– ಅಂದು ಚೈತ್ರಶ್ರೀ, ಇಂದು ಸುಜಾತ ಒಂದೇ ಹಾದಿಯಲ್ಲಿ ಇಬ್ಬರು
ಚಿಕ್ಕಮಗಳೂರು: ನಮ್ದು ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುವ ಚಿಕ್ಕಮಗಳೂರಿನ ಬಿಜೆಪಿಯಲ್ಲಿ ಅಸಮಾಧಾನ ಹೊಗೆಯಾಡ್ತಿದ್ದು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಪಕ್ಷದ ಸದಸ್ಯರೇ ರೆಬೆಲ್ ಆಗಿದ್ದು ಸಾಮಾನ್ಯ ಸಭೆಗೆ ಸಾರಾಸಗಟಾಗಿ ಗೈರಾಗಿದ್ದಾರೆ. ಇದನ್ನ ಗಮನಿಸಿದ ಜಿಲ್ಲೆಯ ಜನ ಅಂದು ಚೈತ್ರಶ್ರೀಯದ್ದು ಇದೇ ಕಥೆಯಾಗಿತ್ತು, ಇಂದು ಸುಜಾತ ಕೃಷ್ಣಪ್ಪರದ್ದು ಅದೇನಾ ಅಂತಿದ್ದಾರೆ.
ಮಂಗಳವಾರದ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಕರೆದಿದ್ದ ಸಾಮಾನ್ಯ ಸಭೆಗೆ ಬಿಜೆಪಿ ಪಕ್ಷದ ಸದಸ್ಯರು ಸಾಮೂಹಿಕವಾಗಿ ಗೈರಾಗುವ ಮೂಲಕ ಪಕ್ಷದೊಳಗಿನ ಭಿನ್ನಮತ ಸಾಮಾನ್ಯ ಸಭೆಯಲ್ಲಿ ಸ್ಫೋಟಗೊಂಡಿದ್ದು, ವಿಪಕ್ಷದವರ ಎದುರು ಶಿಸ್ತಿನ ಪಕ್ಷ ನಗೆಪಾಟಲಿಗೀಡಾಗಿದೆ.
Advertisement
ಸಾಮಾನ್ಯ ಸಭೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಸದಸ್ಯರು ಆಗಮಿಸಿದ್ದರು. ಆದರೆ, ಬಿಜೆಪಿ ಸದಸ್ಯರು ಜಿಪಂ ಸದಸ್ಯರ ವಿರುದ್ಧ ಅಸಮಾಧಾನ ಹೊರಹಾಕಿ ಗೈರಾಗಿದ್ದರು. ಕೊರೋನಾ ಕಾರಣದಿಂದ ಕಳೆದ ನಾಲ್ಕೈದು ತಿಂಗಳಿನಿಂದ ಯಾವುದೇ ಸಭೆ ನಡೆದಿರಲಿಲ್ಲ. ಜಿಲ್ಲೆಯ ಸಮಸ್ಯೆ ಹಾಗೂ ಅಭಿವೃದ್ಧಿ ಕುರಿತು ಸಭೆಯಲ್ಲಿ ಚರ್ಚೆ ನಡೆಯಬೇಕಿತ್ತು. ಆದರೆ, ಬಿಜೆಪಿಗರ ಒಳ ಕಿತ್ತಾಟದಿಂದ ಯಾವುದೇ ಚರ್ಚೆಗಳು ನಡೆದಿಲ್ಲ.
Advertisement
Advertisement
ಭಿನ್ನಮತ ಯಾಕೆ?
2016ರ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಜಿಲ್ಲೆಯ 34 ಕ್ಷೇತ್ರಗಳಲ್ಲಿ 25 ಕ್ಷೇತ್ರಗಳಲ್ಲಿ ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಅಧಿಕಾರದ ಗದ್ದುಗೆ ಏರಿತ್ತು. ಅಧ್ಯಕ್ಷರ ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿ ಮೀಸಲಾಗಿತ್ತು. ಆಗ ಪರಿಶಿಷ್ಟ ಜಾತಿಗೆ ಸೇರಿದ ಇಬ್ಬರು ಸದಸ್ಯರು ಬಿಜೆಪಿಯಲ್ಲಿದ್ದರು. ಒಬ್ಬರು ತರೀಕೆರೆ ತಾಲೂಕಿನ ರಂಗೇನಹಳ್ಳಿ ಕ್ಷೇತ್ರದ ಚೈತ್ರಶ್ರೀ ಮಾಲತೇಶ್, ಮತ್ತೊಬ್ಬರು ಕೊಪ್ಪ ತಾಲೂಕಿನ ಮೇಗುಂದ ಕ್ಷೇತ್ರದ ಸುಜಾತ ಕೃಷ್ಣಪ್ಪ.
Advertisement
ಮೊದಲ ಅವಧಿಗೆ ಅಧ್ಯಕ್ಷರಾಗುವರು 20 ತಿಂಗಳು, ಎರಡನೇ ಅವಧಿಗೆ ಅಧ್ಯಕ್ಷರಾಗುವವರು 40 ತಿಂಗಳು ಎಂದು ಪಕ್ಷ ನಿರ್ಧರಿಸಿ ಮೊದಲ ಅವಧಿಗೆ ಚೈತ್ರಶ್ರೀ ಮಾಲತೇಶ್ ಅಧ್ಯಕ್ಷರಾಗಿದ್ದರು. ಎರಡನೇ ಅವಧಿಗೆ ಅಧ್ಯಕ್ಷರಾದ ಸುಜಾತ ಕೃಷ್ಣಪ್ಪ ಈಗ ರಾಜೀನಾಮೆ ನೀಡಲು ಹಿಂದೇಟು ಹಾಕುತ್ತಿರುವುದರಿಂದ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ.
ರಾಜೀನಾಮೆ ನೀಡುತ್ತಿಲ್ಲ ಯಾಕೆ?
ಮಾತುಕತೆಯಾದಂತೆ ಸುಜಾತ ಕೃಷ್ಣಪ್ಪ ಇನ್ನೂ 40 ತಿಂಗಳು ಆಡಲಿತ ನಡೆಸಿಲ್ಲ. 28 ತಿಂಗಳು ಆಡಳಿತ ನಡೆಸಿದ್ದಾರೆ. ಈಗಲೇ ರಾಜೀನಾಮೆ ಕೇಳುತ್ತಿರೋದು ಅಧ್ಯಕ್ಷರ ಕಣ್ಣನ್ನ ಕೆಂಪಾಗಿಸಿದೆ. ಆದರೆ, ಅಧ್ಯಕ್ಷರು ನಾನು ಕಾರ್ಯಕರ್ತೆಯಾಗಿರಲು ಬಯಸುತ್ತೇನೆ. ಪಕ್ಷದ ಮೇಲೆ ಗೌರವವಿದೆ. ರಾಜೀನಾಮೆಗೆ ಸಿದ್ಧವಿದ್ದೇನೆ. ಆದರೆ, ಇದೊಂದು ಸಾಮಾನ್ಯ ಸಭೆಗೆ ಅವಕಾಶ ಮಾಡಿಕೊಡಿ ಎಂದು ಕೇಳಿಕೊಂಡರೂ ಸ್ಪಂದಿಸಿಲ್ಲ ಎಂದು ಪಕ್ಷದ ಜಿಲ್ಲಾಧ್ಯಕ್ಷರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಪಕ್ಷದ ಜಿಲ್ಲಾಧ್ಯಕ್ಷರ ನಡೆ-ನುಡಿ ಸರಿ ಇಲ್ಲ ಎಂದು ಅಧ್ಯಕ್ಷರ ವಿರುದ್ಧ ಕಿಡಿಕಾರಿದ್ದಾರೆ.
ಚೈತ್ರಶ್ರೀ ಉಚ್ಛಾಟನೆ:
ಮದುವೆಯಾದ ಮೂರೇ ತಿಂಗಳು, 24ನೇ ವಯಸ್ಸಿಗೆ ಚೈತ್ರಶ್ರೀ ಮಾಲತೇಶ್ ಮೊದಲ ಅವಧಿಗೆ ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿಗೆ ಅಧ್ಯಕ್ಷರಾಗಿದ್ದರು. ಮೊದಲು ಅಧ್ಯಕ್ಷರಾಗುವವರು 20 ತಿಂಗಳು, ನಂತರ ಆಗುವವರು 40 ತಿಂಗಳು ಎಂದು ಒಪ್ಪಂದವಾಗಿತ್ತು. ಆದರೆ, ಅಧ್ಯಕ್ಷರಾಗುವಾಗ ನಾನು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷ ಹೇಳಿದ ಕೂಡಲೇ ರಿಸೈನ್ ಮಾಡ್ತೀನಿ ಅಂತಿದ್ದ ಚೈತ್ರಶ್ರೀ, 20 ತಿಂಗಳ ಅಧಿಕಾರದ ಬಳಿಕ ರಾಜೀನಾಮೆ ಕೊಡೋದಕ್ಕೆ ಸಿಕ್ಕಾಪಟ್ಟೆ ಸೈಕಲ್ ಹೊಡೆಸಿ ಪಕ್ಷ ಮುಜುಗರಕ್ಕೀಡಾಗುವಂತೆ ಮಾಡಿದ್ರು.
ಕೊನೆಗೆ ಪಕ್ಷದಿಂದ ಉಚ್ಛಾಟನೆ ಮಾಡಿ ಕೆಳಗಿಳಿಸಬೇಕಾಯ್ತು. ಈಗಲೂ ಪಕ್ಷದ ಸದಸ್ಯರು ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ವಿರುದ್ಧ ರೆಬಲ್ ಆಗಿದ್ದಾರೆ. ಅಷ್ಟೆ ಅಲ್ಲದೆ, ಜಿಪಂ ಅಧ್ಯಕ್ಷರು ಬಿಜೆಪಿ ಜಿಲ್ಲಾಧ್ಯಕ್ಷರ ವಿರುದ್ಧ ಕಿಡಿಕಾರಿದ್ದಾರೆ. ಒಂದು ವೇಳೆ, ಇವರೂ ಕೂಡ ರಾಜೀನಾಮೆ ನೀಡಲು ಮೀನಾಮೇಶ ಎಣಿಸಿದ್ರೆ ಪಕ್ಷ ಯಾವ ನಿರ್ಧಾರ ಕೈಗೊಳ್ಳುತ್ತೋ ಕಾದುನೋಡಬೇಕು.
ಜಿಲ್ಲಾಧ್ಯಕ್ಷ ಕಿಡಿ :
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕರೆದಿದ್ದ ಸಾಮಾನ್ಯ ಸಭೆಗೆ ಬಿಜೆಪಿ ಜಿಲ್ಲಾ ಪಂಚಾಯಿತಿ ಸದಸ್ಯರು ಗೈರಾಗಿದ್ದು, ಇಲ್ಲಿ ಜಾತಿ ರಾಜಕಾರಣವೂ ಕೆಲಸ ಮಾಡುತ್ತಿದೆ ಎಂದು ಜಿಪಂ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಆರೋಪಿಸಿದ್ದಾರೆ. ಆದರೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಈ ಆರೋಪವನ್ನ ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ ತಿರಸ್ಕರಿಸಿದ್ದಾರೆ.
ಪಕ್ಷದ ರೀತಿ-ನೀತಿ ಚೌಕಟ್ಟಿನೊಳಗೆ ಪಕ್ಷ ಅವರಿಗೆ ಷರತ್ತುಗಳನ್ನ ಹಾಕಿದೆ. ಆದರೆ, ಅವರು ಕಳೆದ ಆರು ತಿಂಗಳಿಂದ ಬಿಜೆಪಿ ಪಕ್ಷಕ್ಕೆ ಚಾಲೆಂಜ್ ಮಾಡುವ ರೀತಿಯಲ್ಲಿದ್ದಾರೆ. ಅಧ್ಯಕ್ಷರಾದ ಮೇಲೆ ನಾನೇ ಎಲ್ಲಾ ಎಂಬಂತೆ ವರ್ತಿಸಿದ್ದಾರೆ. ಅಂತಹಾ ಭಾವನೆಗಳಿಗೆ ಬಿಜೆಪಿಯಲ್ಲಿ ಯಾವುದೇ ಬೆಲೆ ಇಲ್ಲ. ಹಾಗಾಗಿ, ಜಿಲ್ಲಾ ಪಂಚಾಯಿತಿ ಸದಸ್ಯರು ಈ ನಿರ್ಧಾರಕ್ಕೆ ಬಂದಿದ್ದಾರೆ. ಅವರು ಕುರ್ಚಿಗೆ ಅಂಟಿಕೊಂಡಿರೋ ಪರಿಣಾಮ ಈ ರೀತಿ ಆರೋಪಗಳನ್ನ ಮಾಡುತ್ತಿದ್ದಾರೆ. ಆ ರೀತಿಯ ಆಲೋಚನೆಗಳು ಬಿಜೆಪಿಗೆ ಇಲ್ಲ. ಕುರ್ಚಿ ಹಾಗೂ ಅಧಿಕಾರ ವ್ಯಕ್ತಿಗೆ ಯಾವ ರೀತಿ ತಲೆ ಕೆಡಿಸುತ್ತೆ ಅನ್ನೋದಕ್ಕೆ ಇದೇ ಉದಾಹರಣೆ ಎಂದು ಜಿಪಂ ಅಧ್ಯಕ್ಷರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.