– ಗ್ರಾಹಕರ ಮನೆ ಬಾಗಿಲಿಗೆ ತರಕಾರಿ ತಲುಪಿಸುತ್ತಿರುವ ದಂಪತಿ
– ವೀರೇಶ ದಾನಿ
ಹುಬ್ಬಳ್ಳಿ: ಸಾವಯವ ಕೃಷಿಯಲ್ಲಿ ಅಪಾರ ಆಸಕ್ತಿ ಹೊಂದಿದ್ದ ತಮ್ಮ ಪತ್ನಿಯ ಉತ್ಸಾಹದಿಂದ ಪ್ರೇರೆಣೆ ಪಡೆದ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರು, ತಮ್ಮ ಹುದ್ದೆಯನ್ನು ತ್ಯಜಿಸಿ ಶುದ್ಧ ಮತ್ತು ಗುಣಮಟ್ಟದ ತರಕಾರಿಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆದು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
Advertisement
ಈ ಹಿಂದೆ ಹುಬ್ಬಳ್ಳಿಯ ಬಿ.ವಿ.ಭೂಮರಡ್ಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಗದುಗಿನ ತೋಂಟದಾರ್ಯ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದ ಡಾ.ಪ್ರಕಾಶ ಹುಬ್ಬಳ್ಳಿ ಅವರು ತಮ್ಮ ಪತ್ನಿ ಕುಸುಮಾ ಹುಬ್ಬಳ್ಳಿ ಸಾವಯವ ಕೃಷಿಯಲ್ಲಿ ಹೊಂದಿದ ಆಸಕ್ತಿಯಿಂದ ಪ್ರಭಾವಿತರಾದರು. ಹೀಗಾಗಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಹುದ್ದೆ ಬಿಟ್ಟು ದಂಪತಿಗಳಿಬ್ಬರೂ ಕಲಘಟಗಿ ತಾಲೂಕಿನ ಹಿಂಡಸಗೇರಿ ಗ್ರಾಮದ 4 ಎಕರೆ ಜಮೀನಿನಲ್ಲಿ ತರಕಾರಿ ಬೆಳೆಯುವ ಮೂಲಕ ಸಾವಯವ ಬೇಸಾಯ ಪ್ರಾರಂಭಿಸಿದರು.
Advertisement
Advertisement
ಈಗ ತಮ್ಮ ಉತ್ಪನ್ನಗಳಿಗೆ ಹುಬ್ಬಳ್ಳಿ ನಗರದ ನಿವಾಸಿಗಳಿಂದ ಆನ್ಲೈನ್ ಮತ್ತು ವಾಟ್ಸಪ್ ಮೂಲಕ ಆರ್ಡರ್ ಪಡೆದುಕೊಂಡು, ಗ್ರಾಹಕರ ಮನೆ ಬಾಗಿಲಿಗೆ ಸರಬರಾಜು ಮಾಡುವ ಮೂಲಕ ಮಾರುಕಟ್ಟೆ ಕಂಡುಕೊಂಡಿದ್ದಾರೆ. ಪ್ರಸ್ತುತ ಒಟ್ಟು 55 ವಿವಿಧ ರೀತಿಯ ತರಕಾರಿ ಬೆಳೆ ಬೆಳೆಯುತ್ತಿರುವ ಇವರು, 40 ಬಗೆಯ ದೇಶಿ ತರಕಾರಿ ಹಾಗೂ 15 ಬಗೆಯ ವಿದೇಶಿ (Exotic) ತರಕಾರಿಗಳನ್ನು ಜಮೀನಿನಲ್ಲಿ ಬೆಳೆಯುತ್ತಿದ್ದಾರೆ. ನಾಟಿ ಮಾಡುವುದರಿಂದ ಹಿಡಿದು, ಕಟಾವು ಮಾಡುವವರೆಗೆ ಬೆಳೆಯ ಪೋಷಣೆ ಮತ್ತು ಸಂರಕ್ಷಣೆಯನ್ನು ಸಂಪೂರ್ಣ ಸಾವಯವ ಪದ್ಧತಿಯಲ್ಲಿ ನಿರ್ವಹಿಸುತ್ತಿದ್ದಾರೆ.
Advertisement
ಎರೆಹುಳು ಗೊಬ್ಬರ, ಬೇವಿನ ಹಿಂಡಿ, ಬೇವಿನ ಎಣ್ಣೆ, ಬೇವಿನ ಅಸ್ತ್ರ, ಅಗ್ನಿ ಅಸ್ತ್ರ, ಹುಳಿ ಮಜ್ಜಿಗೆ, ಕೀಟಗಳ ನಿರ್ವಹಣೆಗೆ ಸ್ಟಿಕಿ ಟ್ರ್ಯಾಪ್, ಲೈಟ್ ಟ್ರಾಪ್, ಚೆಂಡು ಹೂವು ಬೆಳೆದು ಹುಬ್ಬಳ್ಳಿ ನಗರದ ಗ್ರಾಹಕರ ಮನೆ ಬಾಗಿಲಿಗೆ ಗುಣಮಟ್ಟದ ತರಕಾರಿಗಳನ್ನು ತಮ್ಮ ‘ನೇಚರ್ ಫಸ್ಟ್ ಫಾರ್ಮ್’ ಮೂಲಕ ಸರಬರಾಜು ಮಾಡುತ್ತಿದ್ದಾರೆ.
ತೋಟಗಾರಿಕೆ ಉಪನಿರ್ದೇಶಕ ಕಾಶೀನಾಥ ಭದ್ರುನವರ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಮಹಾಂತೇಶ ಪಟ್ಟಣಶೆಟ್ಟಿ, ಸಹಾಯಕ ತೋಟಗಾರಿಕೆ ಅಧಿಕಾರಿ ಕೆ.ವಿ.ಅಂಗಡಿ ಅವರ ಮಾರ್ಗದರ್ಶನದಲ್ಲಿ ತೋಟಗಾರಿಕೆ ಇಲಾಖೆ ಯೋಜನೆಗಳಾದ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ, ಹನಿ ನೀರಾವರಿ ಮತ್ತು ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಹೊದಿಕೆ ಮತ್ತು ಐಐಹೆಚ್ಆರ್ ತರಕಾರಿ ಸ್ಪೆಷಲ್ ಸೌಲಭ್ಯಗಳನ್ನು ಪಡೆದಿದ್ದಾರೆ.
ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಈ ಮಾಹಿತಿ ಯುಗದ ಸಾಧನಗಳನ್ನು ಬಳಸಿಕೊಂಡು, ನೈಸರ್ಗಿಕ ಸಾವಯವ ವಿಧಾನಗಳಲ್ಲಿ ಬೆಳೆದ ತರಕಾರಿಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತಿರುವ, ವರ್ಷವಿಡೀ ಆದಾಯ ಪಡೆಯುತ್ತಿರುವ ದಂಪತಿಗಳ ಕಾರ್ಯ ಇತರರಿಗೆ ಮಾದರಿಯಾಗಿದೆ.