CrimeDistrictsHassanKarnatakaLatestMain Post

ಇನ್ನೋವಾ ಕಾರಿನಲ್ಲಿ ಬಂದು ಪೊಲೀಸರೆಂದು ಹೇಳಿ ಚಿನ್ನಾಭರಣ ದೋಚಿ ಪರಾರಿ

ಹಾಸನ: ಪೊಲೀಸರೆಂದು ಹೇಳಿಕೊಂಡು ಬಂದ ತಂಡವೊಂದು ಮನೆ ಪರಿಶೀಲಿಸುವ ನೆಪದಲ್ಲಿ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಲವಣ್ಣಗೌಡ ಎಂಬವರ ಮನೆಯಲ್ಲಿ ನಾಲ್ವರು ಪೊಲೀಸರು ಎಂದು ಹೇಳಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ನಾಲ್ವರು ಇನ್ನೋವಾ ಕಾರಿನಲ್ಲಿ ಲವಣ್ಣಗೌಡ ಮನೆಗೆ ಬಂದಿದ್ದಾರೆ. ನಾವು ಪೊಲೀಸ್, ನಿಮ್ಮ ತಮ್ಮ ಬೆಂಗಳೂರಿನಿಂದ ಕಳ್ಳತನ ಮಾಡಿಕೊಂಡು ಹಣ ತಂದಿದ್ದಾನೆ. ಹಣವನ್ನು ಎಲ್ಲಿ ಇಟ್ಟಿದ್ದಾನೆ ಕೊಡಿ ಎಂದು ಹೇಳಿ ಅವರ ಬಳಿಯಿದ್ದ ಫೈಲ್‍ನಿಂದ ಲವಣ್ಣಗೌಡನ ತಮ್ಮ ಕೃಷ್ಣೇಗೌಡನ ಫೋಟೋ ತೋರಿಸಿದ್ದಾರೆ.

ಈ ವೇಳೆ ಮನೆಯವರು ನನ್ನ ತಮ್ಮ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿಲ್ಲ. ಅವನು ಚಾಮರಾಜನಗರದಲ್ಲಿ ಕೆಲಸ ಮಾಡುತ್ತಿರುವುದು ಎಂದು ಹೇಳಿದ್ದಾರೆ. ಕೊನೆಗೆ ನಾಲ್ವರು ಮನೆಯವರನ್ನೆಲ್ಲ ಹಾಲ್‍ನಲ್ಲಿ ಕೂರಿಸಿದ್ದಾರೆ. ನಂತರ ಹಾಲಿನಲ್ಲಿ ಬೀರು, ಸೋಫಾ ಎಲ್ಲ ಹುಡುಕಿದ್ದು, ಬೀರುವಿನ ಬಾಗಿಲನ್ನು ತೆಗೆದು ಅದರಲ್ಲಿದ್ದ 12 ಗ್ರಾಂ ಚಿನ್ನದ ಸರ, 8 ಗ್ರಾಂ ಚಿನ್ನದ ಒಂದು ಜೊತೆ ಓಲೆ, 5 ಗ್ರಾಂನ ಉಂಗುರ ಇವುಗಳನ್ನು ತೆಗೆದುಕೊಂಡಿದ್ದಾರೆ.

ಕೊನೆಗೆ ಹೋಗುವಾಗ ನಿಮ್ಮ ಮನೆಯವರೆಲ್ಲರೂ ನಾಳೆ ಬೆಳಗ್ಗೆ ಚನ್ನರಾಯ ಪಟ್ಟಣ ಪೊಲೀಸ್ ಠಾಣೆಗೆ ಬನ್ನಿ ಎಂದು ಹೇಳಿ ಹೋಗಿದ್ದಾರೆ. ಇದನ್ನು ನಂಬಿ ಮನೆಯವರು ಪೊಲೀಸ್ ಠಾಣೆಗೆ ಹೋದಾಗ ಬಂದವರು ನಕಲಿ ಪೊಲೀಸರೆಂದು ಗೊತ್ತಾಗಿದೆ. ಈ ಘಟನೆ ಸಂಬಂಧ ಚನ್ನರಾಯಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Back to top button