– ತನ್ನ ದುಡಿಮೆಯಲ್ಲಿ ಸಂಪಾದಿಸಿದ ಆಸ್ತಿ ಮಾರಾಟ
– ಸಿದ್ಧಲಿಂಗೇಶ್ವರ ದೇವರಿಗೆ 10 ಕೋಟಿ ವೆಚ್ಚದ ಚಿನ್ನದ ತೇರು
ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕಿನ ಎಡೆಯೂರು ಸಿದ್ಧಲಿಂಗೇಶ್ವರ ಸ್ವಾಮಿ ದೇವರಿಗೆ ಭಕ್ತರೊಬ್ಬರು ಸುಮಾರು 10 ಕೋಟಿ ರೂ. ಮೌಲ್ಯದ ಚಿನ್ನದ ತೇರನ್ನು ಕಾಣಿಕೆಯಾಗಿ ನೀಡಿದ್ದಾರೆ.
ಕುಣಿಗಲ್ ತಾಲೂಕಿನ ದೇವಕನ್ನಸಂದ್ರದ ಶಿವಣ್ಣ ತೋಂಟದಾರ್ಯ ಎಂಬುವರು ದೇವರಿಗೆ ಚಿನ್ನದ ತೇರನ್ನ ಸಮರ್ಪಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಶಿವಣ್ಣ ಅವರಿಗೆ ಒಂದೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಇತ್ತಂತೆ. ಆಗ ಎಡೆಯೂರು ಸಿದ್ಧಲಿಂಗೇಶ್ವರ ದೇವರು ಕೈ ಹಿಡಿದು ಕೋಟ್ಯಂತರ ರೂ. ಸಂಪಾದನೆ ಮಾಡುವಂತೆ ಆಶೀರ್ವಾದ ಮಾಡಿದ್ದರಂತೆ. ಹೀಗಾಗಿ ದೇವರ ಕೃಪೆಯಿಂದ ತಾನು ಶ್ರೀಮಂತನಾಗಿದ್ದು, ದೇವರಿಗೆ ಕಾಣಿಕೆ ಕೊಡಬೇಕು ಎಂದು ಬಯಸಿ ಕುಟುಂಬ ಸಮೇತವಾಗಿ ಬಂದು ಚಿನ್ನದ ತೇರನ್ನ ಸಮರ್ಪಿಸಿದ್ದಾರೆ.
Advertisement
Advertisement
ಶಿವಣ್ಣ 50 ವರ್ಷದ ಹಿಂದೆ ಉಟ್ಟ ಬಟ್ಟೆಯಲ್ಲಿ ಬೆಂಗಳೂರಿಗೆ ಹೋದರು. ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಕೂಲಿ ಮಾಡದೆ ಬದುಕಿಲ್ಲ ಎನ್ನುವ ಸ್ಥಿತಿಯಲ್ಲಿ ಕುಟುಂಬ ಇತ್ತು. ಅಂದಿನಿಂದ ಕೆಲ ಕಾಲ ಖಾಸಗಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿದ್ದರು. ನಂತರ ತರಕಾರಿ ವ್ಯಾಪಾರ ಮಾಡಿದರು. ಬಳಿಕ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಕಾಲಿಟ್ಟರು. ಇದೀಗ ಶಿವಣ್ಣನವರು ಬೆಂಗಳೂರಿನ ಪ್ರಭಾವಿ ರಿಯಲ್ ಎಸ್ಟೇಟ್ ಉದ್ಯಮಿಗಳಲ್ಲಿ ಒಬ್ಬರು. ಅಂದು ಧೈರ್ಯ ತುಂಬಿದ ದೈವಕ್ಕೆ ಏನಾದರೂ ಮಾಡಬೇಕು ಎನ್ನುವ ಬಯಕೆಯ ಹಿನ್ನೆಲೆಯಲ್ಲಿ ತಮ್ಮ ಹೆಸರಿಗಿದ್ದ ಸೈಟ್‍ಗಳನ್ನ ಮಾರಿ ಎಡೆಯೂರು ಸಿದ್ಧಲಿಂಗೇಶ್ವರನಿಗೆ 10 ಕೋಟಿ ಮೌಲ್ಯದ ಚಿನ್ನದ ತೇರು ನೀಡಿದ್ದಾರೆ ಎಂದು ಪ್ರಧಾನ ಅರ್ಚಕರು ಶಿವಮೂರ್ತಿಯ್ಯ ತಿಳಿಸಿದ್ದಾರೆ.
Advertisement
Advertisement
ಶಿವಣ್ಣ ತಾವು ಹಂತ ಹಂತವಾಗಿ ಜೀವನದಲ್ಲಿ ಮೇಲಕ್ಕೆ ಏರುತಿದ್ದಂತೆ ಎಡೆಯೂರು ಸಿದ್ಧಲಿಂಗೇಶ್ವರನಿಗೆ ವಿಶೇಷ ಕಾಣಿಕೆ, ದೇವಸ್ಥಾನದ ಸೇವಾಕಾರ್ಯ ಮಾಡುತ್ತಿದ್ದರು. ಈ ಹಿಂದೆ ಕಗ್ಗೆರೆ ಸಿದ್ಧಲಿಂಗೇಶ್ವರನಿಗೆ ಬೆಳ್ಳಿಯ ಮೂರ್ತಿ ಅರ್ಪಿಸಿದ್ದರು. ಇದೀಗ ಶಿವಣ್ಣ ಕೊಟ್ಟ ಚಿನ್ನದ ತೇರು ಶ್ರೀಕ್ಷೇತ್ರದ ಜಾತ್ರೆ ವೇಳೆ ರಥದಲ್ಲಿ ಅಲಂಕರಿಸಿ ಎಳೆಯಲಾಗುವುದು.