ಚಿಕ್ಕಮಗಳೂರು: ಸಂಜೆ ಬಲೆ ಹಾಕಲು ಹೋದಾಗ ಚೆನ್ನಾಗಿದ್ದ ಮೀನುಗಳು ಬೆಳಗ್ಗೆ ಬಲೆ ತೆಗೆಯಲು ಹೋದಾಗ ಸತ್ತು ಕೆರೆ ದಡಕ್ಕೆ ತೇಲಿಕೊಂಡು ಬಂದಿರುವ ಘಟನೆ ನಗರದ ಆದಿಶಕ್ತಿ ನಗರದಲ್ಲಿ ನಡೆದಿದೆ.
ಚಿಕ್ಕಮಗಳೂರು ನಗರದ ಆದಿಶಕ್ತಿ ನಗರದ ನಿವಾಸಿ ಶಾಯಿನ್ ಎಂಬವರು ಸ್ಥಳೀಯ ಕೆರೆಯನ್ನ ಟೆಂಡರ್ ಕೂಗಿಕೊಂಡು ಮೀನುಗಳನ್ನ ಸಾಕಿದ್ದರು. ಐದು ವರ್ಷಗಳ ಅವಧಿಗೆ ಶಾಯಿನ್ ಅವರೇ ಕೆರೆಯ ಟೆಂಡರ್ ತೆಗೆದುಕೊಂಡಿದ್ದರು. ಸಾವಿರಾರು ಮೌಲ್ಯದ ಲಕ್ಷಾಂತರ ಮೀನುಗಳನ್ನ ಕೆರೆಯಲ್ಲಿ ಬಿಟ್ಟಿದ್ದರು. ಮೀನಿಗಾಗಿ ನಿನ್ನೆ ಸಂಜೆ ಬಲೆ ಹಾಕುವಾಗ ಮೀನುಗಳು ಚೆನ್ನಾಗಿದ್ದವು. ಏನೂ ಆಗಿರಲಿಲ್ಲ. ಆದರೆ ಇಂದು ಬೆಳಗ್ಗೆ ಮೀನಿಗಾಗಿ ಹಾಕಿದ್ದ ಬಲೆಯನ್ನ ತೆಗೆಯಲು ಹೋದಾಗ ಸಾವಿರಾರು ಮೀನುಗಳು ಸತ್ತು ಕೆರೆಯ ದಡಕ್ಕೆ ತೇಲಿಕೊಂಡು ಬಂದಿದ್ದವು. ಇದನ್ನ ಕಂಡ ಶಾಯಿನ್ ತೀವ್ರ ಆತಂಕಕ್ಕೀಡಾಗಿದ್ದಾರೆ.
ಯಾರೋ ದುಷ್ಕರ್ಮಿಗಳು ಕೆರೆಗೆ ವಿಷ ಹಾಕಿದ್ದಾರೆಂದು ಶಂಕಿಸಲಾಗಿದೆ. ಕೊರೊನಾ ಆತಂಕದಿಂದ ದೇಶವೇ ಲಾಕ್‍ಡೌನ್ ಆದಮೇಲೆ ಶಾಯಿನ್ ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೀಡಾಗಿದ್ದರು. ವ್ಯವಹಾರವೂ ಇಲ್ಲದೆ ಕಂಗಾಲಾಗಿದ್ದರು. ಮೀನುಗಳು ದಪ್ಪ ಆಗಿವೆ ಲಾಕ್‍ಡೌನ್ ಕ್ರಮೇಣ ಸಂಪೂರ್ಣ ಸಡಿಲಿಕೆಯಾಗ್ತಿದೆ. ವ್ಯಾಪಾರಕ್ಕೆ ಯಾವುದೇ ತೊಂದರೆ ಇಲ್ಲವೆಂದು ಮೀನುಗಳ ಹಿಡಿಯಲು ಕೆರೆಯಲ್ಲಿ ಬಲೆ ಹಾಕಿ ಬೆಳಗ್ಗೆ ಎದ್ದು ಹೋಗುವಷ್ಟರಲ್ಲಿ ಮೀನುಗಳು ಸತ್ತಿದ್ದು ಸಾಲ ಮಾಡಿ ಮೀನು ಮರಿಗಳನ್ನ ಸಾಕಿದ್ದ ಶಾಯಿನ್ ಜರ್ಜರಿತರಾಗಿದ್ದಾರೆ.
ಕೆರೆಯ ಟೆಂಡರ್ ಸಿಗದ ಕಾರಣ ಶಾಯಿನ್ ಅವರ ಮೇಲಿನ ಸಿಟ್ಟಿಗೆ ಕೆರೆಗೆ ವಿಷ ಹಾಕಿರಬಹುದೆಂದು ಅನುಮಾನಿಸಲಾಗಿದೆ. ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಗ್ರಾಮಾಂತರ ಪೊಲೀಸರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ