Connect with us

Bengaluru City

ಕಾಂಗ್ರೆಸ್ಸಿನವರು ತಮ್ಮ ಬೇಳೆ ಬೇಯಿಸಿಕೊಳ್ಳಲು ನನ್ನನ್ನು ಪೆದ್ದು ಮಾಡಲು ಮುಂದಾದಿರಿ: ಎಚ್‍ಡಿಕೆ

Published

on

– ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ

ಬೆಂಗಳೂರು: ಕಾಂಗ್ರೆಸ್ಸಿನವರು ತಮ್ಮ ಬೇಳೆ ಬೇಯಿಸಿಕೊಳ್ಳಲು ನನ್ನನ್ನು ಪೆದ್ದು ಮಾಡಲು ಮುಂದಾದಿರಿ. ಆದರೆ ನಾಡಿನ ರೈತರ ಹಿತ ಕಾಯಲು ನಾನು ಜಾಣತನ ಪ್ರದರ್ಶಿಸಿದೆ ಎಂಬುದು ನೆನಪಿರಲಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸಿಎಂ ಆದಾಗ ಕಾಂಗ್ರೆಸ್ ನೈತಿಕತೆ ಚೆನ್ನಾಗಿತ್ತೆ? ಎಂದು ಕಾಂಗ್ರೆಸ್ ಟ್ವೀಟ್ ಮಾಡಿತ್ತು. ಈ ಟ್ವೀಟ್‍ಗೆ ಕುಮಾರಸ್ವಾಮಿ ಕೆಂಡಾಮಂಡಲವಾಗಿದ್ದು, ಸರಣಿ ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೊದಲಿಗೆ “ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸಿಎಂ ಆದಾಗ ಕಾಂಗ್ರೆಸ್ ನೈತಿಕತೆ ಚೆನ್ನಾಗಿತ್ತೆ? ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. ನನ್ನನ್ನು ನೇರವಾಗಿ ಪ್ರಶ್ನಿಸಲಾಗದ ಕಾಂಗ್ರೆಸ್ಸಿನ ಅತಿರಥ ಮಹಾರಥರು ಪಕ್ಷದ ಟ್ವಿಟ್ಟರ್ ಖಾತೆ ಮೂಲಕ ದಾಳಿ ಮಾಡಿ ಓಡಿ ಹೋಗಿದ್ದಾರೆ. ಆಯ್ತು, ಚರ್ಚೆ ಆರಂಭವಾಗಿದೆ. ಅದನ್ನು ನಾನು ಪೂರ್ತಿಗೊಳಿಸುತ್ತೇನೆ” ಎಂದಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯದ ನಾಯಕರು ಜೆಡಿಎಸ್ ಎದುರು ನಡು ಬಗ್ಗಿಸಿ ನಾವು ಬೇಡವೆಂದರೂ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಿಸಿದಿರಿ. ಆನಂತರ ಒತ್ತಡಗಳನ್ನು ಹೇರಿ ಬ್ಯಾಕ್ ಸೀಟ್ ಡ್ರೈವಿಂಗ್ ಮಾಡಿದಾಗ ಕಾಂಗ್ರೆಸ್ಸಿ ನೈತಿಕತೆ ಎಲ್ಲಿತ್ತು? ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

“ರೈತರ ಸಾಲ ಮನ್ನಾ ಮಾಡಿ ರಾಜಧರ್ಮ ಪಾಲಿಸಬೇಕಿತ್ತು. ನಿಮ್ಮೆಲ್ಲಾ ಆಟಗಳು ಗೊತ್ತಿದ್ದು ಕೂಡ ರಾಜ್ಯದ ಜನತೆಯ ಹಿತಕ್ಕಾಗಿ ನಾನು ಕೂಡ ಚಾಣಕ್ಯ ನೀತಿಯನ್ನು ಪ್ರದರ್ಶಿಸಿ ರೈತರ ಹಿತ ರಕ್ಷಿಸಿದೆ. ಇದರಲ್ಲಿ ನನ್ನ ವೈಯಕ್ತಿಕ ಲಾಭವೇನಿಲ್ಲ. ಬೇಡವೆಂದರೂ ನಮ್ಮ ಮನೆ ಬಾಗಿಲಿಗೆ ಬಂದವರು ನೀವು. ನಾನು ಅಮಾಯಕನಾಗಿರಲಿಲ್ಲ. ಕಾಂಗ್ರೆಸ್ಸಿನವರು ತಮ್ಮ ಬೇಳೆ ಬೇಯಿಸಿಕೊಳ್ಳಲು ನನ್ನನ್ನು ಪೆದ್ದು ಮಾಡಲು ಮುಂದಾದಿರಿ. ಆದರೆ ನಾಡಿನ ರೈತರ ಹಿತ ಕಾಯಲು ನಾನು ಜಾಣತನ ಪ್ರದರ್ಶಿಸಿದೆ ಎಂಬುದು ನೆನಪಿರಲಿ” ಎಂದಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಾಗ ಕಾಂಗ್ರೆಸ್ಸಿನ ರಾಷ್ಟ್ರ, ರಾಜ್ಯ ನಾಯಕರು ಇದ್ದ ಸಭೆಯಲ್ಲಿ ದೇವೇಗೌಡರು ಕಾಂಗ್ರೆಸ್ಸಿಗೆ ಸಲಹೆ ನೀಡಿ ಖರ್ಗೆ ಆಗಲಿ ಎಂದರು. ಖರ್ಗೆ ಸಿಎಂ ಆಗುವುದನ್ನು ಕಾಂಗ್ರೆಸ್ ಒಳಗಿನ ನಾಯಕರೇ ತಡೆದರು. ಆ ನಾಯಕರುಗಳು ಯಾರ್ಯಾರೆಂದು ಕಾಂಗ್ರೆಸ್ ಹುಡುಕಿಕೊಳ್ಳಲಿ. ಆಗ ಅವರ ನೈತಿಕತೆ ಪ್ರಶ್ನೆಗೆ ಅವರದೇ ನಾಯಕರಿಂದ ಉತ್ತರ ಸಿಗಬಹುದು” ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಕುಮಾರಸ್ವಾಮಿ ಅಜ್ಞಾತ, ಅಪ್ರಸ್ತುತರಾಗಿದ್ದಾರೆ ಎಂದೂ ಕಾಂಗ್ರೆಸ್ಸಿನ ನಾಯಕರು ಪಕ್ಷದ ಟ್ವಿಟ್ವರ್ ಮೂಲಕ ದಾಳಿ ಮಾಡಿದ್ದಾರೆ. ದೇಶದ ಎಷ್ಟು ರಾಜ್ಯಗಳಲ್ಲಿ ಕಾಂಗ್ರೆಸ್ ಪ್ರಸ್ತುತವಾಗಿದೆ? ಪ್ರತ್ಯಕ್ಷವಾಗಿ ರಾಜಕಾರಣ ಮಾಡುತ್ತಿದೆ? ಅನಾಥವಾಗಿದೆ? ಇದಕ್ಕೆ ಉತ್ತರಿಸಲು ನಾಯಕರ್ಯಾರಾದರೂ ಇದ್ದಾರೋ? ಇಲ್ಲ ಕಾಂಗ್ರೆಸ್ಸಿನ ಟ್ವಿಟರ್ ಖಾತೆಗೆ ಸೀಮಿತವೋ? ಎಂದು ಸಾಲು ಸಾಲು ಪ್ರಶ್ನೆ ಮಾಡಿದರು.

“ಬೇರೆ ಪಕ್ಷದ ಶಾಸಕರಿಗೆ ಸ್ವಯಂ ಸೇರ್ಪಡೆಯ ‘ಮಾರುವೇಶ’ ಹಾಕಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಕ್ಕೂ, ಬಿಜೆಪಿ ಅವರು ಆಪರೇಷನ್ ಅಸ್ತ್ರ ಬಳಸಿ ಸರ್ಕಾರವೊಂದನ್ನು ಬುಡಮೇಲು ಮಾಡುವುದಕ್ಕೂ ಅಂತಹ ವ್ಯತ್ಯಾಸವೇನಿಲ್ಲ. ಒಂದು ತೆಳುಗೆರೆಯಷ್ಟೇ ಅಂತರ. ಕಾಂಗ್ರೆಸ್ ಇದರ ಅರ್ಥ ತಿಳಿಯದಷ್ಟು ಕುಬ್ಜ ಸ್ಥಿತಿ ತಲುಪಿರುವುದು ಚೋದ್ಯವೆನಿಸಿದೆ. ಟೀಕೆಗಾಗಿ ಟೀಕೆ ಮಾಡುವ ಇಂತಹ ಮನಸ್ಥಿತಿಯಿಂದಾಗಿಯೇ ಕಾಂಗ್ರೆಸ್ ಇಂದು ಇಂತಹ ದುಃಸ್ಥಿತಿಗೆ ತಲುಪಿದೆ. ಕಪಟ ರಾಜಕಾರಣವನ್ನು ಯಾವ ಬಾಗಿಲಿನಿಂದ ಮಾಡಿದರೂ ಅದು ಅನೀತಿಯೇ ಆಗಿದೆ” ಎಂದರು.

“ತನ್ನರಿದೆ ಅರಿವೆಂತುಂಟೊ?, ತನ್ನ ಮರೆದ ಮರೆಹೆಂತಂಟೊ?, ಅರೆದು ಮರೆದವರು, ನಿಮ್ಮ ಪ್ರತಿಬಿಂಬದಂತಿಪ್ಪರು ಕಾಣಾ, ಗುಹೇಶ್ವರಾ” ಎಂದು ಕುಮಾರಸ್ವಾಮಿ ಟ್ವೀಟ್‍ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Click to comment

Leave a Reply

Your email address will not be published. Required fields are marked *