– ಕಳೆದ ದಿನಗಳೆಲ್ಲ ಕಣ್ಣೆದುರು ಮೆರವಣಿಗೆ ನಡೆಸುತ್ತಿವೆ
ಬೆಂಗಳೂರು: ಅಕ್ಷರ ಮಾಂತ್ರಿ ರವಿ ಬೆಳಗೆರೆ ಇಂದು ಬೆಳಗ್ಗಿನ ಜಾವ ತಮ್ಮ ನಿವಾದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಇದೀಗ ಬಾರದ ಲೋಕಕ್ಕೆ ತೆರಳಿದ ‘ಗಾಡ್ ಫಾದರ್’ ಬಗ್ಗೆ ಮೆಲುಕು ಹಾಕುತ್ತಾ ಹಿರಿಯ ಪತ್ರಕರ್ತ ಟಿ. ಗುರುರಾಜ್ ಕಂಬನಿ ಮಿಡಿದಿದ್ದಾರೆ.
Advertisement
ಹೊಳೆನರಸೀಪುರದ ಜಗುಲಿ, ದೇವಸ್ಥಾನದ ಮೆಟ್ಟಿಲು, ಹೇಮಾವತಿಯ ದಂಡೆ, ಹುಬ್ಬಳ್ಳಿಯ ಕೊಪ್ಪಿಕರ ರಸ್ತೆಯ ಸಂಯುಕ್ತ ಕರ್ನಾಟಕ, ಚಂದ್ರಕಾಂತ ನಗರದ ಚಾಳ್, ಬೆಂಗಳೂರಿನ ಕರ್ಮವೀರ ಕಚೇರಿ, ಪದ್ಮನಾಭ ನಗರದ ಪುಟ್ಟ ಮಹಡಿ ಮನೆ, ಹಾಯ್ ಬೆಂಗಳೂರಿನ ಆಫೀಸು, ಅಗಾಧವಾದ ಓದು, ಕೇಳಿಸಿಕೊಳ್ಳುವ ತನ್ಮಯತೆ, ಲೀಲಾಜಾಲ ಬರೆವಣಿಗೆ, ಲೆಕ್ಕವಿಡದಷ್ಟು ಐಲು – ತಿಕ್ಕಲು, ಕುಡಿತ, ಸಿಗರೇಟು, ಸೆಕ್ಸು, ಹೊಕ್ಕಳ ಬಳ್ಳಿಯಿಂದ ಹುಟ್ಟುತ್ತಿದ್ದ ಆ ಮಾತು…… ಒಹ್, ಅವೆಷ್ಟು ನೆನಪುಗಳ ಸಾಲು! ರವಿ ಬೆಳಗೆರೆ ಎಂಬ ಅಕ್ಷರ ಮಾಂತ್ರಿಕ ಜೊತೆಗಿಲ್ಲ ಎಂಬುದೇ ಒಂದು ಮಹಾನೋವು. ಇದನ್ನೂ ಓದಿ: ಬಳ್ಳಾರಿ ಟು ಬೆಂಗಳೂರು – ರವಿ ಬೆಳಗೆರೆ ಜೀವನ ಪಯಣ ಹೇಗಿತ್ತು..?
Advertisement
Advertisement
ಬರೆದರೆ ಹೊರೆಯಾಗುವಷ್ಟು ನೋವಿನ ಸ್ಟಾಕುಗಳಿವೆ, ಸ್ನೇಹ, ಪ್ರೀತಿ, ವಿಶ್ವಾಸದ ಒಟ್ಟಿಗೆ ಜಗಳ-ಕೊಲ್ಲುವಷ್ಟು ದ್ವೇಷವಿದ್ದರೂ, ಹಗೆತನ ಹೊಗೆಯಾಡದಂತೆ ಕಳೆದ ದಿನಗಳೆಲ್ಲ ಕಣ್ಣೆದುರು ಮೆರವಣಿಗೆ ನಡೆಸುತ್ತಿವೆ. ಏನೇ ಇರಲಿ ಅದ್ಭುತ ಪ್ರತಿಭೆ ಮತ್ತು ಅಸಂಖ್ಯಾತ ಪ್ರಕ್ಷುಬ್ಧತೆಗಳನ್ನು ಒಡಲೊಳಗಿಟ್ಟುಕೊಂಡು ತಣ್ಣಗೆ ನಗು-ನಗುತ್ತಾ ನಡೆದಾಡುತ್ತದ್ದ ರವಿ ಬೆಳಗೆರೆ ಎಂಬ ಅದ್ಭುತದ ಹೆಜ್ಜೆಗಳಿಗೀಗ ಪೂರ್ಣ ವಿರಾಮ. ಅದೆಷ್ಟೇ ವಾದ-ವಿವಾದಗಳಿರಲಿ, ಕನ್ನಡ ಪತ್ರಿಕೋದ್ಯಮಕ್ಕೊಂದು ಹೊಸ ಭಾಷ್ಯ ಬರೆದ ಮಾಂತ್ರಿಕನ ಬೆರಳುಗಳು ನಿಶ್ಚಲವಾಗಿವೆ. ಯಾರು ಬೇಡವೆಂದರೂ, ನೀವು ಹೊರಟಾಗಿದೆ. ನಿಮ್ಮೆಡೆಗಿನ ಕಡುಕೋಪ-ಕಡುಪ್ರೀತಿಗಳೆರಡೂ ನನ್ನ ಕೊನೆಯುಸಿರಿನವರೆಗೂ ಜೀವಂತವಾಗಿರುತ್ತವೆ. ಇದನ್ನೂ ಓದಿ: ರವಿ ಬೆಳಗೆರೆ ಅಸ್ತಂಗತ – ಒಡನಾಟ ಹಂಚಿಕೊಂಡ ಆಪ್ತರು
Advertisement
ರವಿಯನ್ನು ಸಹಿಸಿಕೊಂಡು, ಸಲಹಿದ ಭೂಮಿ ತೂಕದ ಲಲಿತಾ ಮೇಡಂ ಅವರ ಸಂಕಟ ಊಹಿಸಿಕೊಳ್ಳುವುದಕ್ಕೂ ಅಸಾಧ್ಯ. ಬೆಳಗೆರೆಯ ಬದುಕು ಅವರು, ಅವರಿಂದಾಗಿ ಮಾತ್ರವೇ ರವಿ, ಈವರೆಗೆ ಉಳಿದದ್ದು. ಅವರ ಕಣ್ಣೇರು ಆದಷ್ಟು ಬೇಗ ಕರಗಿಹೋಗಲಿ. ಯಾರು ಅತ್ತರೂ-ಸತ್ತರೂ ನೆನಪುಗಳು ಸಾಯುವುದಿಲ್ಲ. ನೀವು ಇಲ್ಲೇ ಅಕ್ಕ – ಪಕ್ಕವೇ ಇದ್ದೀರಿ. ಬೈ ರವಿ ಎಂದು ಗುರುರಾಜ್ ಕಣ್ಣೀರಿನ ವಿದಾಯ ತಿಳಿಸಿದ್ದಾರೆ. ಇದನ್ನೂ ಓದಿ: ಸಾವು ಬಂದು ಕರೆದಾಗ ಅತ್ಲಾಗೆ ನೋಡೋಣ ನಡಿ ಅಂತ ಹೊರಟುಬಿಟ್ಟಿದ್ದಾರೆನೋ: ಯೋಗರಾಜ್ ಭಟ್