– ಕಿರುತೆರೆ ನಟಿ ದೀಪಿಕಾ ದಾಸ್ ಭಾಗಿ
ಬೆಂಗಳೂರು: ಕನ್ನಡಿಗರ ಸ್ಟಾರ್ಟಪ್ ಆ್ಯಪ್ ಆಧಾರಿತ ಹೊಯ್ಸಳ ಕ್ಯಾಬ್ ಗಳಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸಿಎಂ, ಹೊಯ್ಸಳ ಕ್ಯಾಬ್ ಕನ್ನಡಿಗರ ಸ್ಟಾರ್ಟಪ್ ಆಗಿದ್ದು, ಕನ್ನಡತಿ ಸುಧಾ ಉಮಾಶಂಕರ್ ಅವರು ಈ ಕ್ಯಾಬ್ ಸೇವೆ ಅರ್ಪಿಸಿದ್ದಾರೆ. ನಗರಗಳಲ್ಲಿದ್ದ ಕ್ಯಾಬ್ ಸೇವೆ ಇನ್ನು ರಾಜ್ಯದ ಎಲ್ಲೆಡೆ ಸೇವೆಗೆ ಆರಂಭಿಸಲಿದೆ. ಈ ಕ್ಯಾಬ್ಗಳು ಕಡಿಮೆ ದರದಲ್ಲಿ ಸುಭದ್ರ ಸೇವೆ ನೀಡಲಿವೆ. ಹೊಯ್ಸಳ ಕ್ಯಾಬ್ ಯಶಸ್ಸು ಕಾಣಲಿ ಎಂದು ಹಾರೈಸಿದರು.
ನಂತರ ಮಾತನಾಡಿದ ಸುಧಾ ಉಮಾಶಂಕರ್, ವಿದೇಶ ಹಾಗೂ ಹೊರ ರಾಜ್ಯದ ಕ್ಯಾಬ್ ಸಂಸ್ಥೆಗಳಿವೆ. ಇಲ್ಲಿಯೂ ಒಂದು ಕ್ಯಾಬ್ ಸಂಸ್ಥೆ ಇರಬೇಕು. ಅಲ್ಲದೆ ಇತರೆ ಸಂಸ್ಥೆಗಳು ಹೆಚ್ಚಿನ ದರದಲ್ಲಿ ಸೇವೆ ಒದಗಿಸುತ್ತಿವೆ. ಇದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಅಲ್ಲದೆ ಕೆಲವರಿಗೆ ಭಾಷೆ ಸಮಸ್ಯೆ ಸಹ ಕಾಡುತ್ತಿದೆ. ಹೀಗಾಗಿ ನಮ್ಮ ರಾಜ್ಯದ್ದೇ ಒಂದು ಕ್ಯಾಬ್ ಸಂಸ್ಥೆ ಇರಬೇಕು ಎಂಬ ಉದ್ದೇಶದಿಂದ ಈ ಸಾಹಸಕ್ಕೆ ಕೈ ಹಾಕಿದೆವು. ಅಲ್ಲದೆ ಇದು ನನ್ನ ಕನಸಾಗಿತ್ತು ಎಂದರು.
ಕಳೆದ ಒಂದು ವರ್ಷದಿಂದ ಯೋಜನೆ ರೂಪಿಸಿ, ವ್ಯವಸ್ಥಿತವಾಗಿ ಕಾರ್ಯರೂಪಕ್ಕೆ ತರುತ್ತಿದ್ದೇವೆ. ಇದಕ್ಕೆ ಸಿಎಂ ಯಡಿಯೂರಪ್ಪನವರು ಬೆಂಬಲ ಸೂಚಿಸಿರುವುದು ಸಂತಸ ತಂದಿದೆ. ಡಿಸೆಂಬರ್ ಮೊದಲ ವಾರದಿಂದ ಕ್ಯಾಬ್ ಸೇವೆ ಕಾರ್ಯಾರಂಭವಾಗಲಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕಿರುತೆರೆ ನಟಿ ದೀಪಿಕಾ ದಾಸ್ ಸಹ ಭಾಗಿಯಾಗಿದ್ದರು.