– ಯತ್ನಾಳ್ರನ್ನು ಪಕ್ಷಕ್ಕೆ ವಾಪಸ್ ಕರೆ ತಂದಿದ್ದಕ್ಕೆ ಈ ಗಿಫ್ಟ್?
– ಶೀಘ್ರವೇ ಪಕ್ಷದಿಂದ ಯತ್ನಾಳ್ ಉಚ್ಛಾಟನೆ
ದಾವಣಗೆರೆ: ಸಚಿವ ಈಶ್ವರಪ್ಪನವರನ್ನು ರಾಜಕೀಯಕ್ಕೆ ಕರೆ ತಂದಿದ್ದು ಯಡಿಯೂರಪ್ಪ ಎಂದು ಶಾಸಕ ರೇಣುಕಾಚಾರ್ಯ ಟಾಂಗ್ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಈಶ್ವರಪ್ಪ ಯುವಕರಾಗಿದ್ದಾಗ ಅವರನ್ನು ಯುವ ಮೋರ್ಚಾಗೆ ಕರೆತಂದಿದ್ದು ಯಡಿಯೂರಪ್ಪ. ರಾಜ್ಯದ ಉದ್ದಗಲಕ್ಕೂ ಓಡಾಡಿ ಪಕ್ಷಕಟ್ಟಿದ್ದು ಬಿಎಸ್ವೈ-ಅನಂತಕುಮಾರ್ ಜೋಡಿ. ಇಷ್ಟಿದ್ದರೂ ಯಡಿಯೂರಪ್ಪನವರ ವಿರುದ್ಧ ಪತ್ರ ಬರೆದಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು.
Advertisement
Advertisement
ಪಕ್ಷದ ಆರಂಭ ಹಂತದಿಂದ ಯಡಿಯೂರಪ್ಪ, ಅನಂತಕುಮಾರ್ ಪಕ್ಷ ಕಟ್ಟಿ ಬೆಳೆಸಿದ್ದಾರೆ. ಈಶ್ವರಪ್ಪನವರು ಹಿರಿಯರು, ಅನುಭವಿಗಳು. ನಾಲ್ಕು ಗೋಡೆ ಮಧ್ಯೆ ಬಗೆಹರಿಸಿಕೊಳ್ಳುವ ಸಮಸ್ಯೆಯನ್ನು ಬೀದಿ ರಂಪ ಮಾಡಿದ್ದು ಸರಿಯಲ್ಲ. ರಾಜ್ಯಪಾಲರ ಬಳಿ ಒಯ್ದಿದ್ದು ತಪ್ಪು, ಅನಗತ್ಯವಾಗಿ ಕಾಂಗ್ರೆಸ್ನವರ ಕೈಗೆ ಅಸ್ತ್ರ ಕೊಟ್ಟಂತಾಗಿದೆ. ಉಪಚುನಾವಣೆ ಹೊತ್ತಲ್ಲಿ ಇದು ಸರಿಯಲ್ಲ, ವಿಶೇಷ ಅನುದಾನ ನೀಡುವ ಪರಮಾಧಿಕಾರ ಸಿಎಂಗೆ ಇದೆ. ಈಶ್ವರಪ್ಪ ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಕಿಡಿಕಾರಿದರು.
Advertisement
ಪಕ್ಷದ ಜಗಳ ಬೀದಿಗೆ ಬರಬಾರದಿತ್ತು, ಇದರಿಂದ ಕಾರ್ಯಕರ್ತರಿಗೆ ನೋವು, ಮುಜುಗರವಾಗಿದೆ. ಅನುದಾನ ಇಲ್ಲದಾಗ ಸಿಎಂ ಬಳಿ ಹೋಗಿ ಎಂದಿದ್ದರು, ಅದರಂತೆ ಯಡಿಯೂರಪ್ಪ ಆರ್ಥಿಕ ಇಲಾಖೆಯಲ್ಲಿ ವಿಶೇಷ ಅನುದಾನ ಬಿಡುಗಡೆ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಸಿಎಂ ಹಸ್ತಕ್ಷೇಪ ಮಾಡಿಲ್ಲ ಎಂದರು.
Advertisement
ವಾಪಸ್ ಕರೆ ತಂದಿದ್ದಕ್ಕೆ ಈ ಗಿಫ್ಟ್?
ಅವರನ್ನು ಪಕ್ಷಕ್ಕೆ ವಾಪಸ್ ಕರೆತಂದ ತಪ್ಪಿಗೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂಥ ಗಿಫ್ಟ್ ಕೊಡುತ್ತಿದ್ದಾರೆ. ಪದೇ ಪದೇ ಸಿಎಂ ಸ್ಥಾನಕ್ಕೆ ಸವಾಲು ಹಾಕುತ್ತಾರೆ. ಪ್ರತಿ ತಿಂಗಳು ಒಂದೊಂದು ಡೇಟ್ ಕೊಡ್ತಾರೆ. ದಿನ ನಿತ್ಯ ಬಟ್ಟೆ ಹಾವು ಬಿಡುತ್ತಾರೆ ಅಷ್ಟೇ, ಮುಖ್ಯಮಂತ್ರಿ ಬದಲಾವಣೆ ಆಗುತ್ತದೆ ಎನ್ನುತ್ತಾರೆ. ಆದರೆ ಎಲ್ಲವೂ ಠುಸ್ ಆಗಲಿದೆ, ಯತ್ನಾಳ್ ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಜನವರಿ, ಫೆಬ್ರವರಿ, ಮಾರ್ಚ್, ಮೇ ಎಲ್ಲವೂ ಮುಗಿದು ಹೋದವು ಎಂದು ಲೇವಡಿ ಮಾಡಿದರು.
ಯತ್ನಾಳ್ ಉಚ್ಛಾಟನೆಗೆ ಆಗ್ರಹಿಸಿ 65 ಶಾಸಕರು ಸಹಿ ಹಾಕಿದ್ದಾರೆ. ಶೀಘ್ರದಲ್ಲೇ ಯತ್ನಾಳ್ ಉಚ್ಛಾಟನೆ ಮಾಡುವಂತೆ ವರಿಷ್ಠರಿಗೆ ದೂರು ನೀಡುತ್ತೇವೆ. ಶಾಸಕ ಬಸನಗೌಡ ಯತ್ನಾಳ್ ದುರಂತ, ದುರಹಂಕಾರಿ ನಾಯಕ ಎಂದು ರೇಣುಕಾಚಾರ್ಯ ಕಿಡಿಕಾರಿದ್ದಾರೆ.
ಡಿಕೆಶಿಗೆ ಸವಾಲು
ಮಾಡಬಾರದ್ದನ್ನು ಮಾಡಿ ಜೈಲಿಗೆ ಹೋಗಿದ್ದೀರಿ, ಭ್ರಷ್ಟಾಚಾರ ಮಾಡಿದ್ದೀರಿ, ಎಷ್ಟು ಕೋಟಿ ಹಗರಣ ಮಾಡಿದಿರಿ. ಇನ್ನೂ ನಿಮ್ಮ ಮೇಲೆ ತನಿಖೆ ನಡೆಸಲಾಗುತ್ತಿದೆ. ಯಡಿಯೂರಪ್ಪನವರ ಬಗ್ಗೆ ಯಾಕೆ ಮಾತನಾಡುತ್ತೀರಿ? ರಾಜೀನಾಮೆ ನೀಡಿ ಎಂದು ಹೇಳ್ತಿರಾ? ಎಲ್ಲಿ ಭ್ರಷ್ಟಾಚಾರ ವಾಗಿದೆ ಹೇಳಿ. ಎಲ್ಲಾವೂ ಪಾರದರ್ಶಕ ವಾಗಿದೆ, ನಮ್ಮ ಕ್ಷೇತ್ರಗಳಿಗೆ ಅನುದಾನ ನೀಡಿದ್ದಾರೆ. ಇಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ, ರಾಜಿನಾಮೆ ಕೊಡುವ ಪ್ರಶ್ನೆಯೇ ಇಲ್ಲ. 2023ರ ವರೆಗೂ ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂದರು.