– ಸರದಿ ಸಾಲಲ್ಲಿ ನಿಂತು ಭಕ್ತರಿಂದ ದೇವರ ದರ್ಶನ
ಮಂಗಳೂರು/ಉಡುಪಿ: ಕೊರೊನಾ ಆತಂಕದಿಂದ ಕಳೆದ ಎರಡೂವರೆ ತಿಂಗಳಿಂದ ಲಾಕ್ ಆಗಿದ್ದ ದೇವಾಲಯಗಳನ್ನ ತೆರೆಯಲು ಸರ್ಕಾರ ಅನುಮತಿ ನೀಡಿದ್ದು, ಎರಡೂವರೆ ತಿಂಗಳ ಬಳಿಕ ಬಹುತೇಕ ದೇವಾಲಯಗಳು ಇಂದು ಮುಂಜಾನೆಯಿಂದಲೇ ಓಪನ್ ಆಗಿವೆ.
ಮಂಗಳೂರಿನಾದ್ಯಂತ ಇಂದು ದೇವಸ್ಥಾನಗಳು ಓಪನ್ ಆಗಿವೆ. ಮಂಗಳೂರಿನ ಕದ್ರಿ ಮಂಜುನಾಥಸ್ವಾಮಿ, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ, ಗಣಪತಿ ದೇವಸ್ಥಾನ ಮತ್ತು ಮಂಗಳಾದೇವಿ ದೇವಸ್ಥಾನ ಓಪನ್ ಆಗಿವೆ. ಬೆಳಗ್ಗೆ 6 ಗಂಟೆಯಿಂದ ದೇವಸ್ಥಾನಗಳಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
Advertisement
Advertisement
ಧರ್ಮಸ್ಥಳ ಮಂಜುನಾಥ ಸ್ವಾಮಿಯ ದೇವಸ್ಥಾನ ಓಪನ್ ಆಗಿದ್ದು, ಬೆಳಗ್ಗೆಯಿಂದಲೂ ಭಕ್ತರು ಸರದಿ ಸಾಲಲ್ಲಿ ನಿಂತು ಮಂಜುನಾಥನ ದರ್ಶನ ಪಡೆಯುತ್ತಿದ್ದಾರೆ. ಇದಕ್ಕೂ ಮುನ್ನ ಬಂದಂತಹ ಭಕ್ತರು ಹರಕೆ ತೀರಿಸಲು ಮುಡಿಕೇಂದ್ರದಲ್ಲಿ ಮುಡಿಕೊಟ್ಟು, ನೇತ್ರಾವತಿ ನದಿಯಲ್ಲಿ ಮಿಂದು ಮಂಜುನಾಥನ ದರ್ಶನಕ್ಕೆ ಮುಂದಾಗುತ್ತಿದ್ದಾರೆ.
Advertisement
ಮುಡಿಕೇಂದ್ರದ ಮಾರ್ಗದುದ್ಧಕ್ಕೂ ಸಿಬ್ಬಂದಿ ಭಕ್ತರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಸರಳುಗಳನ್ನ ಮುಟ್ಟಬೇಡಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ಮಾಸ್ಕ್ ಹಾಕಿ ಎಂದು ಕೂಗಿ-ಕೂಗಿ ಹೇಳುತ್ತಿದ್ದಾರೆ. ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡುತ್ತಿದ್ದು, ಸ್ಯಾನಿಟೈಸರ್ ಹಾಕುತ್ತಿದ್ದಾರೆ. ಅಲ್ಲದೇ ಮುಡಿಕೇಂದ್ರದಲ್ಲಿ ಆಗಾಗ ಶುಚಿಮಾಡುತ್ತಿದ್ದು, ಒಬ್ಬರ ಮುಡಿ ಆದ ಬಳಿಕ ಚೇರ್ ಸುತ್ತಮುತ್ತ ಕ್ಲೀನ್ ಮಾಡಿ ಮತ್ತೊಬ್ಬರನ್ನ ಕೂರಿಸುತ್ತಿದ್ದಾರೆ.
Advertisement
ಉಡುಪಿ ಜಿಲ್ಲೆ ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ಭಕ್ತರಿಗೆ ದರ್ಶನ ಅವಕಾಶ ಆರಂಭವಾಗಿದೆ. ಬೆಳಗ್ಗೆ 5.30ಕ್ಕೆ ದೇಗುಲ ಓಪನ್ ಆಗಿದ್ದು, ಬೆರಳೆಣಿಕೆ ಭಕ್ತರು ಮಾತ್ರ ಕಾಣಿಸಿಕೊಂಡಿದ್ದಾರೆ. ಮೂಕಾಂಬಿಕೆಯ ಗರ್ಭಗುಡಿ ಸಮೀಪ ದರ್ಶನಕ್ಕೆ ಅವಕಾಶ ನೀಡದ ದೇಗುಲ, ಧ್ವಜಸ್ತಂಭ ಬಳಿಯಲ್ಲೇ ಭಕ್ತರು ದೇವಿಗೆ ನಮಸ್ಕರಿಸಿ ಹೋಗಬೇಕು ಎಂಬ ನಿಯಮ ಮಾಡಿದೆ. ಶರ್ಟ್ ಬನಿಯನ್ ತೆಗೆದು ದೇವಸ್ಥಾನ ಪ್ರವೇಶದ ನಿಯಮವನ್ನು ಸದ್ಯ ಆಡಳಿತ ಮಂಡಳಿ ಕೈಬಿಟ್ಟಿದೆ.
ಇನ್ನೂ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿನ ಚಾಮುಂಡೇಶ್ವರಿ ದೇವಿಯ ದರ್ಶನ ಆರಂಭವಾಗಿದೆ. ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಹಾಕಿಕೊಂಡು ದೇವಿಯ ದರ್ಶನ ಪಡೆಯುತ್ತಿದ್ದಾರೆ. ಎರಡುವರೆ ತಿಂಗಳ ಬಳಿಕ ಇಂದಿನಿಂದ ದೇವಸ್ಥಾನಗಳಿಗೆ ಭಕ್ತರ ಪ್ರವೇಶವನ್ನು ಕಲ್ಪಿಸಲಾಗಿದೆ. ಮಲೆ ಮಹದೇಶ್ವರ ದೇವಸ್ಥಾನದಲ್ಲಿ 7 ಗಂಟೆಯಿಂದ ದೇವರ ದರ್ಶನ ಆರಂಭವಾಗಿದೆ. ಚಾಮರಾಜನಗರದಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಮಂಡ್ಯ ಜಿಲ್ಲೆಯ ಮೇಲುಕೋಟೆಯ ಪುರಾಣ ಪ್ರಸಿದ್ಧ, ಐತಿಹಾಸಿ ದೇವಸ್ಥಾನ ಚಲುವನಾರಾಯಣಸ್ವಾಮಿ ದೇವಸ್ಥಾನದಲ್ಲಿ ಭಕ್ತರೇ ಇಲ್ಲದೇ ಬಣಗುಟ್ಟುತ್ತಿದೆ. ಸಾವಿರಾರು ಭಕ್ತರು ಬರುತ್ತಿದ್ದ ಧಾರ್ಮಿಕ ಸ್ಥಳದಲ್ಲಿ ಕೊರೊನಾ ಭಯದಿಂದ ಭಕ್ತರೇ ಇಲ್ಲದಂತೆ ಆಗಿದೆ.
ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಶಿರಸಿ ಮಾರಿಕಾಂಬಾ, ಮುರುಡೇಶ್ವರದ ಈಶ್ವರ ದೇವಸ್ಥಾನ ಹಾಗೂ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಗಳಲ್ಲಿ ಪೂಜೆಗಳು ನಡೆದವು. ಶಿರಸಿಯಲ್ಲಿ ಹಲವು ಭಕ್ತರು ಬಂದು ದೇವಿ ದರ್ಶನ ಪಡೆದರೆ, ಪ್ರಸಿದ್ಧ ಮುರುಡೇಶ್ವರದಲ್ಲಿ ಭಕ್ತರಿಲ್ಲದೇ ದೇವಸ್ಥಾನ ಬಣಗುತ್ತಿದೆ. ಗೋಕರ್ಣದಲ್ಲಿ ಸ್ಥಳೀಯರಿಗೆ ಮಾತ್ರ ಅವಕಾಶ ಕಲ್ಪುಸಿದ್ದರಿಂದ ಭಕ್ತರ ಸಂಖ್ಯೆ ವಿರಳವಾಗಿದ್ದು, ದಕ್ಷಿಣ ಕಾಶಿಯಲ್ಲಿ ಭಕ್ತರು ದೇವರ ದರ್ಶನ ಪಡೆದರು.