದರು. ಆದರೆ ಇದನ್ನು ಗಂಭೀರವಾಗಿ ಪರಿಗಣಿಸದೆ, ಇಂದು ಕೆರೆ ಏರಿ ಒಡೆಯಲು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.
Advertisement
Advertisement
ಕೆರೆ ಏರಿ ಒಡೆದ ಪರಿಣಾಮ ಸುಮಾರು 500 ಎಕರೆಗೂ ಹೆಚ್ಚು ಪ್ರದೇಶದಲ್ಲಿ ನಾಟಿ ಮಾಡಿದ್ದ ಭತ್ತದ ಬೆಳೆ ನಾಶವಾಗಿದೆ. ಕೆರೆಯನ್ನು ಹಲವರು ಒತ್ತುವರಿ ಮಾಡಿಕೊಂಡಿದ್ದೇ ಈ ಘಟನೆಗೆ ಕಾರಣವಾಗಿದೆ ಎಂದು ರೈತರು ದೂರಿದ್ದಾರೆ. ಕಳೆದ ವಾರವಷ್ಟೇ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಕೆರೆ ಒತ್ತುವರಿ ತೆರವು ಮಾಡಿ, ಮಾದರಿ ಕೆರೆ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು. ಹೀಗಾಗಿ ಇಂತಹ ಅಧಿಕಾರಿಗಳನ್ನು ಕೂಡಲೇ ವಜಾ ಮಾಡುವಂತೆ ರೈತರು ಆಗ್ರಹಿಸಿದ್ದಾರೆ.
Advertisement
ಕೆರೆ ಒಡೆದ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ನರೇಂದ್ರ, ಕೆರೆ ಒಡೆಯಲು ಅಧಿಕಾರಿಗಳೇ ಕಾರಣ. ಕೆರೆ ಒಡೆಯುವ ಮುನ್ಸೂಚನೆಯನ್ನು ರೈತರು ನೆನ್ನೆಯೇ ನೀಡಿದ್ದಾರೆ. ಏರಿಗೆ ಮಣ್ಣು ಹಾಕುವಂತೆ ಹೇಳಿದರೂ ಕೆಲಸ ಮಾಡಲಿಲ್ಲ. ಇಷ್ಟೊಂದು ಬೆಳೆ ನಾಶವಾಗಿದೆ. ಇದಕ್ಕೆ ಜವಾಬ್ದಾರರು ಯಾರು ಪ್ರಶ್ನಿಸಿದರು. ಇದೇ ವೇಳೆ ಬೆಳೆ ನಾಶವಾಗಿರುವ ರೈತರಿಗೆ ಪರಿಹಾರ ಒದಗಿಸುವ ಕುರಿತು ಭರವಸೆ ನೀಡಿದರು. ಅಧಿಕಾರಿಗಳ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದು, ತಾಲೂಕು ಆಡಳಿತಕ್ಕೆ ಸೂಚನೆ ನೀಡಿ ಬೆಳೆ ನಷ್ಟದ ವಿವರ ಒದಗಿಸುವಂತೆ ತಿಳಿಸಿದರು.
ಗದ್ದೆಗೆ ನೀರು ತುಂಬಿ ಬೆಳೆ ನಾಶವಾಗಿರುವುದು ಒಂದು ಕಡೆಯಾದರೆ, ಇದೇ ನೀರಲ್ಲಿ ಗ್ರಾಮದ ಯುವಕರು ಮೀನು ಹಿಡಿಯಲು ಕಾದಾಟ ನಡೆಸುತ್ತಿದ್ದರು.