DistrictsKarnatakaLatestMain PostShivamogga

ಇಲ್ಲದ ಅಪ್ಪನಿಗೆ ನಿತ್ಯವೂ ಕರೆ ಮಾಡ್ತಾಳೆ ಮಗಳು!

– ಮಗು ಖುಷಿ ಕಸಿದುಕೊಂಡ ಕೊರೊನಾ ಮಹಾಮಾರಿ
– 2 ವರ್ಷದ ಹಿಂದೆ ತಾಯಿ ನಿಧನ

ಶಿವಮೊಗ್ಗ: ಈ ಕೊರೊನಾ ಮಹಾಮಾರಿ ಎಲ್ಲರ ಜೀವ, ಜೀವನದ ಜೊತೆ ಚೆಲ್ಲಾಟವಾಡಿದೆ. ಹಲವರ ಖುಷಿ ಕಸಿದುಕೊಂಡಿದೆ. ಅಪ್ಪ ಅಮ್ಮ ಇಬ್ಬರನ್ನು ಕಳೆದುಕೊಂಡು ಅದೆಷ್ಟೋ ಮಕ್ಕಳು ಅನಾಥರಾಗಿವೆ. ಹಾಗೆಯೇ ಪುಟಾಣಿಯೊಬ್ಬಳು ಅಪ್ಪನಿಗೆ ನಿತ್ಯವೂ ಹಲವು ಬಾರಿ ಫೋನ್ ಮಾಡುವ ಪ್ರಯತ್ನ ಮಾಡುತ್ತಾಳೆ. ಇಂತಹ ಒಂದು ಮನ ಕಲಕುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಈ ಪುಟಾಣಿ ಸಮ್ಯಾ(3) ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಸಕೊಪ್ಪದ ಶರಣ್ ಎಂಬವರ ಪುತ್ರಿ. ಸಮ್ಯಾ ತಾಯಿ ಇಹಲೋಕ ತ್ಯಜಿಸಿದಾಗ ಈ ಪುಟಾಣಿಗೆ ಒಂದು ವರ್ಷವಾಗಿತ್ತು. ಒಂದು ವರ್ಷದವಳಾಗಿದ್ದಾಗಲೇ ಈ ಪುಟಾಣಿ ತಾಯಿಯನ್ನು ಕಳೆದುಕೊಂಡಿತ್ತು. ಈ ಪುಟಾಣಿಯ ತಂದೆ ಶರಣ್ ಅವರೇ ತಾಯಿ ತಂದೆ ಎರಡು ಆಗಿ ಮಗಳನ್ನು ಪೋಷಿಸುತ್ತಿದ್ದರು.

ಶರಣ್ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿ ಆಗಿದ್ದರು. ಆದರೆ ಕಳೆದ ಬಾರಿ ಕೊರೊನಾ ವಕ್ಕರಿಸಿದ್ದರಿಂದ ಮೊದಲ ಬಾರಿ ಲಾಕ್ ಡೌನ್ ಜಾರಿಯಾಯ್ತು. ಲಾಕ್ ಡೌನ್ ನಿಂದಾಗಿ ಕೆಲಸ ಬಿಟ್ಟು ಊರಿಗೆ ಮರಳಿದ್ದರು. ನಂತರ ಶಿವಮೊಗ್ಗದಲ್ಲಿಯೇ ಕೆಲಸ ಹುಡುಕಿಕೊಂಡಿದ್ದರು. ಕೆಲಸದ ಜೊತೆ ಜೊತೆಗೆ ಸಂಸ್ಕøತಿ ಫೌಂಡೇಶನ್ ಎಂಬ ಹೆಸರಿನ ಸಂಸ್ಥೆ ಸ್ಥಾಪಿಸಿ ಕೊರೊನಾ ಸಂಕಷ್ಟದಲ್ಲಿರುವ ಜನರಿಗೆ ನೆರವಾಗಿದ್ದರು.

ಕೊರೊನಾ ಎರಡನೇ ಅಲೆ ಆರಂಭವಾದ ಸಂದರ್ಭದಲ್ಲಿ ಶರಣ್ ಸಾರ್ವಜನಿಕರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು. ಸುಮಾರು 10 ಸಾವಿರ ಮಂದಿಗೆ ಎನ್ 95 ಮಾಸ್ಕ್, ಸ್ಯಾನಿಟೈಸರ್ ಹಾಗೂ ದಿನಸಿ ಕಿಟ್ ವಿತರಿಸಿದ್ದರು. ಕೊರೊನಾ ವಾರಿಯರ್ ಆಗಿ ಕೆಲಸ ಮಾಡುತ್ತಿದ್ದ, ಶರಣ್ ಗೆ ಸೋಂಕು ತಗುಲಿ ಕಳೆದ ಒಂದು ತಿಂಗಳ ಹಿಂದೆ ಮಹಾಮಾರಿಗೆ ಬಲಿಯಾದರು. ಇದೀಗ ಶರಣ್ ಪುತ್ರಿ ಸಮ್ಯಾ ಅಪ್ಪನನ್ನು ಕಳೆದುಕೊಂಡು ಅನಾಥವಾಗಿದ್ದಾಳೆ.

ಅಪ್ಪ ಅಮ್ಮ ಇಬ್ಬರನ್ನು ಕಳೆದುಕೊಂಡಿರುವ ಪುಟಾಣಿ ಸಮ್ಯಾಳಿಗೆ ಶರಣ್ ಸಹೋದರಿ ಅಖಿಲಾ ಆಸರೆ ನೀಡಿದ್ದಾರೆ. ಎರಡು ವರ್ಷದ ಹಿಂದೆ ತಾಯಿ ಕಳೆದುಕೊಂಡ ದಿನದಿಂದ ಸಮ್ಯಾ ಅಖಿಲಾ ಅವರ ಜೊತೆ ಬೆಳೆಯುತ್ತಿದ್ದಳು. ಜೊತೆಗೆ ಅವರನ್ನೇ ತಾಯಿ ಅಂದುಕೊಂಡಿದ್ದಳು. ಇದೀಗ ಈ ಪುಟಾಣಿಗೆ ಅವರೇ ಎಲ್ಲವೂ ಆಗಿದ್ದಾರೆ. ಅಮ್ಮ ಹೋದ ಬಳಿಕ ಅಪ್ಪನೇ ಅವಳ ಸರ್ವಸ್ವವಾಗಿದ್ದರು. ಆದರೆ ಈ ಕಂದಮ್ಮನಿಗೆ ಅಪ್ಪ ಇಲ್ಲ ಎಂಬ ಸತ್ಯವೇ ತಿಳಿದಿಲ್ಲ. ದಿನಕ್ಕೆ ನಾಲ್ಕೈದು ಬಾರಿ ಅಪ್ಪನ ನಂಬರಿಗೆ ಕರೆ ಮಾಡುತ್ತಾಳೆ. ಅಪ್ಪ ಯಾಕೋ ಬ್ಯೂಸಿ ಇರಬೇಕು ಎಂದು ಅವಳೇ ಅಂದುಕೊಂಡು ಸುಮ್ಮನಾಗುತ್ತಾಳಂತೆ.

ಅಖಿಲಾ ಅವರಿಗೂ ಒಬ್ಬಳು ಮಗಳಿದ್ದಾಳೆ. ಇದೀಗ ಸಮ್ಯಾ ಸೇರಿ ನಮಗೆ ಇಬ್ಬರು ಮಕ್ಕಳು. ಸಮ್ಯಾ ಕೂಡಾ ನಮ್ಮ ಮಗಳೇ. ಸಮ್ಯಾಳಿಗೆ ಅಪ್ಪ ಅಮ್ಮ ಇಲ್ಲ ಎನ್ನುವ ಕೊರಗು ಬಾರದ ರೀತಿ ನೋಡಿಕೊಳ್ಳುತ್ತೇವೆ. ಇಬ್ಬರು ಮಕ್ಕಳ ಭವಿಷ್ಯ ರೂಪಿಸಲು ಶ್ರಮಿಸುತ್ತೇವೆ. ಸದಾ ಅವಳಿಗೆ ನೆರಳಾಗಿ ಇರುತ್ತೇವೆ ಎನ್ನುತ್ತಾರೆ. ಒಟ್ಟಿನಲ್ಲಿ ಮೊದಲೇ ತಾಯಿ ಕಳೆದುಕೊಂಡಿದ್ದ ಪುಟಾಣಿ ಇದೀಗ ಮಹಾಮಾರಿಗೆ ತಂದೆಯನ್ನು ಕಳೆದುಕೊಂಡಿದೆ. ಏಯ್ ವಿಧಿಯೇ ನೀನೆಷ್ಟು ಕ್ರೂರಿ ನಿನಗೆ ಧಿಕ್ಕಾರವಿರಲಿ. ಇದನ್ನೂ ಓದಿ: ಕಾಂಗ್ರೆಸ್ ನಾಯಕರಿಗೆ ಅಧಿಕಾರ ಕಳೆದುಕೊಂಡು ಬುದ್ದಿ ಭ್ರಮಣೆಯಾಗಿದೆ: ಶ್ರೀರಾಮುಲು

Leave a Reply

Your email address will not be published. Required fields are marked *

Back to top button