ಉಡುಪಿ: ಕಳೆದ ಎರಡು ದಿನಗಳಿಂದ ಬಿಡುವು ನೀಡಿದ್ದ ಮುಂಗಾರು ಮಳೆ ಇಂದು ಚುರುಕುಗೊಂಡಿದೆ. ಮುಂಜಾನೆಯಿಂದ ಉಡುಪಿ ಜಿಲ್ಲೆಯಾದ್ಯಂತ ಅಲ್ಲಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ.
ಜಿಲ್ಲೆಯಲ್ಲಿ ಇಂದು ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಕಾಪು ಕುಂದಾಪುರದಲ್ಲಿ ಧಾರಾಕಾರ ಮಳೆ ಸುರಿದಿದೆ. ನಗರ ಭಾಗದಲ್ಲಿ ಅತಿ ಹೆಚ್ಚು ಮಳೆ ಬೀಳುತ್ತಿರುವುದರಿಂದ ಓಡಾಟಕ್ಕೆ ವ್ಯತ್ಯಯವಾಗಿದೆ. ಪ್ರಮುಖ ರಸ್ತೆಗಳಲ್ಲಿ ಸ್ಲೋ ಮೂವಿಂಗ್ ಟ್ರಾಫಿಕ್ ಕಾಣಿಸಿಕೊಂಡಿತು. ಜಿಟಿಜಿಟಿ ಮಳೆಗೆ ವಾಹನ ಸವಾರರು ಪರದಾಡಬೇಕಾಯಿತು.
Advertisement
Advertisement
ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಶುಕ್ರವಾರ ಮತ್ತು ಶನಿವಾರ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮುಂದಿನ ಎರಡು ದಿನಗಳ ಕಾಲ ಪ್ರತಿ ದಿನ ಸುಮಾರು 100 ಮಿಲಿಮೀಟರ್ ಮಳೆ ಬೀಳುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ಮೋಡಮುಸುಕಿದ ವಾತಾವರಣ ಮುಂದುವರಿದಿದೆ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಭಾರೀ ಮಳೆಯಾಗುತ್ತಿದ್ದು, ನದಿಗಳ ಮಟ್ಟ ವಿಪರೀತ ಏರಿಕೆಯಾಗುತ್ತಿದೆ. ಸಮುದ್ರ ಮತ್ತು ನದಿ ತೀರದ ಜನಕ್ಕೆ ಉಡುಪಿ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
Advertisement
ರಾಯಚೂರಲ್ಲಿ ಪ್ರವಾಹ ಭೀತಿ
ಕೃಷ್ಣಾ ಹಾಗೂ ಭೀಮಾನದಿ ಅಚ್ಚುಕಟ್ಟು ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ರಾಯಚೂರು ಜಿಲ್ಲೆಗೆ ಪ್ರವಾಹ ಭೀತಿ ಎದುರಾಗಿದೆ. ನಾರಾಯಣಪುರ ಜಲಾಶಯದಿಂದ 1.28 ಲಕ್ಷ ಕ್ಯೂಸೆಕ್ಸ್ ಹಾಗೂ ಸೊನ್ನೆ ಬ್ಯಾರೇಜ್ನಿಂದ 13 ಸಾವಿರ ಕ್ಯೂಸೆಕ್ಸ್ ನೀರು ಕೃಷ್ಣಾ ನದಿಗೆ ಬಿಡುಗಡೆ ಮಾಡಲಾಗುತ್ತಿದೆ.
Advertisement
ಹೆಚ್ಚಿನ ಪ್ರಮಾಣದ ನೀರು ಹರಿಸುವ ಸಾಧ್ಯತೆ ಹಿನ್ನೆಲೆ ಲಿಂಗಸುಗೂರು, ದೇವದುರ್ಗ, ರಾಯಚೂರು ತಾಲೂಕಿನ ನದಿ ಪಾತ್ರದ ಗ್ರಾಮಗಳಿಗೆ ಎಚ್ಚರಿಕೆ ನೀಡಲಾಗಿದೆ. ನದಿ ಪಾತ್ರಕ್ಕೆ ತೆರಳದಂತೆ, ತೆಪ್ಪ ಬಳಸದಂತೆ ಗ್ರಾಮಗಳಲ್ಲಿ ಡಂಗೂರ ಸಾರಲಾಗುತ್ತಿದೆ. ತುರ್ತು ಪರಿಹಾರ ಕ್ರಮಕ್ಕಾಗಿ ನೋಡಲ್ ಅಧಿಕಾರಿಗಳನ್ನ ನೇಮಕ ಮಾಡಲಾಗಿದೆ. ಅಗತ್ಯಕ್ಕೆ ಅನುಗುಣವಾಗಿ ಪರಿಹಾರ ಕೇಂದ್ರ ಸ್ಥಾಪನೆಗೆ ಅಧಿಕಾರಿಗಳಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ.