– ಬಿಸಿಸಿಐ ಸಿದ್ಧಪಡಿಸಿದೆ ಕೋವಿಡ್ 19 ಮಾರ್ಗಸೂಚಿ
– ಶೀಘ್ರವೇ ಐಪಿಎಲ್ ತಂಡಗಳಿಗೆ ಎಸ್‌ಒಪಿ ರವಾನೆ
ಮುಂಬೈ: ಕ್ರೀಡಾಂಗಣದಲ್ಲಿ ಅಭಿಮಾನಿಗಳು ಇರಬಾರದು, ವೀಕ್ಷಕ ವಿವರಣೆಗಾರರು 6 ಅಡಿ ಅಂತರ ಕಾಯ್ದುಕೊಳ್ಳಬೇಕು. ಡ್ರೆಸ್ಸಿಂಗ್ ಕೋಣೆಯಲ್ಲಿ 15ಕ್ಕಿಂತ ಹೆಚ್ಚಿನ ಆಟಗಾರರು ಸೇರುವಂತಿಲ್ಲ. ಎರಡು ವಾರದಲ್ಲಿ 4 ಬಾರಿ ಕೋವಿಡ್ ಪರೀಕ್ಷೆ. ಪಂದ್ಯ ಮುಗಿದ ಬಳಿಕ ನಡೆಯುವ ಬಹುಮಾನ ವಿತರಣೆ ವೇಳೆಯೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು – ಇದು ಐಪಿಎಲ್ ಫ್ರಾಂಚೈಸಿಗಳಿಗೆ ಬಿಸಿಸಿಐ ಸಿದ್ಧಪಡಿಸಿರುವ ಕೋವಿಡ್-19 ಸುರಕ್ಷಾ ಮಾರ್ಗಸೂಚಿ.
ಯುಎಇಯಲ್ಲಿ ಈ ಬಾರಿ ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗೆ ಐಪಿಎಲ್ ನಡೆಸಲು ಸಿದ್ಧತೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಐಪಿಎಲ್ ಫ್ರಾಂಚೈಸಿಗಳು ಅಳವಡಿಸಿಕೊಳ್ಳಬೇಕಾದ ಕೋವಿಡ್ ಮಾರ್ಗಸೂಚಿಯನ್ನು ತಯಾರಿಸಿದ್ದು ಶೀಘ್ರವೇ ಎಲ್ಲ ತಂಡಗಳಿಗೆ ರವಾನಿಸಲಿದೆ.
ಈಗಾಗಲೇ ಬಿಸಿಸಿಐ ಮನವಿಯನ್ನು ಸ್ವೀಕರಿಸಿರುವ ಎಮಿರೇಟ್ಸ್ ಕ್ರಿಕೆಟ್ ಬೋರ್ಡ್ ಐಪಿಎಲ್ ಆಯೋಜಿಸಲು ಒಪ್ಪಿಗೆ ನೀಡಿದೆ. ಐಪಿಎಲ್ -13 ಅನ್ನು ಯುಎಇಗೆ ಸ್ಥಳಾಂತರಿಸಲು ಕೇಂದ್ರ ಸರ್ಕಾರ ಇಲ್ಲಿಯವರೆಗೆ ಅನುಮೋದನೆ ನೀಡಿಲ್ಲ
ಎಸ್‌ಒಪಿಯಲ್ಲಿ ಏನಿದೆ?
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು ರೂಪಿಸಿದ ಮಾನದಂಡಗಳ ಪ್ರಕಾರ ಬಿಸಿಸಿಐ ಎಸ್‌ಒಪಿ ಸಿದ್ಧಪಡಿಸಿದೆ. ಪಂದ್ಯಾವಳಿಯ ಪ್ರಾರಂಭದ ಎರಡು ವಾರಗಳ ಮೊದಲು ಪ್ರತಿ ಆಟಗಾರನು ನಾಲ್ಕು ಕೋವಿಡ್ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು. ಎರಡು ಪರೀಕ್ಷೆ ನಿರ್ಗಮನಕ್ಕೆ ಮೊದಲು ಭಾರತದಲ್ಲಿ ನಡೆದರೆ ಇನ್ನು ಎರಡು ಯುಎಇಯಲ್ಲಿ ಕ್ವಾರಂಟೈನ್ ಆಗಿರುವಾಗ ನಡೆಯಬೇಕು.
ಬಿಸಿಸಿಐ ಅಧಿಕಾರಿಯೊಬ್ಬರು ಮಾಧ್ಯಮದ ಜೊತೆ ಮಾತನಾಡಿ, ಮೈದಾನದಲ್ಲಿರುವ ಆಟಗಾರರು ಮಾತ್ರವಲ್ಲ, ಅವರ ಪತ್ನಿಯರು/ಗೆಳತಿಯರು, ಫ್ರ್ಯಾಂಚೈಸ್ ಮಾಲೀಕರು, ಚಾಲಕರು ಎಲ್ಲರೂ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಎಲ್ಲರಿಗೂ ನಿಯಮಗಳು ಅನ್ವಯವಾಗುತ್ತಿದ್ದು ‘ಬಯೋ ಬಬಲ್ʼ ಅನ್ನು ಯಾರೂ ಉಲ್ಲಂಘಿಸುವಂತಿಲ್ಲ ಎಂದು ತಿಳಿಸಿದ್ದಾರೆ.
ಪತ್ನಿಯಂದಿರು, ಕುಟುಂಬದ ಸದಸ್ಯರು ಆಟಗಾರರ ಜೊತೆ ಬರಬೇಕೇ ಬೇಡವೇ ಎಂಬುದನ್ನು ಬಿಸಿಸಿಐ ನಿರ್ಧರಿಸುವುದಿಲ್ಲ. ಈ ಆಯ್ಕೆಯನ್ನು ಫ್ರಾಂಚೈಸಿಗೆ ನೀಡಲಾಗಿದೆ. ಒಂದು ಬಾರಿ ತಂಡದ ಜೊತೆ ಸಂಪರ್ಕಕ್ಕೆ ಬಂದರೆ ಎಲ್ಲರೂ ಮಾರ್ಗಸೂಚಿಯನ್ನು ಪಾಲಿಸಬೇಕಾಗುತ್ತದೆ ಎಂದು ಹೇಳಿದರು.
ತಂಡದ ಆಟಗಾರರು, ಸಿಬ್ಬಂದಿ ಒಂದು ಬಾರಿ ಹೋಟೆಲ್‌ನಲ್ಲಿ ವ್ಯವಸ್ಥೆ ಕಲ್ಪಿಸಿದ ಬಳಿಕ ಮತ್ತೆ ಹೋಟೆಲ್ ಬದಲಾವಣೆಗೆ ಅವಕಾಶವಿಲ್ಲ. ನೆಗೆಟಿವ್ ಬಂದಿರುವ ಹೋಟೆಲ್ ಸಿಬ್ಬಂದಿಗೆ ಮಾತ್ರ ಆಟಗಾರರ ಡ್ರೆಸ್ಸಿಂಗ್ ರೂಂಗೆ ಪ್ರವೇಶ ನೀಡಲಾಗುತ್ತದೆ. ಬಿಸಿಸಿಐ ಈಗಾಗಲೇ ಆಟಗಾರರ ಸುರಕ್ಷತೆ ದೃಷ್ಟಿಯಿಂದ ಕೋವಿಡ್ ನಿಯಮಗಳು ಪಾಲನೆ ಮಾಡಲು ಸಾಧ್ಯವಿರುವ ಹೋಟೆಲ್‌ಗಳನ್ನು ಬುಕ್ ಮಾಡುವಂತೆ ಫ್ರಾಂಚೈಸಿಗಳಿಗೆ ಸೂಚಿಸಿದೆ.
ಅಭಿಮಾನಿಗಳಿಗೆ ಪ್ರವೇಶ ನೀಡಲಾಗುತ್ತಾ ಎಂಬ ಪ್ರಶ್ನೆಗೆ, ಟೂರ್ನಿಯ ಆರಂಭದಲ್ಲಿ ನಾವು ಈ ರಿಸ್ಕ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ಮುಂದೆ ಪರಿಸ್ಥಿತಿಯನ್ನು ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿ ತಿಳಿಸಿದರು.
ಗಲ್ಫ್ ನ್ಯೂಸ್ ಪ್ರಕಾರ, ಯುಎಇಯಲ್ಲಿ ಬುಧವಾರ 375 ಮಂದಿಗೆ ಸೋಂಕು ದೃಢಪಟ್ಟಿದೆ. ಇಲ್ಲಿಯವರೆಗೆ ಒಟ್ಟು 59,921 ಮಂದಿಗೆ ಸೋಂಕು ಬಂದಿದ್ದು, ಇಲ್ಲಿಯವರೆಗೆ 53,202 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
ಏನಿದು ಬಯೋ ಬಬಲ್?
ಕೋವಿಡ್ 19 ಬಳಿಕ ಈ ಬಯೋಬಬಲ್ ಪದ ಸಾಕಷ್ಟು ಸದ್ದು ಮಾಡುತ್ತಿದೆ. ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಮೊದಲ ಬಾರಿಗೆ ಕ್ರಿಕೆಟ್‌ನಲ್ಲಿ ಇದನ್ನು ಅಳವಡಿಸಿತ್ತು. ಆಟಗಾರರು ಹೊರ ಪ್ರಪಂಚದದಿಂದ ಪ್ರತ್ಯೇಕವಾಗಿ ಸುರಕ್ಷಿತ ವಾತವರಣದಲ್ಲಿರುವ ಪ್ರದೇಶವೇ ಬಯೋ ಬಬಲ್. ಈ ನಿರ್ಧಿಷ್ಟ ಪ್ರದೇಶದಲ್ಲಿ ಕೆಲವೇ ಮಂದಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಮಾಧ್ಯಮದರ ಪ್ರವೇಶಕ್ಕೂ ನಿರ್ಬಂಧ ಹೇರಲಾಗುತ್ತದೆ. ಈ ಜಾಗದಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಬೇಕಾಗುತ್ತದೆ. ಉಷ್ಣಾಂಶ ತಪಾಸಣೆ, ಪ್ರತಿದಿನವೂ ಆರೋಗ್ಯದ ವರದಿಯನ್ನು ನಮೂದಿಸಬೇಕಾಗುತ್ತದೆ.