– ವಿದ್ಯಾರ್ಥಿಗಳೊಂದಿಗೆ ಸುರೇಶ್ ಕುಮಾರ್ ಸಂವಾದ
ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಗಾಗಿ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಡಿಡಿಪಿಐಗೆಗಳಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ.
ಪರೀಕ್ಷೆ ದಿನಾಂಕ ಘೋಷಣೆ ಹಿನ್ನೆಲೆ ಸಚಿವ ಸುರೇಶ್ ಕುಮಾರ್ ಅವರು ಡಿಡಿಪಿಐಗಳಿಗೆ ಪತ್ರ ಬರೆದಿದ್ದು, ಈ ಬಾರಿ ಪರೀಕ್ಷೆಯಲ್ಲಿ ಅಧಿಕಾರಿಗಳ ಜವಾಬ್ದಾರಿ ಹೆಚ್ಚಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆರೋಗ್ಯ ಪಾಲನೆಯ ಕ್ರಮಕೈಗೊಳ್ಳಬೇಕು. ವಿದ್ಯಾರ್ಥಿಗಳ ಕಲಿಕೆಯ ಹಿತಕ್ಕಾಗಿ ಪುನರ್ಮನನ ತರಗತಿಗಳನ್ನ ಪ್ರಾರಂಭ ಮಾಡಲಾಗಿದೆ. ಪರೀಕ್ಷೆಗೆ ಇಲಾಖೆ ತೆಗೆದುಕೊಂಡ ಮುಂಜಾಗ್ರತಗೆ ಅಗತ್ಯ ಕ್ರಮವಹಿಸಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಊರಿಗೆ ತೆರಳಿರೋ ಸಿಇಟಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್
Advertisement
Advertisement
ಅಷ್ಟೇ ಅಲ್ಲದೆ ಸ್ವತಃ ಸಚಿವರೇ ವಿದ್ಯಾರ್ಥಿಗಳ ಮನಸ್ಥಿತಿ ಅರಿಯಲು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ ಪರೀಕ್ಷೆಗೆ ಸಜ್ಜಾಗಿರುವ ಕುರಿತಂತೆ ವಿಚಾರಿಸಿದ್ದಾರೆ. ತಮ್ಮ ಕಚೇರಿಯಿಂದ ಶಿವಮೊಗ್ಗ, ಹೊಸಕೋಟೆ, ಬೆಂಗಳೂರು, ಬಾಗಲಕೋಟೆ, ಇಳ್ಕಲ್, ಹಾನಗಲ್, ಸವಣೂರು, ಗದಗ, ಹುಬ್ಬಳ್ಳಿ ಮತ್ತಿತರ ಭಾಗದ 40ಕ್ಕೂ ಹೆಚ್ಚು ವಿದ್ಯಾರ್ಥಿ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದ ಸಚಿವರು, ಕೊರೊನಾ ಹಿನ್ನೆಲೆಯಲ್ಲಿ ಪರೀಕ್ಷೆ ಈ ಬಾರಿ ಸ್ವಲ್ಪ ತಡವಾಗಿ ಆರಂಭವಾಗುತ್ತಿರುವುದಕ್ಕೆ ಬೇಜಾರು ಮಾಡಿಕೊಳ್ಳದೇ ಚೆನ್ನಾಗಿ ಓದಬೇಕು ಎಂದು ಸಲಹೆ ನೀಡಿದರು.
Advertisement
ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡುವುದು ಸೇರಿದಂತೆ ದೂರದರ್ಶನ ಚಂದನ ವಾಹಿನಿಯಲ್ಲಿ ಪುನರ್ಮನನ ತರಗತಿಗಳನ್ನು ನೋಡುತ್ತಿದ್ದೀರಾ ಎಂದು ಪ್ರಶ್ನಿಸಿದರು. ಸಚಿವರ ಕಚೇರಿಯಿಂದ ಫೋನ್ ಕರೆ ಬಂದ ಸಂದರ್ಭದಲ್ಲಿ ಇಳಕಲ್ನ ವಿದ್ಯಾರ್ಥಿನಿಯೊಬ್ಬಳು ಚಂದನ ವಾಹಿನಿಯಲ್ಲಿ ಪುನರ್ಮನನ ತರಗತಿಗಳನ್ನು ವೀಕ್ಷಿಸುತ್ತಿದ್ದಳು. ಪುನರ್ಮನನ ತರಗತಿಗಳು ಚೆನ್ನಾಗಿ ಮೂಡಿಬರುತ್ತಿದ್ದು, ಈಗ ಶಾಲಾ ತರಗತಿಗಳು ನಡೆಯುತ್ತಿಲ್ಲವಾದ್ದರಿಂದ ಇದರಿಂದ ಸಾಕಷ್ಟು ಉಪಯೋಗವಾಗುತ್ತಿದೆ ಎಂದು ತಿಳಿಸಿದ್ದು ಗಮನಾರ್ಹವಾಗಿತ್ತು.
Advertisement
ಶಿವಮೊಗ್ಗದ ಆದಿಚುಂಚನಗಿರಿ ಶಾಲೆಯ ವಿದ್ಯಾರ್ಥಿನಿ ಎನ್.ಎಸ್.ಶ್ರದ್ಧಾ ಒಡೆಯರಪುರ ವಿದ್ಯಾರ್ಥಿನಿ ತಮ್ಮ ಮನೆಯಲ್ಲಿ ಟಿ.ವಿ. ಇಲ್ಲವಾದ್ದರಿಂದ ಚಂದನ ವಾಹಿನಿ ನೋಡಲು ಆಗುತ್ತಿಲ್ಲ ಎಂದು ಹೇಳಿದ ತಕ್ಷಣವೇ ಶಿವಮೊಗ್ಗದ ಬಿಇಒಗೆ ಫೋನ್ ಮಾಡಿದ ಸಚಿವರು, ವಿದ್ಯಾರ್ಥಿನಿಯ ಫೋನ್ ನಂಬರ್ ನೀಡಿದ್ದಲ್ಲದೇ ಆಕೆಗೆ ಚಂದನ ವಾಹಿನಿಯ ಪುನರ್ಮನನ ತರಗತಿ ವೀಕ್ಷಿಸಲು ಸೂಕ್ತ ವ್ಯವಸ್ಥೆ ಮಾಡಿಕೊಡಲು ಸೂಚಿಸಿದರು.
ಸಚಿವರೊಂದಿಗೆ ಮಾತನಾಡಿದ ಎಲ್ಲ ವಿದ್ಯಾರ್ಥಿಗಳು ಕೊನೆಗೂ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿದ್ದರಿಂದ ಖುಷಿಯಾಗಿದ್ದು, ನಿನ್ನೆಯಿಂದಲೇ ಪರೀಕ್ಷೆಗೆ ಗಂಭೀರವಾಗಿ ಓದುತ್ತಿರುವುದಾಗಿ ಹೇಳಿಕೊಂಡರು. ಪರೀಕ್ಷೆಯೆಂದರೆ ಭೂತವಲ್ಲ, ಅದೊಂದು ಕ್ರೀಡೆ ಇದ್ದಂತೆ ಎಂದು ತಿಳಿದು ಸಂತೋಷದಿಂದ ಪರೀಕ್ಷಾ ಕೊಠಡಿಗೆ ತೆರಳುವಂತೆ ಸಚಿವರು ತಿಳಿಸಿದರು. ಹಾಗೆಯೇ ಕೊರೊನಾ ಹಿನ್ನೆಲೆಯಲ್ಲಿ ಪರೀಕ್ಷೆಗೆ ಕೈಗೊಂಡ ಸಿದ್ಧತೆಗಳನ್ನು ವಿವರಿಸಿದರಲ್ಲದೇ ತಾವು ಕಷ್ಟಪಟ್ಟು ಓದಿ ಪರೀಕ್ಷೆಯನ್ನು ಖುಷಿಯಿಂದ ಬರೆಯುವುದಷ್ಟೇ ನಿಮ್ಮ ಕೆಲಸ ಎಂದು ಸಲಹೆ ಮಾಡಿದರು.
ಹಾಗೆಯೇ ನಿಮ್ಮ ಸ್ನೇಹಿತರಾರಾದರೂ ತಮ್ಮ ಶಾಲೆಯಿಂದ ದೂರದ ಊರಿನಲ್ಲಿದ್ದರೆ, ಅವರಿಗೆ ಹತ್ತಿರದ ಪರೀಕ್ಷಾ ಕೇಂದ್ರಕ್ಕೆ ಬದಲಾಯಿಸಿಕೊಂಡು ಅವರು ಇರುವ ಊರಿನ ಸಮೀಪದಲ್ಲೇ ಪರೀಕ್ಷೆ ಬರೆಯಲು ಅವಕಾಶ ಇರುವ ಕುರಿತು ತಿಳಿಸಬೇಕೆಂದೂ ಸುರೇಶ್ ಕುಮಾರ್ ಸಲಹೆ ನೀಡಿದರು.