– ಅಮೃತ್ಸಿಟಿ ಯೋಜನೆಯಡಿ ಕಾಮಗಾರಿ
– ಒಂದೇ ಕಾಮಗಾರಿಗೆ ಎರಡು ಬಿಲ್?
ಗದಗ: ಅವಳಿ ನಗರವಾದ ಗದಗ – ಬೆಟಗೇರಿಯಲ್ಲಿ ಅಮೃತ್ ಸಿಟಿ ಯೋಜನೆ ಹೆಸರಿನಲ್ಲಿ ಅನೇಕ ಕಾಮಗಾರಿಗಳನ್ನು ಕೈಗೊಂಡು ವರ್ಷಗಳೇ ಉರುಳಿದರೂ, ಬಹುತೇಕ ಕಾಮಗಾರಿಕೆಗಳು ಆಮೆ ವೇಗದಲ್ಲಿ ಸಾಗುತ್ತಿದೆ. ಕ್ರಿಯಾ ಯೋಜನೆಯಲ್ಲಿದ್ದಂತೆ ಕಾಮಗಾರಿ ನಡೆಯದೇ ಅಕ್ರಮಕ್ಕೆ ನಗರಸಭೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಆಸ್ಪದ ನೀಡುತ್ತಿದ್ದಾರೆ ಎಂದು ಅವಳಿ ನಗರದ ಜನರು ಆರೋಪಿಸುತ್ತಿದ್ದಾರೆ.
Advertisement
ಗದಗ ನಗರದ ಹಾತಲಗೇರಿ ನಾಕಾದಲ್ಲಿರುವ ರಾಘವೇಂದ್ರ ಸ್ವಾಮಿ ಮಠದಿಂದ ಕಣಗಿನಹಾಳ ರಸ್ತೆಯವರೆಗೆ 1.3 ಕಿಲೋಮೀಟರ್ವರೆಗೆ ರಾಜಕಾಲುವೆ ಅಭಿವೃದ್ಧಿ ಮಾಡಲಾಗುತ್ತಿದೆ. ಒಟ್ಟು 40 ಅಡಿ ಅಗಲವಾಗಿರುವ ರಾಜ ಕಾಲುವೆಯಲ್ಲಿ ಕೇವಲ 10 ಅಡಿ ಕಾಲುವೆ ನಿರ್ಮಾಣ ಮಾಡುತ್ತಿದ್ದಾರೆ. ಉಳಿದ 30 ಅಡಿ ಜಾಗವನ್ನ ಖಾಲಿ ಬಿಡುತ್ತಿರುವುದು ಏಕೆ ಎಂಬುವ ಪ್ರಶ್ನೆ ಇದೀಗ ಸ್ಥಳೀಯರನ್ನು ಕಾಡುತ್ತಿದೆ. ಅತಿ ದೊಡ್ಡದಾದ ಈ ರಾಜಕಾಲುವೆಗೆ ಸುತ್ತಮುತ್ತಲಿನ 5 ರಿಂದ 6 ಕಿಲೋಮೀಟರ್ ವರೆಗಿನ ನೀರು ಹರಿದು ಬರುತ್ತದೆ. ಇಂತಹ ನಾಲೆಯನ್ನು ಸಂಕುಚಿತಗೊಳಿಸಿ ಮತ್ತಷ್ಟು ಅನಾಹುತವಾದರೆ ಯಾರು ಹೊಣೆ ಎಂಬ ಪ್ರಶ್ನೆ ಎದ್ದಿದೆ.
Advertisement
Advertisement
ಕಳೆದ 2 ವರ್ಷದ ಹಿಂದೆ ನಗರೋತ್ಥಾನ ಯೋಜನೆಯಲ್ಲಿ ಸುಮಾರು 1.3 ಕೋಟಿ ರೂಪಾಯಿ ಖರ್ಚು ಮಾಡಿ ಅಭಿವೃದ್ಧಿ ಪಡಿಸಲಾಗಿದೆ. ಈಗ ಅಮೃತ್ ಸಿಟಿ ಯೋಜನೆಯಲ್ಲಿ ಮತ್ತೆ ಅದೇ ಕಾಲುವೆಗೆ 1.5 ಕೋಟಿ ರೂಪಾಯಿ ವೆಚ್ಚದಲ್ಲಿ 1.3 ಕಿಲೋಮೀಟರ್ ವರೆಗೆ ಕಾಮಗಾರಿ ಕೈಗೆತ್ತಿಕೊಂಡಿದೆ. ಒಂದೇ ಕಾಲುವೆ ಎರಡು ಯೋಜನೆಯಲ್ಲಿ ಬಿಲ್ ತೆಗೆಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
Advertisement
ಕೋಟಿ ಕೋಟಿ ಹಣ ಖರ್ಚು ಮಾಡಿ ಚಿಕ್ಕ ಕಾಲುವೆ ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ಇಡೀ ರಾಜಕಾಲುವೆ ಪ್ರವಾಹ ಬಂದು ಸಾಕಷ್ಟು ಅವಾಂತರಗಳನ್ನು ಸೃಷ್ಟಿ ಮಾಡುತ್ತಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ರಾಜಕಾಲುವೆ ಅವಾಂತರದಿಂದ ಒಂದಿಲ್ಲ ಒಂದು ಸಮಸ್ಯೆಗಳಾಗುತ್ತಿದೆ. ರಸ್ತೆಗೆ ಅಡ್ಡಲಾಗಿ ಪ್ರವಾಹ ಬಂದು ಸಂಚಾರಕ್ಕೆ ಅಡೆತಡೆ ಉಂಟಾಗುತ್ತದೆ. ಈ ಹಿಂದೆ ಅಂಚೆ ಇಲಾಖೆ ಓರ್ವ ವ್ಯಕ್ತಿ ಕಾಲುವೆ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ಸಾಕಷ್ಟು ಬೈಕ್ಗಳು, ವಾಹನಗಳು ಕೊಚ್ಚಿ ಹೋಗಿವೆ. ಅಂತಹದರಲ್ಲಿ ಕಾಲುವೆ ಒತ್ತುವರಿ ಮಾಡಿಕೊಳ್ಳುವ ಭೂಗಳ್ಳರಿಗೆ ಮತ್ತಷ್ಟು ಅನುಕೂಲ ಮಾಡಿಕೊಟ್ಟಂತಾಗಿದೆ. ಹೀಗಾಗಿ ಇದರಲ್ಲಿ ಅಕ್ರಮ ನಡೆದಿರುವ ಬಗ್ಗೆ ಅನುಮಾನ ಮೂಡಿದೆ. ಈ ವಿಚಾರವಾಗಿ ತನಿಖೆ ಮಾಡಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜನ ಒತ್ತಾಯಿಸುತ್ತಿದ್ದಾರೆ.
ಅವೈಜ್ಞಾನಿಕವಾಗಿರುವ ಕಾಮಗಾರಿಯನ್ನು ಕೂಡಲೇ ಕೈ ಬಿಡಬೇಕು. ಇಲ್ಲವಾದರೆ ಮುಂದಾಗುವ ಅನಾಹುತಗಳಿಗೆ ನಗರ ಸಭೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕಾರಣರಾಗುತ್ತಾರೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. ಆದರೆ ಗದಗದ ಈ ರಾಜಕಾಲುವೆ ಬಗ್ಗೆ ಅಧಿಕಾರಿಗಳು ಹೇಳುವುದೇ ಬೇರೆಯಾಗಿದೆ. ಸಂಬಂಧಿಸಿದ ಅಧಿಕಾರಿಗಳು ಹಾರಿಕೆ ಉತ್ತರ ನೀಡಿ ಕೈಗೆ ಸಿಗದೇ ಜಾರಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ನಾಲೆ ದೊಡ್ಡದಾಗಿರುವುದರಿಂದ ಮುಳ್ಳು-ಕಂಠಿಗಳು ಬೆಳೆದು ಪ್ರವಾಹಕ್ಕಿಡಾಗುತ್ತಿದೆ. ಅದನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹೋಗಲು ಚರಂಡಿ ನಿರ್ಮಿಸುತ್ತಿದ್ದೇವೆ ಅಂತಿದ್ದಾರೆ.
ನಾಲೆ, ಚರಂಡಿ, ರಾಜಕಾಲುವೆ, ಬಾವಿ, ಕೆರೆ-ಕಟ್ಟೆಗಳನ್ನು ಮುಚ್ಚುವುದು, ಒತ್ತುವರಿ ಮಾಡಬಾರದು ಎಂದು ಕೋರ್ಟ್ ಹೇಳುತ್ತದೆ. ಆದರೆ ಗದಗದಲ್ಲಿ ಭೂಗಳ್ಳರು ಕೋರ್ಟ್ ನಿಯಮ ಉಲ್ಲಂಘಿಸಿ ರಾಜಕಾಲುವೆ ನೀರಿಗೆ ಬಾಯಿ ಹಾಕಿರುವುದು ಎಷ್ಟು ಸರಿ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.