– ವೈದ್ಯ ಸಮುದಾಯಕ್ಕೆ ಕೊಟ್ಟ ದೊಡ್ಡ ಗೌರವವಿದು
– ಮುಂದಿನ ವರ್ಷವೇ ಕೊರೊನಾಗೆ ಲಸಿಕೆ
ಮೈಸೂರು: ದಸರಾ ಉದ್ಘಾಟಿಸಿದ್ದು ನನ್ನ ಜೀವಿತಾವಧಿಯ ದೊಡ್ಡ ಗೌರವವಿದು. ವೈದ್ಯ ಸಮುದಾಯಕ್ಕೆ ಕೊಟ್ಟ ದೊಡ್ಡ ಗೌರವವಿದು ಎಂದು ಜಯದೇವ ಆಸ್ಪತ್ರೆ ನಿರ್ದೇಶಕ, ಹೃದ್ರೋಗ ತಜ್ಞ ಡಾ.ಸಿ.ಎನ್ ಮಂಜುನಾಥ್ ಹೇಳಿದ್ದಾರೆ.
ದಸರಾ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಕಣ್ಣಾಗಿರಬೇಕೇ ಹೊರತು ಕನ್ನಡಕವಾಗಬಾರದು. ಜಗತ್ತಿನಲ್ಲಿ ಬದುಕುವ ಭಾಷೆ ಇಂಗ್ಲಿಷ್ ಆಗಿದೆ. ಎರಡರ ನಡುವೆ ಸಮತೋಲನವಾಗಬೇಕು. ಇಂದು ನನಗಾಗಿ ನಾನು ಏನನ್ನೂ ಚಾಮುಂಡಿ ದೇವಿಯ ಬಳಿ ಬೇಡಿಲ್ಲ. ಕೊರೊನಾ ಲಸಿಕೆ ಬೇಗ ಬರಲಿ, ಕೊರೊನಾ ಸಂಪೂರ್ಣ ನಿವಾರಣೆಯಾಗಲಿ, ಜಲಪ್ರವಾಹ ಕಡಮೆಯಾಗಲಿ ಎಂದು ದೇವರ ಬಳಿ ಬೇಡಿದ್ದೇನೆ ಎಂದರು.
ಮಾಡಬಾರದ್ದು ಮಾಡಿದರೆ, ತಿನ್ನಬಾರದ್ದನ್ನು ತಿಂದರೆ ಹೇಗೆ ವೈರಸ್ ಉತ್ಪಾದನೆ ಆಗುತ್ತದೆ ಎಂಬುದಕ್ಕೆ ಈ ವೈರಸ್ ಸಾಕ್ಷಿ. ಚೀನಾದಲ್ಲಿ ಸೃಷ್ಟಿಯಾದ ವೈರಸ್ ಇಡೀ ಪ್ರಪಂಚವನ್ನೇ ನಡುಗಿಸಿದೆ. ಕೊರೊನಾ ವಾರಿಯರ್ಸ್ ಮೃತರಾದರೆ ಅವರನ್ನು ಹುತಾತ್ಮರ ಎಂದು ಕರೆಯಬೇಕು. ಹುತಾತ್ಮ ಯೋಧರಿಗೆ ಸಿಗುವ ಗೌರವ ಕರೋನಾ ವಾರಿಯರ್ಸ್ ಮೃತರಾದರೆ ಅವರಿಗೆ ಸಿಗಬೇಕು. ಕೊರೊನಾ ಪಾಸಿಟಿವ್ ಬಂದರೆ ಅವರನ್ನು ಅಸ್ಪೃಶ್ಯರ ರೀತಿ ನೋಡಬೇಡಿ ಎಂದು ಹೇಳಿದರು.
ಕೊರೊನಾ ಕಾಯಿಲೆಗಿಂತ ಕೊರೊನಾದ ಭಯವೇ ದೊಡ್ಡ ಕಾಯಿಲೆಯಾಗಿದೆ. ವೈದ್ಯರೇ ರೋಗಿಗಳಾಗುತ್ತಿದ್ದಾರೆ. ವೈದ್ಯರ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಹಲ್ಲೆ ಮಾಡುವುದು, ಆಸ್ಪತ್ರೆಗಳ ಮೇಲೆ ದಾಳಿ ಮಾಡುವುದು ನಿಲ್ಲಿಸಬೇಕು. ವೈದ್ಯರಿಗೆ ಗ್ರಾಮೀಣ ಭಾಗದಲ್ಲಿ ರಕ್ಷಣೆ ಸಿಗುತ್ತಿಲ್ಲ. ಹೀಗಾಗಿ ವೈದ್ಯರು ಗ್ರಾಮೀಣ ಭಾಗಕ್ಕೆ ಹೋಗುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಗ್ರಾಮೀಣ ಭಾಗದ ಆಸ್ಪತ್ರೆಗಳನ್ನು ಮೇಲೆ ಜಿಲ್ಲಾ ಪಂಚಾಯತ್ ವ್ಯಾಪ್ತಿಯಿಂದ ಹೊರಗಿಟ್ಟು ಜಿಲ್ಲಾ ಕೇಂದ್ರದಿಂದ ನಿರ್ವಹಣೆ ಮಾಡಿಸಬೇಕು ಎಂದರು.
ಸಾಮಾಜಿಕ ಜಾಲತಾಣಗಳು ಸಮಾಜ ಕಟ್ಟಬೇಕಿತ್ತು. ಆದರೆ ಅವು ಸಮಾಜವನ್ನು ತಪ್ಪು ದಾರಿಗೆ ತಳ್ಳುತ್ತಿದೆ. ಇದು ವಿಷಾದನೀಯ. ಜಯದೇವ ಆಸ್ಪತ್ರೆಯಲ್ಲಿ ಈವರೆಗೆ 50 ಲಕ್ಷ ಜನರಿಗೆ ಚಿಕಿತ್ಸೆ ಕೊಟ್ಟಿದ್ದೇವೆ. 5 ಲಕ್ಷ ಜನರಿಗೆ ಶಸ್ತ್ರಚಿಕಿತ್ಸೆ ಮಾಡಿದ್ದೇವೆ. ಕೊರೊನಾಗೆ ಈ ವರ್ಷ ಲಸಿಕೆ ಬರುವ ಲಕ್ಷಣಗಳಿಲ್ಲ. ಮುಂದಿನ ವರ್ಷದ ಫೆಬ್ರವರಿ, ಮಾರ್ಚ್ ನಲ್ಲಿ ಲಸಿಕೆ ಬರಬಹುದು ಎಂದು ಮಾಹಿತಿ ನೀಡಿದರು.