ಕುಶಾಲನಗರ ನೂತನ ತಾಲೂಕು ಅಸ್ತಿತ್ವಕ್ಕೆ ಆರ್ ಅಶೋಕ್ ಚಾಲನೆ

Public TV
1 Min Read
r ashok Kushalnagara

ಮಡಿಕೇರಿ: ಕಂದಾಯ ಸಚಿವರಾದ ಆರ್ ಅಶೋಕ್ ಅವರು ನೂತನವಾಗಿ ರಚನೆಗೊಂಡಿರುವ ಕೊಡಗು ಜಿಲ್ಲೆಯ ಐದನೇ ತಾಲೂಕು ಕುಶಾಲನಗರದ ಅಧಿಕೃತ ಕಾರ್ಯಾರಂಭಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಆರ್. ಅಶೋಕ ಅವರು “ಕುಶಾಲನಗರ ತಾಲೂಕು ಕೇಂದ್ರವಾಗಬೇಕು ಎಂದು ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು 20-30 ಬಾರಿ ಕಚೇರಿಗೆ ಬಂದು ವಿನಂತಿಸಿದ್ದಾರೆ. ಅಪ್ಪಚ್ಚು ರಂಜನ್ ಅವರ ಪ್ರಯತ್ನದಿಂದ ಕುಶಾಲನಗರ ತಾಲೂಕು ಕೇಂದ್ರವಾಗಿದೆ. ಇಲ್ಲಿನ ಶಾಸಕರ ಹೋರಾಟದ ಫಲವಾಗಿ ಕುಶಾಲನಗರ ತಾಲ್ಲೂಕು ಅಸ್ತಿತ್ವಕ್ಕೆ ಬಂದಿದೆ” ಎಂದು ಕಂದಾಯ ಸಚಿವರು ಹೇಳಿದರು.

“ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಪೊನ್ನಂಪೇಟೆ ಮತ್ತು ಕುಶಾಲನಗರ ನೂತನ ತಾಲೂಕು ಕೇಂದ್ರವಾಗಬೇಕು ಎಂದು ಅಧಿಸೂಚನೆ ಹೊರಡಿಸಿತ್ತು. ಅದರಂತೆ ಇಂದು ಕುಶಾಲನಗರ ತಾಲೂಕು ಅಸ್ತಿತ್ವಕ್ಕೆ ಬಂದಿದೆ. ತಾಲ್ಲೂಕು ಕೇಂದ್ರದಲ್ಲಿ ಗ್ರೇಡ್-1 ತಹಶೀಲ್ದಾರರು ಸೇರಿದಂತೆ ಒಟ್ಟು 12 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಜೊತೆಗೆ 50 ಲಕ್ಷ ರೂ. ಹಣ ಬಿಡುಗಡೆ ಮಾಡಲಾಗಿದೆ” ಎಂದು ಸಚಿವರು ತಿಳಿಸಿದರು. ಇದನ್ನೂ ಓದಿ: KRS ಸುರಕ್ಷಿತವಾಗಿದೆ, ಯಾವುದೇ ತೊಂದರೆ ಇಲ್ಲ: ಅಶೋಕ್

“ಸರ್ಕಾರ 2020-21 ನೇ ಸಾಲಿನಲ್ಲಿ ವಿಪತ್ತು ನಿರ್ವಹಣೆ, ಬೆಳೆ ಹಾನಿ ಪರಿಹಾರ, ಕೋವಿಡ್ ನಿರ್ವಹಣೆ ಹೀಗೆ ಹಲವು ವಿಪತ್ತನ್ನು ಎದುರಿಸಲು ಹೆಚ್ಚಿನ ಹಣ ಬಿಡುಗಡೆ ಮಾಡಿದೆ, ಕುಶಾಲನಗರ ತಾಲ್ಲೂಕು ಅಭಿವೃದ್ಧಿಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ನೆರವು ನೀಡಲಾಗುವುದು. ಹಂತ ಹಂತವಾಗಿ ಮೂಲ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಲಾಗುವುದು” ಎಂದು ಭರವಸೆ ನೀಡಿದರು.

Share This Article