CricketLatestMain PostSports

ಐಪಿಎಲ್‍ನಲ್ಲಿ ಮತ್ತೊಂದು ದಾಖಲೆ ಬರೆಯಲು ಸಿದ್ಧರಾದ ವಿರಾಟ್ ಕೊಹ್ಲಿ

ಬೆಂಗಳೂರು: 2008ರಲ್ಲಿ ಪ್ರಾರಂಭಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಜಾತ್ರೆ, ತನ್ನ ಯಶಸ್ವಿ 13ನೇ ಆವೃತ್ತಿಯನ್ನು ಮುಗಿಸಿ 14ನೇ ಆವೃತ್ತಿಯನ್ನು ಆರಂಭ ಮಾಡಲು ಇನ್ನು ಕೇವಲ ಮೂರು ದಿನಗಳು ಬಾಕಿ ಇದೆ. ಈ ನಡುವೆ ಆರ್‌ಸಿಬಿ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಆರಂಭದಿಂದ 14 ಆವೃತ್ತಿವರೆಗೂ ಒಂದೇ ತಂಡವನ್ನು ಪ್ರತಿನಿಧಿಸಿರುವ ಏಕೈಕ ಆಟಗಾರನೆಂಬ ಹೆಗ್ಗಳಿಕೆ ಪಾತ್ರರಾಗಲಿದ್ದಾರೆ.

ಐಪಿಎಲ್ ಆರಂಭವಾದಗಿನಿಂದ ಆರ್‌ಸಿಬಿ ತಂಡದಲ್ಲಿ ಸತತ 13 ಆವೃತ್ತಿಗಳಲ್ಲಿ ಕಾಣಿಸಿಕೊಂಡಿರುವ ವಿರಾಟ್, ಇದೀಗ 14ನೇ ಆವೃತ್ತಿಯಲ್ಲಿಯೂ ಆರ್‌ಸಿಬಿ ಪರ ಕಣಕ್ಕಿಳಿಯಲು ಸಿದ್ಧತೆ ಆರಂಭಿಸಿದ್ದಾರೆ. ಈ ಮೂಲಕ ವಿರಾಟ್ ನೂತನ ದಾಖಲೆ ಬರೆಯಲು ಅಣಿಯಾಗುತ್ತಿದ್ದಾರೆ. ಐಪಿಎಲ್ 2008ರಲ್ಲಿ ಪ್ರಾರಂಭವಾದಗಿನಿಂದ ಹಿಡಿದು ಎಲ್ಲಾ 14 ಸೀಸನ್‍ಗಳಲ್ಲಿ ಒಂದೇ ತಂಡದ ಪರ ಆಟವಾಡಿದ ಏಕೈಕ ಆಟಗಾರನಾಗಿ ವಿರಾಟ್ ಹೊರಹೊಮ್ಮಿದ್ದಾರೆ.

2008 ರಲ್ಲಿ ಪ್ರಾರಂಭಗೊಂಡ ಚೊಚ್ಚಲ ಐಪಿಎಲ್‍ನಲ್ಲಿ ಆರ್‌ಸಿಬಿ ತಂಡಕ್ಕೆ ಸಾಮಾನ್ಯ ಓರ್ವ ಆಟಗಾರನಾಗಿ ಆಯ್ಕೆಗೊಂಡ ವಿರಾಟ್ ನಂತರ ತನ್ನ ಉತ್ತಮ ಬ್ಯಾಟಿಂಗ್‍ನಿಂದಾಗಿ ಆರ್‌ಸಿಬಿಯ ಪ್ರಮುಖ ಅಟಗಾರನಾಗಿ ಕಾಣಿಸಿಕೊಂಡರು. ನಂತರ 2013ರ ಬಳಿಕ ಆರ್‌ಸಿಬಿ ತಂಡದ ನಾಯಕನಾಗಿ ನೇಮಕಗೊಂಡ ವಿರಾಟ್ ಕಳೆದ 9 ಸೀಸನ್‍ಗಳಲ್ಲಿ ನಾಯಕನ ಸ್ಥಾನದಲ್ಲಿ ಮುಂದುವರಿಯುತ್ತಿದ್ದಾರೆ.

ಓರ್ವ ಯಶಸ್ವಿ ಬ್ಯಾಟ್ಸ್‌ಮ್ಯಾನ್ ಆಗಿ ಐಪಿಎಲ್‍ನಲ್ಲಿ ಉತ್ತಮ ಸಾಧನೆ ಮಾಡಿರುವ ವಿರಾಟ್ ಇಷ್ಟು ಸೀಸನ್‍ಗಳಲ್ಲಿ ಕಪ್ ಎತ್ತಿಹಿಡಿಯುವ ಅದೃಷ್ಟ ಮಾತ್ರ ಒಲಿಸಿಕೊಂಡಿಲ್ಲ. ಆರಂಭದ ಸೀಸನ್‍ಗಳಲ್ಲಿ ಅನಿಲ್ ಕುಂಬ್ಳೆ ಸಾರಥ್ಯದಲ್ಲಿ ಬೆಂಗಳೂರು ಪರ ಬ್ಯಾಟ್ಸ್‌ಮ್ಯಾನ್ ಆಗಿ ಆಡಿದ್ದ ಕೊಹ್ಲಿ ನಂತರ 2013ರಿಂದ ತಾನೇ ನಾಯಕನ ಪಟ್ಟ ಏರಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆದರೆ ಇಷ್ಟು ಸೀಸನ್ ಗಳಲ್ಲಿ ಕಪ್ ಮಾತ್ರ ಗೆದಿಲ್ಲ. 13 ಆವೃತ್ತಿಗಳಲ್ಲಿ 3 ಬಾರಿ ಫೈನಲ್ ಪ್ರವೇಶಿಸಿರುವ ಬೆಂಗಳೂರು ಮೂರು ಬಾರಿಯೂ ಮುಗ್ಗರಿಸಿದೆ.

2009ರಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದ ಬೆಂಗಳೂರು, ಡೆಕ್ಕನ್ ಚಾರ್ಜಸ್ ವಿರುದ್ಧ ಫೈನಲ್‍ನಲ್ಲಿ ಸೋತರೆ, 2011ರಲ್ಲಿ ಮತ್ತೆ ಫೈನಲ್ ಪ್ರವೇಶಿಸಿ ಚೆನ್ನೈ ತಂಡದ ವಿರುದ್ಧ ಸೋಲುಕಂಡಿತು. ಬಳಿಕ 2016ರಲ್ಲಿ ಮತ್ತೆ ಲೀಗ್‍ನಲ್ಲಿ ಉತ್ತಮ ಆಟದ ಮೂಲಕ ಫೈನಲ್ ಪ್ರವೇಶಿಸಿದ ಆರ್‌ಸಿಬಿ ಹೈದರಾಬಾದ್ ತಂಡದ ವಿರುದ್ಧ ಮುಖಭಂಗ ಅನುಭವಿಸಬೇಕಾಯಿತು. ಹಲವು ಪ್ರತಿಭಾನ್ವಿತ ಆಟಗಾರರನ್ನು ಒಳಗೊಂಡಿರುವ ಆರ್‌ಸಿಬಿ ತಂಡ ಈ ಬಾರಿ ಮತ್ತೆ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ.

ಪ್ರತಿ ಬಾರಿ ಈ ಸಲ ಕಪ್ ನಮ್ದೇ ಎನ್ನುತ್ತಿದ್ದ ಬೆಂಗಳೂರು ತಂಡಕ್ಕೆ ಆಸ್ಟ್ರೇಲಿಯಾದ ಆಲ್‍ರೌಂಡರ್ ಗ್ಲೇನ್ ಮ್ಯಾಕ್ಸ್ ವೇಲ್, ಡೇನಿಯಲ್ ಕ್ರಿಶ್ಚಿಯನ್ ಮತ್ತು ಕೈಲ್ ಜೇಮಿಸನ್ ಅವರ ಆಗಮನದಿಂದ ಮೇಲ್ನೊಟಕ್ಕೆ ಮತ್ತೆ ಬಲಿಷ್ಠವಾಗಿ ಗೋಚರಿಸುತ್ತಿದೆ. ಹಾಗಾಗಿ ಇಷ್ಟು ಆವೃತ್ತಿಗಳ ಪ್ರಶಸ್ತಿಯ ಬರವನ್ನು ಈ ಬಾರಿಯಾದರೂ ನೀಗಿಸುವರೇ ಎಂಬ ಕಾತರ ಅಭಿಮಾನಿಗಳಲ್ಲಿ ಮೂಡಿದೆ.

Leave a Reply

Your email address will not be published.

Back to top button