ಧಾರವಾಡ: ನಗರದಲ್ಲಿ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ ಒಂಟಿ ಸಲಗ(ಕಾಡಾನೆ) ಪತ್ತೆಗಾಗಿ ಧಾರವಾಡದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಚರಣೆ ಮುಂದುವರಿಸಿದ್ದಾರೆ.
Advertisement
ನಗರದಲ್ಲಿ ನಿನ್ನೆ ಬೆಳಗ್ಗೆ ಕಾಣಿಸಿಕೊಂಡಿದ್ದ ಒಂಟಿ ಸಲಗ ಪತ್ತೆಯ ಕಾರ್ಯ ಇಂದೂ ಕೂಡ ಮುಂದುವರೆದಿದೆ. ಕರ್ನಾಟಕ ವಿ.ವಿ. ಆವರಣದಿಂದ ಆನೆಯು ಹೊರಬಂದಿದ್ದು, ಕಲಘಟಗಿ ರಸ್ತೆಯ ಪೊಲೀಸ್ ತರಬೇತಿ ಶಾಲೆ ಹಿಂಭಾಗದ ಉಸುಕಿನ ಅಡ್ಡಾ ಸುತ್ತಲಿನ ಪ್ರದೇಶಗಳಲ್ಲಿ ಇಂದು ಗೋಚರಿಸಿದೆ. ಆದರೆ ಅರಣ್ಯ ಇಲಾಖೆ ಸಿಬ್ಬಂದಿಗೆ ಕಾಣಸಿಕ್ಕಿಲ್ಲ ಹಾಗಾಗಿ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ ತಿಳಿಸಿದ್ದಾರೆ.
Advertisement
Advertisement
ಇಂದು ಬೆಳಗ್ಗೆ ಆನೆಯು ಹೆದ್ದಾರಿ ದಾಟಲು ಪ್ರಯತ್ನಿಸಿದೆ. ಜನ ಹಾಗೂ ವಾಹನ ಸಂಚಾರ ನೋಡಿ ಮರಳಿ ಬಂದಿದೆ. ಗದಗ ಪ್ರಾಣಿ ಸಂಗ್ರಹಾಲಯ ಹಾಗೂ ಶಿವಮೊಗ್ಗದಿಂದ ತಜ್ಞವೈದ್ಯರು ಬರುತ್ತಿದ್ದಾರೆ, ಅರವಳಿಕೆ ಮದ್ದು ನೀಡುವ ಗನ್ ಕೂಡ ತರಿಸಲಾಗುತ್ತಿದೆ, ಶಿವಮೊಗ್ಗದ ಸಕ್ರೆಬೈಲು ಆನೆಬಿಡಾರದಿಂದ ತರಬೇತಿ ಹೊಂದಿದ ಮೂರು ಆನೆಗಳು ಕೂಡ ಬರುತ್ತಿವೆ. ಅವುಗಳ ನೆರವಿನಿಂದ ಕಾರ್ಯಾಚರಣೆ ಮುಂದುವರಿಯಲಿದೆ. ಹಾಗಾಗಿ ಪೊಲೀಸ್ ತರಬೇತಿ ಶಾಲೆ, ಕೇಂದ್ರೀಯ ವಿದ್ಯಾಲಯ, ಮೈಲಾರ ಲಿಂಗೇಶ್ವರ ನಗರ, ನುಗ್ಗಿಕೇರಿ ಮತ್ತಿತರ ಪ್ರದೇಶಗಳ ನಾಗರಿಕರು ಹೆಚ್ಚು ಎಚ್ಚರಿಕೆವಹಿಸಬೇಕು, ಮತ್ತು ಗ್ರಾಮಸ್ಥರು ಅನಗತ್ಯವಾಗಿ ಒಂದೆಡೆ ಸೇರಿದರೆ ಕಾರ್ಯಾಚರಣೆಗೆ ತೊಂದರೆಯಾಗುತ್ತದೆ. ಹಾಗಾಗಿ ಗುಂಪುಗೂಡಬಾರದು ಎಂದು ಸಾರ್ವಜನಿಕರಲ್ಲಿ ಯಶಪಾಲ್ ಅವರು ಮನವಿ ಮಾಡಿಕೊಂಡಿದ್ದಾರೆ.
Advertisement