ಜೊಹಾನ್ಸ್ಬರ್ಗ್: ಎರಡನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನದ ಫಖರ್ ಝಮಾನ್ ಅವರನ್ನು ದಕ್ಷಿಣ ಆಫ್ರಿಕಾದ ಕೀಪರ್ ಕ್ವಿಂಟನ್ ಡಿ ಕಾಕ್ ಅವರು ಚಮಕ್ ಮಾಡಿ ರನೌಟ್ ಮಾಡಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕಾ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 341 ರನ್ ಗಳಿಸಿತ್ತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ ಒಂದು ಕಡೆ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ್ದರೂ ಆರಂಭಿಕ ಆಟಗಾರ ಫಖರ್ ಜಮಾನ್ ಅವರು ಬಂಡೆಯಂತೆ ನಿಂತು ಪಾಕಿಸ್ತಾನದ ಮೊತ್ತವನ್ನು 300ರ ಗಡಿ ದಾಟಿಸಿದ್ದರು.
Advertisement
Advertisement
49.1ನೇ ಓವರ್ನಲ್ಲಿ ಎರಡು ರನ್ ಓಡುವ ಸಂದರ್ಭದಲ್ಲಿ 193 ರನ್ಗಳಿಸಿದ್ದ ಫಖರ್ ಜಮಾನ್ 9ನೇಯವರಾಗಿ ರನೌಟ್ ಆದರು. ಆದರೆ ರನೌಟ್ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಟಾಪಿಕ್ ಆಗಿದೆ.
Advertisement
Advertisement
ರನೌಟ್ ಆಗಿದ್ದು ಹೇಗೆ?
ಲುಂಗಿ ಎನ್ಗಿಡಿ ಅವರ ಎಸೆತವನ್ನು ಜಮಾನ್ ಲಾಂಗ್ ಆಫ್ಗೆ ಬೌಂಡರಿ ಹೊಡೆಯುವ ಯತ್ನದಲ್ಲಿ ಬಲವಾಗಿ ಹೊಡೆದರು. ಆದರೆ ಚೆಂಡನ್ನು ಮಾಕ್ರರ್ಮ್ ತಡೆದರು. ಬಾಲ್ ತಡೆದ ಕಾರಣ ಇಬ್ಬರು ಬ್ಯಾಟ್ಸ್ಮನ್ಗಳು ಎರಡು ರನ್ ಓಡಲು ಮುಂದಾದರು. ಈ ಸಂದರ್ಭದಲ್ಲಿ ಮಾಕ್ರರ್ಮ್ ಬಾಲನ್ನು ನೇರವಾಗಿ ಸ್ಟ್ರೈಕ್ನತ್ತ ಎಸೆದರು. ಬಾಲ್ ತನ್ನತ್ತ ಬರುವುದನ್ನು ಗಮನಿಸಿದ ಕೀಪರ್ ಕಾಕ್ ಕೈ ತೋರಿಸಿ ಬೌಲರ್ ಎಂಡ್ನತ್ತ ಎಸೆಯುವಂತೆ ಹೇಳಿದರು. ಕೀಪರ್ ಕಡೆಯಿಂದ ಬಂದ ಸಿಗ್ನಲ್ ನೋಡಿ ಫಖರ್ ಓಡುವ ವೇಗವನ್ನು ಕಡಿಮೆ ಮಾಡಿ ನಾನ್ಸ್ಟ್ರೈಕ್ನತ್ತ ನೋಡಿದರು. ಈ ವೇಳೆ ಬಾಲ್ ಸ್ಟ್ರೈಕ್ನತ್ತ ಬರುತ್ತಿದೆ ಎನ್ನುವುದು ತಿಳಿಯುವಷ್ಟರಲ್ಲಿ ಬಾಲ್ ನೇರವಾಗಿ ವಿಕೆಟ್ ಬಡಿದಾಗಿತ್ತು.
ರನೌಟ್ ಆದ ಬಳಿಕ ಫಖರ್ ನಿರಾಸೆಯಿಂದ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಒಂದು ವೇಳೆ ಫಖರ್ ಜಮಾನ್ ಈ ಪಂದ್ಯದಲ್ಲಿ 200 ರನ್ ಹೊಡೆದಿದ್ದರೆ ಪಾಕ್ ಪರ ಎರಡು ಬಾರಿ 200 ರನ್ಗಳ ಗಡಿಯನ್ನು ದಾಟಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿದ್ದರು. ಈ ಮೊದಲು ಜಿಂಬಾಬ್ವೆ ವಿರುದ್ಧ ಫಖರ್ 2018 ರಲ್ಲಿ ಔಟಾಗದೇ 210 ರನ್ ಹೊಡೆದಿದ್ದರು.
ಪಾಕಿಸ್ತಾನ ಅಂತಿಮವಾಗಿ 9 ವಿಕೆಟ್ ನಷ್ಟಕ್ಕೆ 324 ರನ್ ಗಳಿಸಿ ಸೋಲನ್ನು ಅನುಭವಿಸಿತು. ಅತ್ಯುತ್ತಮ ಆಟಕ್ಕೆ ಫಖರ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕ್ವಿಂಟನ್ ಡಿ ಕಾಕ್ ಅವರ ಈ ಆಟಕ್ಕೆ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಕೆಲವರು ಇದು ಮೋಸದಾಟ, ಕ್ರೀಡಾ ಸ್ಪೂರ್ತಿಯನ್ನು ಮರೆತು ಆಡಿದ್ದಾರೆ ಎಂದು ಟೀಕಿಸಿದರೆ ಇನ್ನು ಕೆಲವರು ಕಾಕ್ ಏನು ತಪ್ಪು ಮಾಡಿಲ್ಲ. ಬ್ಯಾಟ್ಸ್ಮನ್ ಆದವರಿಗೆ ರನ್ ಓಡುವುದರಲ್ಲೇ ಗಮನ ಇರಬೇಕು. ಮುಂದಿನ ದಿನಗಳಲ್ಲಿ ಎಲ್ಲ ಬ್ಯಾಟ್ಸ್ಮನ್ಗಳು ಇದನ್ನು ಪಾಠವಾಗಿ ತಿಳಿದುಕೊಳ್ಳಬೇಕು ಎಂದು ಕೆಲವರು ಹೇಳಿದ್ದಾರೆ.
Quinton doing Fakhar Zaman dirty with that run out. Cheeky by de Kock. pic.twitter.com/M2l0rweHa4
— omkar (@omviously) April 4, 2021