DistrictsKarnatakaLatestMain PostUdupi

ಕಡಲ ನಡುವೆ ರಕ್ಷಣೆಗಾಗಿ ಅಂಗಲಾಚುತ್ತಿರುವ 9 ಕಾರ್ಮಿಕರು

ಉಡುಪಿ: ಇಲ್ಲಿನ ಎನ್‍ಎಂಪಿಟಿಯ ಕೋರಮಂಡಲ ಎಕ್ಸ್‍ಪ್ರೆಸ್ ಟಗ್‍ನ 9 ಮಂದಿ ಸಿಬ್ಬಂದಿ ಕಳೆದ ಮೂರು ದಿನದಿಂದ ಸಮುದ್ರದಲ್ಲೇ ಸಿಲುಕಿಕೊಂಡಿದ್ದಾರೆ. ಸಮುದ್ರದಲ್ಲಿ ಗಾಳಿ ಇರುವ ಕಾರಣ ಇನ್ನೂ ಕೂಡಾ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿಲ್ಲ. ಈ ನಡುವೆ ಟಗ್‍ನಲ್ಲಿರುವ ಸಿಬ್ಬಂದಿ ಅಪಾಯದಲ್ಲಿರುವ ಸ್ಥಿತಿ ವಿವರಿಸುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಶುಕ್ರವಾರ ಬೆಳಗ್ಗೆ 11.30 ರಿಂದ ಕಡಲಲ್ಲಿ ತೇಲುತ್ತಿರುವ ಕೋರಮಂಡಲ ಎಕ್ಸ್‍ಪ್ರೆಸ್ ಟಗ್, ಶನಿವಾರ ಬೆಳಗ್ಗೆ 8.30ಕ್ಕೆ ಕಾಪು ಲೈಟ್ ಹೌಸ್ ಬಳಿಯಿಂದ ಸುಮಾರು ಹದಿನೈದು ಕಿಲೋ ಮೀಟರ್ ದೂರದ ಕಾಪು ಪಾರ್ ಬಳಿ ಬಂಡೆಗೆ ಡಿಕ್ಕಿ ಹೊಡೆದು ನಿಂತಿರುವುದು ಪತ್ತೆಯಾಗಿದೆ. ತಮ್ಮನ್ನು ರಕ್ಷಿಸುವಂತೆ 9 ಮಂದಿ ಸಿಬ್ಬಂದಿ ಎಲ್ಲರಲ್ಲಿ ಅಂಗಲಾಚುತ್ತಿದ್ದಾರೆ. ವೀಡಿಯೋಗಳನ್ನು ಮಾಡಿ ಕಳುಹಿಸಿರುವ ಸಿಬ್ಬಂದಿ, ಅಪಾಯದಲ್ಲಿರುವುದನ್ನು ದಡದಲ್ಲಿರುವವರಿಗೆ ಮನವರಿಕೆ ಮಾಡಿದ್ದಾರೆ. ಜೀವಭಯ ಕಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಟಗ್‍ನಲ್ಲಿರುವ 9 ಮಂದಿ ಸಿಬ್ಬಂದಿ 40 ಗಂಟೆಗಳನ್ನು ಈಗಾಗಲೇ ಸಮುದ್ರ ಮಧ್ಯದಲ್ಲೇ ಕಳೆದಿದ್ದಾರೆ. ಟಗ್‍ನಲ್ಲಿ ಇರುವ ನೀರು, ಆಹಾರ ಪದಾರ್ಥಗಳು ಖಾಲಿಯಾಗುತ್ತಿದೆ. ಮಳೆ, ಗಾಳಿ ಮತ್ತು ಜೀವ ಭಯದಿಂದ ಎಲ್ಲರೂ ಮಾನಸಿಕ ಸ್ಥೈರ್ಯ ಕಳೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಟಗ್‍ನಲ್ಲಿರುವ ಸಿಬ್ಬಂದಿ ದೂರವಾಣಿಯ ಮೂಲಕ ಮಾತನಾಡಿ, ಕೋಸ್ಟ್ ಗಾರ್ಡ್ ಹಡಗು ನಮಗಿಂತ ದೂರದ 2 ಮೈಲಿಯಲ್ಲಿ ನಿಂತುಕೊಂಡಿದೆ. ಯಾವಾಗ ನಮ್ಮನ್ನು ರಕ್ಷಿಸುತ್ತಾರೆ ಎನ್ನುವುದನ್ನು ಜೀವ ಕೈಯ್ಯಲ್ಲಿ ಹಿಡಿದು ಕಾಯುತ್ತಿದ್ದೇವೆ. ದಯವಿಟ್ಟು ನಮ್ಮನ್ನು ಬದುಕಿಸಲು ಯಾವುದಾದರೂ ಪ್ರಯತ್ನವನ್ನು ಮಾಡಿ ಎಂದು ದಡದಲ್ಲಿರುವ ಬೋಟ್ ಸಿಬ್ಬಂದಿ ಬಳಿ ಮನವಿ ಮಾಡಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕರಾವಳಿ ಕಾವಲು ಪಡೆ ಎಸ್ಪಿ ಚೇತನ್, ಮಂಗಳೂರಿಗೆ ನೇವಿ ಹೆಲಿಕಾಪ್ಟರ್ ಬಂದಿದೆ. ಹವಾಮಾನ ನೋಡಿಕೊಂಡು ರಕ್ಷಣಾ ಕಾರ್ಯ ಆರಂಭಿಸುತ್ತಾರೆ. ನಮ್ಮ ಅಥವಾ ಕೋಸ್ಟ್ ಗಾರ್ಡ್ ಬಂಡೆ ಸಮೀಪ ಹೋಗಲು ಸಾಧ್ಯವಾಗುತ್ತಿಲ್ಲ ಎಂದರು.

ಅರಬ್ಬೀ ಸಮುದ್ರದಲ್ಲಿ ಆರೇಳು ಮೀಟರ್ ಅಲೆಗಳು ಏಳುತ್ತಿರುವ ಕಾರಣ, ಬೋಟ್ ಬೃಹತ್ ಬಂಡೆಯಲ್ಲಿ ಸಿಲುಕಿದ ಕಾರಣ ರಕ್ಷಣೆ ವಿಳಂಬವಾಗಿದೆ.

Leave a Reply

Your email address will not be published.

Back to top button