ಉಡುಪಿ: ಜಿಲ್ಲೆಯಾದ್ಯಂತ ಕಳೆದ ರಾತ್ರಿಯಿಂದ ಧಾರಾಕಾರ ಮಳೆಯಾಗುತ್ತಿದೆ. ಇಂದು ಬೆಳಗ್ಗೆ ಕೂಡ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸಾಧಾರಣ ಮಳೆ ಬೀಳುತ್ತಿದೆ. ಹವಾಮಾನ ಇಲಾಖೆ ಜಿಲ್ಲೆಯಲ್ಲಿ ಒಂದು ವಾರ ಭಾರೀ ಮಳೆಯಾಗುವ ಸೂಚನೆ ಕೊಟ್ಟಿದೆ.
ಮುಂದಿನ ನಾಲ್ಕು ದಿನ ಗಾಳಿ ಸಹಿತ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಸೆಪ್ಟೆಂಬರ್ 11ರಂದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇಂದು ಆರೆಂಜ್, 12ರಿಂದ ಮೂರು ದಿನ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜಿಲ್ಲೆಯಲ್ಲಿನ ನದಿ ಪಾತ್ರದ ಜನರು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಸೂಚನೆ ರವಾನಿಸಲಾಗಿದೆ.
Advertisement
Advertisement
ಆಳ ಸಮುದ್ರ ಮೀನುಗಾರಿಕೆಗೆ ಈಗಾಗಲೇ ಸೇರಿರುವ ಸಮುದ್ರ ಮೀನುಗಾರಿಕೆ ಅರಬ್ಬಿ ಸಮುದ್ರ ಸೇರಿರುವ ಮೀನುಗಾರರಿಗೆ ವಯರ್ಲೆಸ್ ಮೂಲಕ ಸಂದೇಶ ರವಾನಿಸಲಾಗಿದೆ. ಭಾರಿ ಗಾಳಿ ಮಳೆ ಬೀಳುವ ಸಾಧ್ಯತೆ ಇದ್ದು ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಸೂಚಿಸಲಾಗಿದೆ. ನಾಡದೋಣಿ ಮೀನುಗಾರರು ಸಮುದ್ರತೀರದಲ್ಲಿ ಬಹಳ ಎಚ್ಚರಿಕೆಯಿಂದ ಮೀನುಗಾರಿಕೆ ನಡೆಸಬೇಕು. ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ.
Advertisement
Advertisement
ಕಳೆದ ಒಂದು ತಿಂಗಳಿನಿಂದ ಮಳೆ ಕೊಂಚ ವಿರಾಮ ಕೊಟ್ಟಿತ್ತು. ಈಗ ಹುಬ್ಬಾ ನಕ್ಷತ್ರ ಕಳೆದು ಉತ್ತರಾ ಆರಂಭವಾಗುವ ವೇಳೆ ಮಳೆ ರೌದ್ರಾವತಾರ ತೋರುವ ಸಾಧ್ಯತೆಯಿದೆ. ಕಳೆದೆರಡು ದಿನಗಳಿಂದ ಮಳೆ ಬೀಳುತ್ತಿದ್ದು, ಈಗಾಗಲೇ ಬೇಸಾಯ ಮಾಡಿದ ಭತ್ತ ಬೆಳೆದ ರೈತರು ಸಂತಸದಲ್ಲಿದ್ದಾರೆ. ಮೋಡ ಮುಸುಕಿದ ವಾತಾವರಣ ಇದ್ದು, ಭಾರೀ ಮಳೆ ನಿರೀಕ್ಷಿಸಲಾಗಿದೆ.
ಎಷ್ಟು ಮಳೆಯಾಗುತ್ತೆ?
64.5 ಮಿ.ಮೀ ನಿಂದ 115.5 ಮಿ.ಮೀ ಒಳಗಡೆ ಮಳೆಯಾಗುವ ಸಾಧ್ಯತೆ ಇದ್ದರೆ ಯೆಲ್ಲೋ ಅಲರ್ಟ್ ಘೋಷಣೆಯಾಗುತ್ತದೆ. 115.6 ಮಿ.ಮೀ ನಿಂದ 204.4 ಮಿ.ಮೀ. ಒಳಗಡೆ ಮಳೆಯಾಗಲಿದ್ದರೆ ಆರೆಂಜ್ ಅಲರ್ಟ್ ಎಂದು ಪ್ರಕಟಿಸಲಾಗುತ್ತದೆ. 204.5 ಮಿ.ಮೀಗಿಂತ ಹೆಚ್ಚು ಮಳೆ ಬೀಳುವ ಸಾಧ್ಯತೆ ಇದ್ದರೆ ರೆಡ್ ಅಲರ್ಟ್ ಘೋಷಣೆ ಮಾಡಲಾಗುತ್ತದೆ.