ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ವ್ಯಾಪಕ ಮಳೆಯಾಗುತ್ತಿದ್ದು, ನದಿಗಳು ತುಂಬಿಹರಿಯುವ ಜೊತೆಗೆ ಸಮುದ್ರ ರುದ್ರ ನರ್ತನ ಹೆಚ್ಚಾಗಿದೆ. ಇದೇ ತಿಂಗಳು ಹದಿನೇಳರವರೆಗೂ ಯೆಲ್ಲೂ ಅಲರ್ಟ ಘೋಷಣೆ ಮಾಡಲಾಗಿದ್ದು, ನದಿ ಪಾತ್ರದ ಜನರಿಗೆ ಎಚ್ಚರದಿಂದಿರಲು ಸೂಚಿಸಲಾಗಿದೆ.
Advertisement
ಜಿಲ್ಲೆಯ ಕರಾವಳಿ ಭಾಗದ ಕಾರವಾರ, ಅಂಕೋಲ, ಕುಮಟಾ, ಭಟ್ಕಳ ಹಾಗೂ ಮಲೆನಾಡು ಭಾಗವಾದ ಶಿರಸಿ, ಸಿದ್ದಾಪುರ, ಯಲ್ಲಾಪುರ, ಜೋಯಿಡಾ, ಹಳಿಯಾಳ ಭಾಗದಲ್ಲಿ ಹೆಚ್ಚಿನ ಮಳೆ ಸುರಿದಿದೆ. ಮುಂಡಗೋಡಿನಲ್ಲಿ ಅಲ್ಪ ಮಳೆ ಸುರಿದಿದ್ದು ಜಿಲ್ಲೆಯಲ್ಲಿ ಅತೀ ಹೆಚ್ಚು ಸಿದ್ದಾಪುರದಲ್ಲಿ -80.4 ಮಿಲಿ ಮೀಟರ್, ಯಲ್ಲಾಪುರ-75.4 ಮಿಲಿ ಮೀಟರ್ ಮಳೆ ಸುರಿದಿದೆ. ಜಿಲ್ಲೆಯಲ್ಲಿ ಒಟ್ಟು 568.2 ಮಿ.ಮೀ. ಮಳೆಯಾಗಿದೆ.
Advertisement
Advertisement
ಜಿಲ್ಲೆಯಲ್ಲಿ ವ್ಯಾಪಕ ಮಳೆಯಿಂದಾಗಿ ಶರಾವತಿ, ಗಂಗಾವಳಿ, ಕಾಳಿ ನದಿಗಳು ತುಂಬಿ ಹರಿಯುತ್ತಿದ್ದು, ಕಾಳಿ ನದಿಗೆ ಅಡ್ಡಲಾಗಿ ಕಟ್ಟಲಾದ ಕದ್ರಾ ಜಲಾಶಯದಲ್ಲಿ ಇಂದು 27,798 ಕ್ಯೂಸೆಕ್ಸ್ ನೀರನ್ನು ಮೂರು ಗೇಟುಗಳನ್ನು ತೆರದು ಹೊರಬಿಡಲಾಯಿತು. (17748- ವಿದ್ಯುತ್ ಉತ್ಪಾದಿಸಿ ಹೊರ ಬಿಟ್ಟಿರುವುದು. 10,050-ಗೇಟ್ ನಿಂದ ಹೊರ ಬಿಟ್ಟಿದ್ದು) ಇನ್ನು ಹೆಚ್ಚಿನ ಮಳೆ ಆಗುತ್ತಿರುವುದರಿಂದ ನದಿ ಪಾತ್ರದ ಜನರಿಗೆ ಬೇರೆಡೆ ತೆರಳಲು ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಉಡುಪಿಯಲ್ಲಿ ಗಾಳಿ ಮಳೆ- ಪ್ರವಾಸಿಗರಿಗೆ ಜಿಲ್ಲಾಧಿಕಾರಿಗಳ ಎಚ್ಚರಿಕೆ
Advertisement
ಇನ್ನು ಕರಾವಳಿ ಭಾಗದಲ್ಲೂ ಸಮುದ್ರ ಅಬ್ಬರ ಹೆಚ್ಚಾಗಿದ್ದು ಇನ್ನೂ ಒಂದು ದಿನಗಳ ಕಾಲ ಸಂಪ್ರದಾಯಿಕ ಮೀನುಗಾರಿಕೆಗೆ ಹಾಗೂ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಮಳೆಯ ಆರ್ಭಟಕ್ಕೆ ಸಮುದ್ರ ಭಾಗದ ಕಾರವಾರ, ಹೊನ್ನಾವರ ಭಾಗದಲ್ಲಿ ಸಮುದ್ರ ಕೊರೆತ ಹೆಚ್ಚಾಗಿದ್ದು, ಮರಗಳು ಹಾಗೂ ತಡೆ ಗೋಡೆಗಳು ಕೊಚ್ಚಿಹೋಗಿದೆ. ಇನ್ನು ಕಾರವಾರ ನಗರದಲ್ಲಿ ಮಳೆಯಿಂದ ಮನೆಯೊಂದು ಅಲ್ಪ ಪ್ರಮಾಣದಲ್ಲಿ ಕುಸಿದು ಹಾನಿಯಾಗಿದೆ. ಇದನ್ನೂ ಓದಿ: ಮಡಿಕೇರಿ ಮಂಗಳೂರು ರಸ್ತೆ ಬದಿಯಲ್ಲಿ ಭೂಕುಸಿತ – ಆರು ಕುಟುಂಬಗಳ ಸ್ಥಳಾಂತರಕ್ಕೆ ಸೂಚನೆ
ಜಿಲ್ಲೆಯಲ್ಲಿ ಜೂ. 17ರ ವರೆಗೆ ಹೆಚ್ಚಿನ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಸೂಚನೆ ನೀಡಿದೆ. ಉತ್ತಮ ಮಳೆಯಾಗುತ್ತಿರುವುದರಿಂದ ನದಿಗಳು ತನ್ನ ಹರಿವನ್ನು ಹೆಚ್ಚಿಸಿಕೊಂಡಿವೆ. ಜೊತೆಗೆ ಸಮುದ್ರ ಭಾಗದಲ್ಲೂ ಅಲೆಗಳ ಅಬ್ಬರ ಹೆಚ್ಚಿನ ಪ್ರಮಾಣದಲ್ಲಿದ್ದು ಮಳೆಯ ಅಬ್ಬರ ಕೂಡ ಹೆಚ್ಚಾಗಿದೆ.