ಉಡುಪಿ: ಉಡುಪಿ ರಥಬೀದಿ ಏಳು ತಿಂಗಳ ಕೊರೊನಾ ಬಂಧನದಿಂದ ಮುಕ್ತವಾಗಿದೆ. ಶ್ರೀಕೃಷ್ಣನಿಗೂ ಭಕ್ತರಿಗೂ ಇದ್ದ ಅಂತರ ಕಳಚಿದೆ. ಉಡುಪಿ ಶ್ರೀಕೃಷ್ಣ ಮಠದಲ್ಲಿ ಬೆಳಗ್ಗೆ ಮಧ್ಯಾಹ್ನ ಸಂಜೆ ದರ್ಶನ ಆರಂಭವಾಗಿದ್ದು, ಜನ ಆರಾಧ್ಯ ಮೂರ್ತಿಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಕೊರೊನಾ ಕೊಟ್ಟ ಕಾಟ ಅಷ್ಟಿಷ್ಟಲ್ಲ. ಈ ಸಾಂಕ್ರಾಮಿಕ ರೋಗ ದೇವರಿಂದ ಭಕ್ತರನ್ನು ದೂರ ಮಾಡಿತ್ತು. ಉಡುಪಿ ಕೃಷ್ಣನನ್ನು ಕಾಣದೆ ಏಳು ತಿಂಗಳು ಭಕ್ತರು ಆಧ್ಯಾತ್ಮಿಕವಾಗಿ ಬಡವಾಗಿದ್ದರು. ಇದೀಗ ಮಠ ಮತ್ತೆ ತೆರೆದುಕೊಂಡಿದೆ. ಭಕ್ತರು ಪುಳಕಗೊಂಡು ಮಠದತ್ತ ಧಾವಿಸಿ ಬರುತ್ತಿದ್ದಾರೆ.
ಶ್ರೀ ಕೃಷ್ಣನ ದರ್ಶನಕ್ಕೆ ಟೈಂ ಫಿಕ್ಸ್ ಮಾಡಲಾಗಿದೆ. ಬೆಳಗ್ಗೆ 8.30 ಕ್ಕೆ ಕೃಷ್ಣನ ದರ್ಶನ ಆರಂಭ ಆಗುತ್ತದೆ. 10ರವರೆಗೆ ದೇವರ ದರ್ಶನ ಮಾಡಬಹುದು. ಮಹಾಪೂಜೆ ಸಂದರ್ಭ ಅವಕಾಶ ಇಲ್ಲ. ಮಧ್ಯಾಹ್ನ ಮತ್ತೆ ಮಠ ತೆರೆದುಕೊಳ್ಳುತ್ತದೆ ಎಂದು ಪರ್ಯಾಯ ಅದಮಾರು ಮಠ ಈಶಪ್ರೀಯ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ದೇಗುಲ ಭೇಟಿ ನೀಡುವ ಭಕ್ತರಿಗೆ ಉಡುಪಿ ಕೃಷ್ಣಮಠ ಎರಡು ಹೊತ್ತಿನಲ್ಲಿ ತೆರೆದುಕೊಳ್ಳುವುದು ಬಹಳ ಉಪಯೋಗವಾಗಲಿದೆ. ಹೊರ ಜಿಲ್ಲೆ, ಹೊರ ರಾಜ್ಯದ ಭಕ್ತರಿಗೆ ಮುಂಜಾನೆ, ಮಧ್ಯಾಹ್ನ ಸಂಜೆ ದರ್ಶನ ನೀಡುವ ಅವಕಾಶವಾಗಿದೆ. ಕೊರೊನಾ ಸಂಪೂರ್ಣ ಹತೋಟಿಗೆ ಬಂದ ಮೇಲೆ ಲಸಿಕೆ ಅನ್ವೇಷಣೆ ಆದ ನಂತರ ಹಿಂದಿನಂತೆ ದಿನಪೂರ್ತಿ ಮಠ ತೆರೆಯುವ ಸಾಧ್ಯತೆಯಿದೆ.