ಬೆಂಗಳೂರು: ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ, ಮಾಜಿ ಮೇಯರ್ ಸಂಪತ್ ರಾಜ್ನನ್ನು ಎರಡು ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ವಹಿಸಿ ಕೋರ್ಟ್ ಆದೇಶಿಸಿದೆ.
ಸಂಪತ್ ರಾಜ್ ಬಂಧನದ ಕುರಿತು ವಿಚಾರಣೆ ನಡೆಸಿದ ಸಿಸಿಹೆಚ್ 67 ನ್ಯಾಯಾಧೀಶರಾದ ಕಾತ್ಯಾಯಿನಿ, ವಾದ ಪ್ರತಿವಾದಗಳನ್ನು ಆಲಿಸಿದರು. ಬಳಿಕ ಎರಡು ದಿನಗಳ ಕಾಲ ಸಂಪತ್ ರಾಜ್ನನ್ನು ಸಿಸಿಬಿ ಕಸ್ಟಡಿಗೆ ನೀಡಿದ್ದಾರೆ. ಸಿಸಿಬಿ ಎಸಿಪಿ ವೇಣುಗೋಪಾಲ್ ಅವರು ಸಂಪತ್ ರಾಜ್ ನನ್ನು ನ್ಯಾಯಾಧೀಶರಾದ ಕಾತ್ಯಾಯಿನಿ ಅವರ ಮುಂದೆ ಹಾಜರು ಪಡಿಸಿದರು. ಈ ವೇಳೆ ವಿಚಾರಣೆ ನಡೆಸುವ ಉದ್ದೇಶದಿಂದ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ಸಿಸಿಬಿ ಪರ ವಕೀಲರು ಕೇಳಿದರು. ಇದನ್ನೂ ಓದಿ: ಮಾಜಿ ಮೇಯರ್ ಸಂಪತ್ ರಾಜ್ ಅರೆಸ್ಟ್
Advertisement
Advertisement
ವಕೀಲ ಮಹೇಶ್ ಅವರು ಸಂಪತ್ ರಾಜ್ ಪರ ವಕಾಲತ್ತು ವಹಿಸಿದ್ದು, ಸಿಸಿಬಿ ಪರ ವಕೀಲ ಎಸ್.ಪಿ.ಪಿ.ಪ್ರಸನ್ನ ಕುಮಾರ್ ವಾದ ಮಂಡಿಸಿದರು. ನಿನ್ನೆ ರಾತ್ರಿ ಬಂಧನ ಮಾಡಲಾಗಿದ್ದು, ವಿಚಾರಣೆ ನಡೆಸಲು ಸಾಧ್ಯವಾಗಿಲ್ಲ. ಹೀಗಾಗಿ 10 ದಿನಗಳ ಕಾಲ ಕಸ್ಟಡಿಗೆ ನೀಡಿ ಎಂದು ಪ್ರಸನ್ನ ಕುಮಾರ್ ಮನವಿ ಮಾಡಿದರು.
Advertisement
Advertisement
ಸಂಪತ್ರಾಜ್ ರಾಜಕಾರಣಿ ಆಗಿದ್ದು, ಪ್ರಭಾವಿ ವ್ಯಕ್ತಿಯಾಗಿದ್ದಾರೆ. ಸಾಕ್ಷ್ಯ ನಾಶ ಪಡಿಸುವ ಸಾಧ್ಯತೆ ಇದೆ. ಆರೋಪಿಗಾಗಿ ಪೊಲೀಸರು ಎಷ್ಟೇ ಶೋಧ ನಡೆಸಿದರೂ ಸಿಕ್ಕಿರಲಿಲ್ಲ. ಹೀಗಾಗಿ ಪ್ರಕರಣದಲ್ಲಿ ಆರೋಪಿಯ ವಿಚಾರಣೆ ನಡೆಸುವ ಅಗತ್ಯವಿದೆ. ಅಲ್ಲದೆ ಬೆಂಕಿ ಹಚ್ಚಿಸಿರೋದು ಸಾಕ್ಷ್ಯಗಳಿಂದ ಗೊತ್ತಾಗಿದೆ. ಹೀಗಾಗಿ ಹೆಚ್ಚಿನ ವಿಚಾರಣೆ ಸಲುವಾಗಿ ಆರೋಪಿ ಸಂಪತ್ ರಾಜ್ನನ್ನು ನಮ್ಮ ವಶಕ್ಕೆ ನೀಡಿ ಎಂದು ಸಿಸಿಬಿ ಪರ ವಕೀಲರು ಮನವಿ ಮಾಡಿದರು. ಮನವಿ ಪುರಸ್ಕರಿಸಿದ ನ್ಯಾಯಾಧೀಶರು ಎರಡು ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ವಹಿಸಿದ್ದಾರೆ.
ನಿನ್ನೆ ರಾತ್ರಿ 9 ಗಂಟೆಗೆ ಸಂಪತ್ ರಾಜ್ ಬಂಧನದ ಬಳಿಕ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಯನ್ನು ಸಿಸಿಬಿ ನಿನ್ನೆ ರಾತ್ರಿಯೇ ಮುಗಿಸಿತ್ತು. ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿತು. ವಾದ, ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಸಂಪತ್ ರಾಜ್ನನ್ನು 2 ದಿನ ಪೊಲೀಸ್ ಕಸ್ಟಡಿಗೆ ವಹಿಸಿದೆ. ನ.19ರ ವರೆಗೆ ಸಿಸಿಬಿ ಕಸ್ಟಡಿಯಲ್ಲಿ ಸಂಪತ್ ರಾಜ್ ವಿಚಾರಣೆ ಎದುರಿಸಲಿದ್ದಾರೆ. ಬಳಿಕ ಗುರುವಾರ ಬೆಳಗ್ಗೆ 11ಕ್ಕೆ ಪೊಲೀಸರು ಕೋರ್ಟ್ ಮುಂದೆ ಹಾಜರುಪಡಿಸಲಿದ್ದಾರೆ.