ಗದಗ: ಬೆಲೆ ಏರಿಕೆ ಹಾಗೂ ರೈತ ಕೃಷಿ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಫೆ.25 ರಂದು ಬೃಹತ್ ಟ್ರ್ಯಾಕ್ಟರ್ ರ್ಯಾಲಿ ನಡೆಸಿದ್ದರು. ಈ ವೇಳೆ ನೂರಾರು ಟ್ರ್ಯಾಕ್ಟರ್ ಸಮೇತ ಡಿಸಿ ಕಚೇರಿಗೆ ನುಗ್ಗಿದ್ದ ಮಾಜಿ ಸಚಿವ ಎಚ್.ಕೆ ಪಾಟೀಲ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಸಣ್ಣ ಕೈಗಾರಿಕೆ, ವಾರ್ತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ ಪಾಟೀಲ್ ಗರಂ ಆಗಿದ್ದಾರೆ.
ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ವರ್ತನೆಗೆ ಎಸ್.ಪಿ ಯತೀಶ್ ಎನ್ ಅವರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು. ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಗೆ ಒಳನುಗ್ಗಲು ಪರವಾನಿಗೆ ಕೊಟ್ಟವರು ಯಾರು?. ಕಾಂಗ್ರೆಸ್ ಸರ್ಕಾರ ಇದ್ದಾಗ ನಮ್ಮನ್ನು ಯಾವ ರೀತಿ ನಡೆಸಿಕೊಂಡಿದ್ದಾರೆ ಎಂಬ ಮಾಹಿತಿ ನಮಗಿಲ್ವಾ? ಗದಗ ಮತ್ತೊಂದು ನವದೆಹಲಿ ಮಾಡಲು ಹೊರಟಿದ್ದಾರಾ? ಮುಂದಿನ ದಿನಗಳಲ್ಲಿ ಕತ್ತೆ ಮೆರವಣಿಗೆ ಮಾಡಿ ಕತ್ತೆಗಳನ್ನು ಒಳಗೆ ಬಿಡ್ತಾರೆ. ನೋಡಿಕೊಂಡು ಸುಮ್ಮನಿರಿ ಅಂತ ಆಕ್ರೋಶ ವ್ಯಕ್ತಪಡಿಸಿದರು. ಈ ಮೂಲಕ ಸಚಿವರು ಪರೋಕ್ಷವಾಗಿ ಕಾಂಗ್ರೆಸ್ಸಿನವರನ್ನು ಕತ್ತೆಗಳು ಎಂದು ಜರಿದರು.
Advertisement
Advertisement
ಎಚ್.ಕೆ ಪಾಟೀಲ್ ಹಿರಿಯ ನಾಯಕರು, ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿದ್ದರು. ಇಂತಹ ವರ್ತನೆ ಎಚ್.ಕೆ ಪಾಟೀಲ್ ಅವರಿಗೆ ಶೋಭೆ ತರಲ್ಲ. ಪ್ಯಾರಲಲ್ ಅಡ್ಮಿನಿಸ್ಟ್ರೇಶನ್ ಮಾಡಲು ಅವಕಾಶ ಕೊಡಬಾರದು. ಕರ್ತವ್ಯ ಲೋಪ ಎಸಗಿರುವ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವಂತೆ ಎಸ್.ಪಿ ಗೆ ಸಚಿವರು ಖಡಕ್ ಸೂಚನೆ ನೀಡಿದರು.
Advertisement
ಈ ಘಟನೆಯಿಂದ ಬಂದೊಬಸ್ತ್ ನಲ್ಲಿದ್ದಂತಹ ಡಿವೈಎಸ್ಪಿ ಪ್ರಹ್ಲಾದ್, ಗ್ರಾಮೀಣ ಸಿಪಿಐ ರವಿಕುಮಾರ್ ಕಪ್ಪತ್ತನವರ್, ಪಿ.ಎಸ್.ಐ ಹಾಗೂ ಶಹರ ಠಾಣೆ ಸಿಪಿಐ ಪಿ.ವಿ ಸಾಲಿಮಠ ಹಾಗೂ ಅನೇಕ ಸಿಬ್ಬಂದಿ ತಲೆದಂಡವಾಗುವ ಲಕ್ಷಣಗಳು ಗೋಚರವಾಗುತ್ತಿವೆ.
Advertisement