ಮುಂಬೈ: ಐಪಿಎಲ್ 2020ರ ಆವೃತ್ತಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಆಟಗಾರರಿಗೆ ಪಂದ್ಯದ ತರಬೇತಿಗಾಗಿ ಅಂತಾರಾಷ್ಟ್ರೀಯ ಟಿ20 ಸರಣಿಯೊಂದನ್ನು ನಿರ್ವಹಿಸುವಂತೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಸ್ಟೇಕ್ ಹೋಲ್ಡರ್ಸ್ ಒತ್ತಡ ತಂದಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಕೊರೊನಾ ಕಾರಣದಿಂದ ಕಳೆದ ಮಾರ್ಚ್ ತಿಂಗಳಿನಿಂದ ಆಟಗಾರರು ಮನೆಯಲ್ಲೇ ಉಳಿದಿದ್ದಾರೆ. ಅಲ್ಲದೇ ಕೇವಲ ನೆಟ್ ತರಬೇತಿ ಮಾತ್ರ ಪಡೆದಿದ್ದಾರೆ. ಪರಿಣಾಮ ನೆಟ್ ತರಬೇತಿ ಪಡೆದು ಐಪಿಎಲ್‍ನಲ್ಲಿ ಆಟಗಾರರು ಫಾರ್ಮ್‍ಗೆ ಮರಳುವುದು ಕಷ್ಟಸಾಧ್ಯವಾಗಲಿದೆ ಎಂಬುವುದು ಸ್ಟೇಕ್ ಹೋಲ್ಡರ್ಸ್ ಅಭಿಪ್ರಾಯವಾಗಿದೆ. ಆದ್ದರಿಂದ ಆಗಸ್ಟ್ ನಲ್ಲಿ ಮೂರು ಪಂದ್ಯಗಳ ಟಿ20 ಸರಣಿಯನ್ನು ಟೀಂ ಇಂಡಿಯಾ ಆಡುವ ಸಾಧ್ಯತೆ ಇದೆ. ಇದನ್ನೂ ಓದಿ: ಸೆಪ್ಟೆಂಬರ್ 26 ರಿಂದ ಐಪಿಎಲ್ ಆರಂಭ..!
ಈಗಾಗಲೇ ಬಿಸಿಸಿಐ ಸೆ.26 ರಿಂದ ನ.8 ವರೆಗೆ ದುಬೈನಲ್ಲಿ ಐಪಿಎಲ್ ಟೂರ್ನಿ ನಡೆಸಲು ಚಿಂತನೆ ನಡೆಸಿದೆ. ಇದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದರೆ ಟೂರ್ನಿಯನ್ನು ಶೆಡ್ಯೂಲನ್ನು ಬಿಸಿಸಿಐ ಬಿಡುಗಡೆ ಮಾಡಲಿದೆ. ಆದ್ದರಿಂದ ಐಪಿಎಲ್ ಸರಣಿಗೂ ಮುನ್ನ ಟೀಂ ಇಂಡಿಯಾ ಆಟಗಾರರಿಗೆ ಟಿ20 ಸರಣಿ ಆಯೋಜಿಸುವ ಒತ್ತಡ ಬಿಸಿಸಿಐ ಮೇಲಿದೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಮಾರ್ಚ್‍ನಲ್ಲಿ ಮೂರು ಪಂದ್ಯಗಳ ಟಿ20 ಸರಣಿ ನಡೆಯಬೇಕಾಗಿತ್ತು. ಆದರೆ ಮೊದಲ ಪಂದ್ಯ ಮಳೆಯಿಂದ ರದ್ದಾದರೆ, ಉಳಿದ 2 ಪಂದ್ಯಗಳನ್ನು ಕೊರೊನಾ ಕಾರಣದಿಂದ ಬಿಸಿಸಿಐ ಮುಂದೂಡಿತ್ತು. ಆ ಬಳಿಕ ಭಾರತದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಬ್ರೇಕ್ ಬಿದ್ದಿತ್ತು. ಪರಿಣಾಮ ಬಿಸಿಸಿಐ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್ ಪುನರ್ ಆರಂಭಿಸುವ ಚಿಂತನೆ ಹೊಂದಿದ್ದು, ದುಬೈನಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಆಯೋಜಿಸುವ ಸಾಧ್ಯತೆ ಇದೆ.
ಇತ್ತ ಬಿಸಿಸಿಐ ಒಪ್ಪಂದ ಹೊಂದಿರುವ ಆಟಗಾರರಿಗೆ ಅಹ್ಮದಾಬಾದ್‍ನಲ್ಲಿ ತರಬೇತಿ ಶಿಬಿರ ಆಯೋಜಿಸುವ ಸಾಧ್ಯತೆ ಇದೆ. ಕೇವಲ ತಮ್ಮ ಫಿಟ್ನೆಸ್ ಕಾಯ್ದುಕೊಳ್ಳಲು ಆಟಗಾರರು ಮನೆಯಲ್ಲಿ ದೇಹ ದಂಡಿಸುತ್ತಿದ್ದರು. ಬಿಸಿಸಿಐ ಶಿಬಿರ ಆಟಗಾರರಿಗೆ ಕ್ರಿಕೆಟ್‍ಗೆ ಮರಳಲು ಅವಕಾಶ ನೀಡಲಿದೆ.