– ಶಾಲೆಯಲ್ಲಿ ಹಾಡು, ನಾಟಕಗಳಲ್ಲಿ ಎತ್ತಿದ ಕೈ
– ಆರ್ಕೇಸ್ಟ್ರಾದಿಂದ ಆರ್ಟಿಸ್ಟ್
ಬೆಂಗಳೂರು: `ಎಂದರೋ ಮಹಾನುಭವುಲು’ ನಿರ್ಮಿಸಿದಂತಹ ಸಂಗೀತ ಸೌಧದ ಮೇಲೆ ದಶಕಗಳ ಕಾಲ ರಾರಾಜಿಸಿದವರು ಶ್ರೀಪತಿ ಪಂಡಿತಾರಾಧ್ಯುಲು ಬಾಲಸುಬ್ರಹ್ಮಣ್ಯಂ. ಅಬಾಲ ವೃದ್ಧರನ್ನು ಕಟ್ಟಿ ಹಾಕುವ ಸ್ವರಶಕ್ತಿ ಅವರ ಕಂಠಕ್ಕೆ ಮಾತ್ರವಲ್ಲ, ಅವರ ವ್ಯಕ್ತಿತ್ವಕ್ಕೂ ಇತ್ತು.
ಸಿನಿಮಾ ಇಂಡಸ್ಟ್ರಿಯಲ್ಲಿ ನಟನಾಗಿ ಮೊದಲಿಗೆ ಕಾಣಿಸಿಕೊಂಡರೂ, ನಂತರ ಅವರು ಗಾಯಕರಾಗಿ ಅಜರಾಮರವಾದ ಎಷ್ಟೋ ಹಾಡುಗಳನ್ನು ಆಲಾಪಿಸಿದರು. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ, ಬೋಜಪುರಿ ಸೇರಿದಂತೆ ಹಲವು ಭಾಷೆಗಳಲ್ಲಿ ಎಸ್ಪಿಬಿ ಹಾಡಿದ ಹಾಡುಗಳು ಚಿರಸ್ಥಾಯಿ ಆಗಿರಲಿವೆ. ಗಾಯಕರಾಗಿ, ನಟರಾಗಿ, ಡಬ್ಬಿಂಗ್ ಆರ್ಟಿಸ್ಟ್ ಆಗಿ, ಕಿರುತೆರೆ ನಿರೂಪಕರಾಗಿ, ಹೀಗೆ ಬಾಲುಗಾರು ನಿಜಕ್ಕೂ ಬಹುಮುಖ ಪ್ರಜ್ಞಾಶಾಲಿ. ಆದರೆ ಅವರೆಲ್ಲ ಸಾಧನೆಗೆ ಅಡಿಪಾಯ ಹಾಕಿದವರೇ ಅವರ ತಂದೆ. ಅದೂ ಸಹ ಹರಿಕಥೆಗಳ ಮೂಲಕ ಎನ್ನುವುದು ವಿಶೇಷ.
Advertisement
Advertisement
ಎಸ್.ಪಿ.ಬಾಲಸುಬ್ರಹ್ಮಣ್ಯಂ 1946ರ ಜೂನ್ 4ರಂದು ಆಂಧ್ರದ ನೆಲ್ಲೂರು ಜಿಲ್ಲೆಯ ಕೋನೇಟಮ್ಮ ಪೇಟೆಯಲ್ಲಿ ಜನಿಸಿದರು. ತಂದೆ ಸಾಂಬಮೂರ್ತಿ, ತಾಯಿ ಶಕುಂತಲಮ್ಮ, ತಂದೆ ಹರಿಕಥೆ ಹೇಳುತ್ತಿದ್ದರು. ಭಕ್ತಿ ರಸ ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ಹೀಗಾಗಿ ಬಾಲಸುಬ್ರಹ್ಮಣ್ಯಂ ಅವರಿಗೆ ಚಿಕ್ಕವಯಸ್ಸಿನಲ್ಲೇ ಸಂಗೀತದ ಮೇಲೆ ಆಸಕ್ತಿ ಬೆಳೆಯಿತು. ಐದನೇ ವಯಸ್ಸಿನಲ್ಲಿಯೇ ಭಕ್ತರಾಮದಾಸು ನಾಟಕದಲ್ಲಿ ತಂದೆ ಜೊತೆ ಬಾಲು ನಟಿಸಿದ್ದರು. ಪ್ರಾಥಮಿಕ ಶಿಕ್ಷಣವನ್ನು ಸೋದರಮಾವನ ಮನೆಯಲ್ಲಿ ಪೂರ್ಣಗೊಳಿಸಿ, ಸ್ಕೂಲ್ ಫೈನಲ್ ಶಿಕ್ಷಣವನ್ನು ಶ್ರೀಕಾಳಹಸ್ತಿಯಲ್ಲಿ ಪೂರೈಸಿದ್ದರು. ಶಾಲೆಯಲ್ಲಿ ಕೇವಲ ಓದಿನಲ್ಲಿ ಮಾತ್ರವಲ್ಲ, ಆಟಗಳಲ್ಲಿಯೂ ಎಸ್ಪಿಬಿ ಮೊದಲಿಗರಾಗಿದ್ದರು.
Advertisement
Advertisement
ಶಾಲೆಯಲ್ಲಿ ಹಾಡು, ನಾಟಕಗಳಲ್ಲಿ ಎತ್ತಿದ ಕೈ
ಶ್ರೀಕಾಳಹಸ್ತಿಯ ಬೋರ್ಡ್ ಶಾಲೆಯ ಜಿ.ವಿ.ಸುಬ್ರಹ್ಮಣ್ಯಂ ಎಂಬ ಶಿಕ್ಷಕರು, ಬಾಲು ಅವರಿಂದ ಹಾಡೊಂದನ್ನು ಹಾಡಿಸಿ ರೆಕಾರ್ಡ್ ಮಾಡಿದ್ದರು. ಇದು ಬಾಲುಗಾರು ಅವರಿಗೆ ಮರೆಯಲಾಗದ ಅನುಭೂತಿ. ಮತ್ತೊಬ್ಬ ಶಿಕ್ಷಕರಾದ ರಾಧಾಪತಿ ಪ್ರೋತ್ಸಾಹದಿಂದ ಹಲವು ನಾಟಕಗಳಲ್ಲಿ ನಟಿಸಿದ್ದರು. ತಿರುಪತಿಯಲ್ಲಿ ಪಿಯುಸಿ ಓದುತ್ತಿದ್ದಾಗ ಮದ್ರಾಸ್ ಆಲ್ ಇಂಡಿಯಾ ರೇಡಿಯೋದಲ್ಲಿ ಪ್ರಸಾರವಾದ ನಾಟಕದಲ್ಲಿ ಸ್ತ್ರೀಪಾತ್ರದಲ್ಲಿ ಅಭಿನಯಿಸಿದ್ದರು. ವಿಜಯವಾಡ ಆಕಾಶವಾಣಿಯಲ್ಲಿ ಹಾಡುಗಳನ್ನು ಹಾಡಿದ್ದರು.
ಆರ್ಕೇಸ್ಟ್ರಾದಿಂದ ಆರ್ಟಿಸ್ಟ್
ಎಸ್ಪಿ ಬಾಲಸುಬ್ರಹ್ಮಣ್ಯಂ ಪಿಯುಸಿ ಬಳಿಕ ಒಂದು ಆರ್ಕೆಸ್ಟ್ರಾ ಶುರು ಮಾಡಿದ್ದರು. ಗೆಳೆಯರೊಂದಿಗೆ ಆರ್ಕೆಸ್ಟ್ರಾ ಮೂಲಕ ಸ್ಟೇಜ್ ಶೋ ನೀಡುತ್ತಿದ್ದರು. ಅನಂತಪುರದಲ್ಲಿ ಎಂಜಿನಿಯರಿಂಗ್ ಕಾಲೇಜು ಸೇರಿ ನಂತರ ಅದು ಹಿಡಿಸದೇ ಮದ್ರಾಸ್ಗೆ ತೆರಳಿ ಎಂಜಿಯರಿಂಗ್ಗೆ ಪರ್ಯಾಯ ಎನಿಸಿದ್ದ ಎಎಂಐಇಗೆ ಸೇರಿದ್ದರು. ಅಲ್ಲಿ ಓದಿನ ಜೊತೆಗೆ ಸಿನಿಮಾದಲ್ಲಿ ಹಾಡಲು ಪ್ರಯತ್ನ ನಡೆಸಿದ್ದರು. ಒಂದು ವರ್ಷದ ಬಳಿಕ ಮಹ್ಮದ್ ಬಿನ್ ತುಘಲಕ್ ಸಿನಿಮಾದಲ್ಲಿ ನಟನಾಗಿ ಕಾಣಿಸಿಕೊಂಡರು. ಹ್ಯಾಪಿ ಬರ್ತ್ ಡೇ ಟು ಯೂ ಎಂದು ಹಾಡುವ ಮೂಲಕ ಮೊದಲ ಬಾರಿಗೆ ಬೆಳ್ಳಿತೆರೆಯ ಮೇಲೆ ದರ್ಶನ ನೀಡಿದ್ದರು.
1964ರಲ್ಲಿ ಮದ್ರಾಸ್ ಸೋಷಿಯಲ್ ಅಂಡ್ ಕಲ್ಚರಲ್ ಕ್ಲಬ್ ನಿರ್ವಹಿಸಿದ ಲಲಿತಾ ಸಂಗೀತಾ ಸ್ಪರ್ಧೆಯಲ್ಲಿ ಪಾಲ್ಗೊಂಡ ಎಸ್ಪಿಬಿಗೆ ಮೊದಲ ಬಹುಮಾನ ಬಂತು. ಪೆಂಡ್ಯಾಲ, ಘಂಟಸಾಲ ಅವರು ಜಡ್ಜ್ಗಳಾಗಿದ್ದರು. ಖ್ಯಾತ ಸಂಗೀತ ನಿರ್ದೇಶಕ ಕೋದಂಡಪಾಣಿ, ಎಸ್ಪಿಬಿ ಗಾಯನ ಕಂಡು ಮಂತ್ರಮುಗ್ಧರಾಗಿದ್ದರು. ಮುಂದೆ ಎಸ್ಪಿಬಿಗೆ ಸಿನಿಮಾದಲ್ಲಿ ಹಾಡಲು ಅವಕಾಶ ನೀಡೋದಾಗಿ ಕೋದಂಡಪಾಣಿ ಮಾತು ನೀಡಿದ್ದರು.
ಎಸ್ಪಿಬಿ ಮೊದಲ ಹಾಡು
ಯಾರ ಬಳಿಯೂ ಶಾಸ್ತ್ರೀಯವಾಗಿ ಸಂಗೀತಾಭ್ಯಾಸ ಮಾಡದೇ ಇದ್ದರೂ ಎಸ್ಪಿಬಿಗೆ ಜನ್ಮದತ್ತವಾಗಿ ಸಂಗೀತ ಸರಸ್ವತಿ ಒಲಿದಿದ್ದಳು. ಹೀಗಾಗಿ ಸಂಗೀತ ನಿರ್ದೇಶಕ ಕೋದಂಡಪಾಣಿಯವರು ಕೊಟ್ಟ ಮಾತಿನಂತೆ ಎಸ್ಪಿಬಿಗೆ ಶ್ರೀಶ್ರೀಶ್ರೀ ಮರ್ಯಾದಾ ರಾಮನ್ನ ಎಂಬ ಸಿನಿಮಾದಲ್ಲಿ ಮೊದಲ ಬಾರಿಗೆ ಸಿನಿಮಾದಲ್ಲಿ ಹಾಡುವ ಅವಕಾಶ ನೀಡಿದರು. ಏಮಿ ಈ ವಿಂತ ಮೋಹಂ ಎಂಬ ಹಾಡಿಗೆ ಪಿಬಿ ಶ್ರೀನಿವಾಸ್, ಪಿ.ಸುಶೀಲಾ ಅವರೊಂದಿಗೆ ಎಸ್ಪಿಬಿ ಧ್ವನಿಯಾದರು. ಈ ಹಾಡು ಮೊದಲ ಟೇಕ್ನಲ್ಲೇ ಓಕೆ ಆಗಿದ್ದು ವಿಶೇಷ. ಮುಂದೆ ಎಸ್ಪಿಬಿ 40 ಸಾವಿರಕ್ಕೂ ಹೆಚ್ಚು ಹಾಡು ಹಾಡಿ ಗಾನಗಂಧರ್ವರಾಗಿದ್ದು ಇತಿಹಾಸ. ಕೋದಂಡಪಾಣಿ ಅವರು ಇಲ್ಲದಿದ್ದರೆ ಬಾಲು ಎಂಬ ವ್ಯಕ್ತಿ ಇರುತ್ತಿರಲಿಲ್ಲ ಎಂದು ಎಸ್ಪಿಬಿ ಅವಕಾಶ ಸಿಕ್ಕಾಗಲೆಲ್ಲಾ ಸ್ಮರಿಸುತ್ತಿದ್ದರು.