ಬೆಂಗಳೂರು: ಉತ್ತರ ಕರ್ನಾಟಕ ಭಾಗದ ಹಲವೆಡೆ ಮತ್ತೆ ಮರುಣ ಅಬ್ಬರಿಸಿದ್ದಾನೆ. ಭಾರೀ ಮಳೆಯಿಂದಾಗಿ ರಾಯಚೂರು, ಕಲಬುರಗಿ, ಬಾಗಲಕೋಟೆಯಲ್ಲಿ ಮತ್ತೆ ಪ್ರವಾಹ ಉಂಟಾಗುವ ಸಾಧ್ಯತೆಗಳಿವೆ.
ರಾಯಚೂರಿನಲ್ಲಂತೂ ಮಳೆ ಎಡೆಬಿಡದೇ ಸುರೀತಿದೆ. ರಸ್ತೆಗಳಲ್ಲಿ ಮೊಳಕಾಲುದ್ದ ನೀರು ಹರೀತಿದೆ. ತಗ್ಗು ಪ್ರದೇಶದ ಮನೆಗಳೆಲ್ಲಾ ಜಲಾವೃತವಾಗಿ ಜನ ಪರದಾಡಿದ್ದಾರೆ. ಮನೆಗಳಿಗೆ ನಿರಂತರ ನೀರು ನುಗ್ಗುತ್ತಿದೆ. ರಾತ್ರಿಯಿಂದ ಸುರಿಯುತ್ತಿರುವ ಮಳೆಯಿಂದಾಗಿ ನಗರದ ಬಹುತೇಕ ಭಾಗ ಜಲಾವೃತವಾಗಿದೆ.
Advertisement
Advertisement
ವಿಜಯಪುರ ಜಿಲ್ಲೆಯಲ್ಲಿ ಮತ್ತೆ ವರುಣನ ಆರ್ಭಟ ಜೋರಾಗಿದೆ. ಮೊನ್ನೆ ಶುರುವಾದ ಮಳೆ ಇದುವರೆಗೂ ನಿಂತಿಲ್ಲ. ಮುದ್ದೇಬಿಹಾಳ, ಬಸವನಬಾಗೇವಾಡಿ, ದೇವರಹಿಪ್ಪರಗಿ, ತಾಳಿಕೋಟಿ ಹಾಗೂ ಸಿಂದಗಿ ತಾಲೂಕಿನಲ್ಲಿ ನಿರಂತರ ಮಳೆಯಾಗ್ತಿದೆ. ಮಳೆಗೆ ಜಿಲ್ಲೆಯಲ್ಲಿ 135 ಮನೆಗಳು ಬಿದ್ದಿವೆ. ಸಾವಿರಾರು ಹೆಕ್ಟೆರ್ ಬೆಳೆಗಳು ಜಲಾವೃತಗೊಂಡಿದೆ. ಡೋಣಿ ಮತ್ತು ಭೀಮಾ ನದಿ ಮತ್ತೆ ಉಕ್ಕಿ ಹರಿಯುತ್ತಿವೆ. ಹಡಗಿನಾಳ, ಶಿವಪುರ, ಮೂಕಿಹಾಳ, ನಾಗೂರು, ಹರನಾಳ ಸೇರಿದಂತೆ 8 ಗ್ರಾಮಗಳು ತಾಳಿಕೊಟಿ ಸಂಪರ್ಕವನ್ನ ಕಡಿದುಕೊಂಡಿವೆ. ಆದರೂ ಸೇತುವೆ ಮೇಲೆ ಜನ ಹುಚ್ಚು ಸಾಹಸ ಮಾಡ್ತಿದ್ದಾರೆ.
Advertisement
Advertisement
ಕಲಬುರಗಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗ್ತಿದೆ. ಇನ್ನು ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಜಿಲ್ಲೆಯ ಭೀಮಾ ಹಾಗೂ ಕಾಗಿಣಾ ನದಿಗಳು ಉಕ್ಕಿ ಹರಿಯುತ್ತಿವೆ. ಕಾಗಿಣಾ ನದಿಯಲ್ಲಿ ಮೀನು ಹಿಡಿಯಲು ಹೋದ ಸಂಜೀವ್ ಕುಮಾರ್ ನದಿಯ ಪಾಲಾಗಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ನೀಲಕಂಠೇಶ್ವರ ದೇವಾಲಯ ಮತ್ತೆ ಮುಳುಗಡೆಯಾಗಿದೆ. ಧಾರಾಕಾರ ಮಳೆಗೆ ಜಿಲ್ಲೆಯ ಬಹುತೇಕ ಸೇತುವೆಗಳು ಜಲಾವೃತಗೊಂಡಿವೆ. ತೊಗರಿ, ಹೆಸರು, ಉದ್ದು ಸೇರಿದಂತೆ ಅಪಾರ ಪ್ರಮಾಣದ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿವೆ. ತಗ್ಗು ಪ್ರದೇಶದಲ್ಲಿನ ಹಲವು ಮನೆಗಳು ಜಲಾವೃತಗೊಂಡಿವೆ.
ಕರಾವಳಿ ಜಿಲ್ಲೆ ಉಡುಪಿಯಲ್ಲಿ ಮಳೆ ಬಿಟ್ಟಿದೆ, ನೆರೆ ತಗ್ಗಿದೆ. ಸಮುದ್ರದ ಅಬ್ಬರ ಮಾತ್ರ ವಿಪರೀತವಾಗಿದೆ. ಜಿಲ್ಲೆಯ ಉದ್ದಕ್ಕೂ ಭಾರಿ ಪ್ರಮಾಣದ ನೀರು ಸಮುದ್ರ ಸೇರಿರುವುದರಿಂದ ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದೆ. ನಾಡದೋಣಿ ಮೀನುಗಾರರು ಆತಂಕದಿಂದ ಸಮುದ್ರಕ್ಕೆ ಇಳಿದಿಲ್ಲ. ಬೋಟುಗಳನ್ನು ದಡದಲ್ಲಿ ಲಂಗರು ಹಾಕಿಸಿದ್ದಾರೆ. ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ಬೀದರ್ ತತ್ತರಿಸಿ ಹೋಗಿದೆ. ಜಿಲ್ಲೆಯ ಜೀವನದಿ ಮಾಂಜ್ರಾ ಉಕ್ಕಿ ಹರಿಯುತ್ತಿದೆ. ಔರಾದ್, ಕಲಾನಗರ ಹಾಗೂ ಬೀದರ್ ತಾಲೂಕಿನಲ್ಲಿ ಹೆಚ್ಚಿನ ಮಳೆಯಾಗ್ತಿದೆ. ಲಕ್ಷಾಂತರ ಜಮೀನಿನಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿದೆ. ಮಹಾಮಳೆಗೆ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ.
ಯಾದಗಿರಿ ಜಿಲ್ಲೆಯಾದ್ಯಂತ ಕೂಡ ಭಾರೀ ಮಳೆಯಾಗ್ತಿದ್ದು 30ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ನಗನೂರ ಗ್ರಾಮದ ರಸ್ತೆ ಜಲಾವೃತಗೊಂಡಿದೆ. ಕೊಟಗೇರಾ ರಸ್ತೆ ಜಲಾವೃತಗೊಂಡಿದೆ. ಯಾದಗಿರಿ- ಸೇಡಂಗೆ ಸಂಪರ್ಕ ಕಲ್ಪಿಸೋ ರಸ್ತೆ ಮುಳುಗಡೆಯಾಗಿದ್ದು ಜನ ಅಪಾಯದ ನಡುವೆ ಸಂಚರಿಸುತ್ತಿದ್ದಾರೆ. ಬಾಗಲಕೋಟೆಯಲ್ಲಿ ಮತ್ತೆ ವರುಣ ಅಬ್ಬರಿಸ್ತಿದ್ದು ಮುಧೋಳದ ಹಳ್ಳದಲ್ಲಿ ವ್ಯಕ್ತಿಯೊಬ್ಬರು ಕೊಚ್ಚಿಹೋಗಿ ಸಾವನ್ನಪ್ಪಿದ್ದಾರೆ. ಹಾಲು ತರಲು ಬೈಕ್ನಲ್ಲಿ ಹೊರಟಿದ್ದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಇನ್ನು ಕಾಡರಕೊಪ್ಪ ಗ್ರಾಮದ ಹಳ್ಳ ತುಂಬಿ ಹರಿಯುತ್ತಿದೆ. ತುಳಸಿಗೇರಿ ಆಂಜನೇಯ ದೇವಸ್ಥಾನ ಆವರಣ, ಯಾತ್ರಿನಿವಾಸ, ರಸ್ತೆ, ಹೋಟೆಲ್ಗಳು, ಕಾಯಿ ಅಂಗಡಿಗಳು ಜಲಾವೃತಗೊಂಡಿದೆ. ಭಕ್ತಗಣ ನೀರಲ್ಲೇ ಬಂದು ದೇವರ ದರ್ಶನ ಮಾಡಿದ್ರು.