– ತುಮಕೂರು ಜಿಲ್ಲೆಯಲ್ಲಿ ಘಟಕ ಸ್ಥಾಪನೆ
– ಘಟಕ ಸ್ಥಾಪನೆಗೆ 7,725 ಕೋಟಿ ರೂ. ಹೂಡಿಕೆ
ಬೆಂಗಳೂರು: ಅತ್ಯಾಧುನಿಕ, ಐಷಾರಾಮಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿರುವ ಟೆಸ್ಲಾ ಕರ್ನಾಟಕದಲ್ಲಿ ತನ್ನ ಉತ್ಪದನಾ ಘಟಕವನ್ನು ತೆರೆಯಲಿದೆ.
ಹೌದು. ಉದ್ಯಮಿ ಎಲಾನ್ ಮಸ್ಕ್ ಮಾಲೀಕತ್ವದ ಟೆಸ್ಲಾ ಕಂಪನಿ ಕರ್ನಾಟಕದಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಈಗಾಗಲೇ ಬೆಂಗಳೂರಿನ ಬಿಡದಿಯಲ್ಲಿ ಜಪಾನಿನ ಟೊಯೋಟಾ ಕಂಪನಿ ತನ್ನ ಉತ್ಪಾದನಾ ಘಟಕವನ್ನು ತೆರೆದಿದೆ. ಈಗ ಅಮೆರಿಕದ ಟೆಸ್ಲಾ ಸಹ ಕರ್ನಾಟಕವನ್ನು ಆಯ್ಕೆ ಮಾಡಿದ್ದು ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗವಕಾಶ ಸೃಷ್ಟಿಯಾಗಲಿದೆ.
ಕೇಂದ್ರ ಬಜೆಟ್ ಅನ್ನು ಸ್ವಾಗತಿಸುವ ಕುರಿತು ಯಡಿಯೂರಪ್ಪ ಅವರು ಪ್ರಕಟಣೆ ಬಿಡುಗಡೆ ಮಾಡಿದ್ದು, ಅದರಲ್ಲಿ ಟೆಸ್ಲಾ ಘಟಕ ಸ್ಥಾಪನೆಯ ಬಗ್ಗೆ ಪ್ರಸ್ತಾಪವಿದೆ. ಬೆಂಗಳೂರು ಸಮೀಪದ ತುಮಕೂರು ಜಿಲ್ಲೆಯಲ್ಲಿ 7,725 ಕೋಟಿ ರೂ. ವೆಚ್ಚದಲ್ಲಿ ಟೆಸ್ಲಾ ಉತ್ಪಾದನಾ ಘಟಕವನ್ನು ತೆರೆಯಲಿದೆ.
ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಡಿಸೆಂಬರ್ ಕೊನೆಯಲ್ಲಿ 2021ರ ಮೊದಲಾರ್ಧದಲ್ಲಿ ಭಾರತದ ಕಾರು ಮಾರುಕಟ್ಟೆಗೆ ಟೆಸ್ಲಾ ಕಂಪನಿಯ ಕಾರು ಬರಲಿದೆ. ಅಮೆರಿಕದ ಎಲೆಕ್ಟ್ರಿಕ್ ಕಾರು ಉತ್ಪಾದನಾ ಕಂಪನಿಯು ಭಾರತದಲ್ಲಿ ಮಾರಾಟವನ್ನು ಪ್ರಾರಂಭಿಸುತ್ತದೆ. ನಂತರ ಬೇಡಿಕೆಯ ಅನುಸಾರವಾಗಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮತ್ತು ತಯಾರಿಕೆಗೆ ಮುಂದಾಗಲಿದೆ ಎಂಬುದಾಗಿ ತಿಳಿಸಿದ್ದರು.
ಈ ಹೇಳಿಕೆಯ ಬೆನ್ನಲ್ಲೇ ಎಲ್ಲಿ ಟೆಸ್ಲಾ ತನ್ನ ಘಟಕವನ್ನು ತೆರೆಯಲಿದೆ ಎಂಬ ಪ್ರಶ್ನೆ ಎದ್ದಿತ್ತು. ಜ.8 ರಂದು ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿ ʼಟೆಸ್ಲಾ ಇಂಡಿಯಾ ಮೋಟಾರ್ಸ್ʼ ಹೆಸರಿನಲ್ಲಿ ಕಂಪನಿಯನ್ನು ನೋಂದಣಿ ಮಾಡುವ ಜೊತೆಗೆ ಮೂರು ನಿರ್ದೇಶಕರನ್ನೂ ನೇಮಿಸಲಾಗಿದೆ ಎಂದು ವರದಿಯಾಗಿತ್ತು.
ಕರ್ನಾಟಕದಲ್ಲಿ ಕಂಪನಿ ತೆರೆಯುವ ಸುದ್ದಿ ಪ್ರಕಟವಾಗುತ್ತಿದ್ದಂತೆ ಗುಜರಾತ್, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ನಮ್ಮ ರಾಜ್ಯದಲ್ಲಿ ಘಟಕ ತೆರೆಯುವಂತೆ ಕೇಳಿಕೊಂಡಿತ್ತು. ಅಷ್ಟೇ ಅಲ್ಲದೇ ನಮ್ಮ ರಾಜ್ಯದಲ್ಲಿ ಉದ್ಯಮ ಸ್ಥಾಪನೆಗೆ ನೆರವಾಗಲು ಸರ್ಕಾರಗಳು ನೀಡುವ ಸೌಲಭ್ಯಗಳ ಮಾಹಿತಿಯನ್ನು ನೀಡಿವೆ ಎಂದು ವರದಿಯಾಗಿತ್ತು. ಟೆಸ್ಲಾ ಕಂಪನಿಗೆ ಘಟಕ ಸ್ಥಾಪಿಸಲು ಕರ್ನಾಟಕ ಸರ್ಕಾರವು ಬೆಂಗಳೂರು, ತುಮಕೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಜಾಗ ನೀಡುವ ಪ್ರಸ್ತಾಪ ಸಲ್ಲಿಸಿತ್ತು.
ಪರಿಸರ ಸ್ನೇಹಿ ವಾಹನಗಳನ್ನು ಹೊಂದುವುದರಲ್ಲಿ ಭಾರತದಲ್ಲೇ ಕರ್ನಾಟಕ ಮುಂಚೂಣಿಯಲ್ಲಿದೆ. ಟೆಸ್ಲಾ ಕಂಪನಿ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಶೋಧನೆ ಮತ್ತು ಅಭಿವೃದ್ಧಿ ಘಟಕವನ್ನು ಶೀಘ್ರವೇ ಆರಂಭಿಸಲಿದೆ. ಭಾರತ ಹಾಗೂ ಕರ್ನಾಟಕಕ್ಕೆ ಆಗಮಿಸುತ್ತಿರುವ ಎಲೋನ್ ಮಸ್ಕ್ಗೆ ಸ್ವಾಗತ ಎಂದು ಸಿಎಂ ಯಡಿಯೂರಪ್ಪ ಅಂದು ಟ್ವೀಟ್ ಮಾಡಿದ್ದರು.
2015ರಲ್ಲಿ ಅಮೆರಿಕ ಪ್ರವಾಸದ ವೇಳೆ ಪ್ರಧಾನಿ ಮೋದಿ ಟೆಸ್ಲಾ ಘಟಕಕ್ಕೆ ಭೇಟಿ ನೀಡಿ ಭಾರತದಲ್ಲೂ ಕಾರು ಉತ್ಪಾದನೆ ಮಾಡುವಂತೆ ಮನವಿ ಮಾಡಿದ್ದರು. ಇದಾದ ಬಳಿಕ 2016ರಲ್ಲೇ ಟೆಸ್ಲಾ ಭಾರತಕ್ಕೆ ಬರುವುದಾಗಿ ಹೇಳಿತ್ತು. ಅಕ್ಟೋಬರ್ನಲ್ಲಿ ಟೆಸ್ಲಾದ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಎಲೋನ್ ಮಸ್ಕ್ ಕಂಪನಿಯು 2021ಕ್ಕೆ ಭಾರತಕ್ಕೆ ಕಾಲಿಡಲಿದೆ ಎಂದಿದ್ದರು. ಟೆಸ್ಲಾ ಯಾವ ಕಾರನ್ನು ಬಿಡುಗಡೆ ಮಾಡಬಹುದು ಎಂಬುದು ಅಧಿಕೃತವಾಗಿ ತಿಳಿದು ಬಂದಿಲ್ಲ. ಆದರೆ ಮಾಡೆಲ್ 3 ಸೆಡಾನ್ ಕಾರು ಬಿಡುಗಡೆ ಮಾಡಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಈ ಕಾರಿನ ಬೆಲೆ 55 ರಿಂದ 60 ಲಕ್ಷ ಎಂದು ನಿರೀಕ್ಷಿಸಲಾಗಿದ್ದು ಮುಂದಿನ ತಿಂಗಳು ಭಾರತದಲ್ಲಿ ಬುಕ್ಕಿಂಗ್ ಪ್ರಾರಂಭವಾಗುವ ಸಾಧ್ಯತೆಯಿದೆ. ಐಷಾರಾಮಿ ಕಾರುಗಳಿಗೆ ಹೆಸರಾದ ಮರ್ಸಿಡಿಸ್ ಬೆಂಜ್ ಕಾರುಗಳಿಗೆ ಟೆಸ್ಲಾ ಕಂಪನಿಯ ಕಾರುಗಳು ಸ್ಪರ್ಧೆ ನೀಡುತ್ತಿವೆ.
ಮಾಡೆಲ್ 3 ವಿಶೇಷತೆ ಏನು?
ಇಲ್ಲಿಯವರೆಗೆ ಟೆಸ್ಲಾ ಬಿಡುಗಡೆ ಮಾಡಿದ ಕಾರುಗಳ ಪೈಕಿ ಅತ್ಯಂತ ಒಳ್ಳೆಯ ಮಾದರಿ ಇದಾಗಿದ್ದು, ಈ ಕಾರನ್ನು 2017ರಲ್ಲಿ ವಿಶ್ವದಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗಿತ್ತು. ವಿಶ್ವದಲ್ಲೇ ಅತೀ ಹೆಚ್ಚು ಮಾರಾಟವಾದ ಎಲೆಕ್ಟ್ರಿಕ್ ಕಾರು ಎಂಬ ಹೆಗ್ಗಳಿಕೆ ಈ ಕಾರಿಗೆ ಪಡೆದುಕೊಂಡಿದೆ. ಎರಡು ಮಾದರಿಯಲ್ಲಿ ಮಾಡೆಲ್ 3 ಕಾರು ಬಿಡುಗಡೆಯಾಗಿದೆ. ಲಾಂಗ್ ರೇಂಜ್ ಮಾದರಿಯ ಕಾರು ಒಮ್ಮೆ ಚಾರ್ಜ್ ಮಾಡಿದರೆ 500 ಕಿ.ಮೀ ಕ್ರಮಿಸಿದರೆ, ಸ್ಟಾಡಂರ್ಡ್ ಮಾದರಿಯ ಕಾರು 354 ಕಿ.ಮೀ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ. 15 ನಿಮಿಷದಲ್ಲಿ ಶೇ.80 ರಷ್ಟು ಬ್ಯಾಟರಿ ಚಾರ್ಜ್ ಆಗುತ್ತದೆ. ಗರಿಷ್ಟ 162 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಈ ಕಾರಿಗಿದೆ.