Connect with us

Corona

ಆ.5ರವರೆಗೂ ತಿರುಪತಿ ಲಾಕ್‍ಡೌನ್- ತಿಮ್ಮಪ್ಪನ ದರ್ಶನಕ್ಕೆ ಅಡ್ಡಿ ಇಲ್ಲ ಎಂದ ಜಿಲ್ಲಾಡಳಿತ

Published

on

ತಿರುಪತಿ: ಕೊರೊನಾ ಸೋಂಕಿತರ ಸಂಖ್ಯೆ ತೀವ್ರ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯನ್ನು ಆಗಸ್ಟ್ 5ರವರೆಗೂ ಲಾಕ್‍ಡೌನ್ ಮಾಡುತ್ತಿರುವುದಾಗಿ ಸ್ಥಳೀಯ ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

ಲಾಕ್‍ಡೌನ್ ಜಾರಿಯಾದರೂ ತಿರುಮಲ ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಈಗಾಗಲೇ ಭಕ್ತರು ಬೇರೆ ಬೇರೆ ಸ್ಥಳಗಳಿಂದ ತಮ್ಮ ಸ್ವತಃ ವಾಹನದಲ್ಲಿ ಹೊರಟಿರುವ ಸಾಧ್ಯತೆ ಇದೆ. ಇಂತಹವರಿಗೆ ಸಮಸ್ಯೆಯಾಗದಂತೆ ಅವರಿಗೆ ತಿರುಪತಿಗೆ ಪ್ರವೇಶ ನೀಡದೆ ಬೈ-ಪಾಸ್ ರಸ್ತೆ ಮೂಲಕ ನೇರ ತಿರುಮಲಕ್ಕೆ ತೆರಳಲು ಅವಕಾಶ ನೀಡಲಾಗುವುದು ಎಂದು ಚಿತ್ತೂರು ಜಿಲ್ಲಾಧಿಕಾರಿ ನಾರಾಯಣ ಭರತ್ ಗುಪ್ತಾ ಹೇಳಿದ್ದಾರೆ.

ಜೂನ್ 1 ಆನ್‍ಲಾಕ್ ಬಳಿಕ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಪರಿಣಾಮ ಜಿಲ್ಲಾಡಳಿತ ಸಭೆ ನಡೆಸಿ ಕಟ್ಟು ನಿಟ್ಟಿನ ಲಾಕ್‍ಡೌನ್ ಕ್ರಮಕ್ಕೆ ಮುಂದಾಗಿದೆ. ಉಳಿದಂತೆ ಲಾಕ್‍ಡೌನ್ ದಿನಗಳಲ್ಲಿ ಬೆಳಗ್ಗೆ 6 ರಿಂದ 10ರ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಸಮಯ ನೀಡಲಾಗಿದೆ. ಯಾವುದೇ ಕಮರ್ಷಿಯಲ್ ವ್ಯವಹಾರಕ್ಕೆ ಅನುಮತಿ ನೀಡುವುದಿಲ್ಲ. ಜನರಿಗೆ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ವಿವರಿಸಿದ್ದಾರೆ.

ಜಿಲ್ಲಾಧಿಕಾರಿಗಳ ಮಾಹಿತಿ ಅನ್ವಯ ಜಿಲ್ಲೆಯಲ್ಲಿ 5,400 ಪ್ರಕರಣಗಳು ಇದುವರೆಗೂ ದೃಢ ಆಗಿದೆ. 1,700 ಪ್ರಕರಣಗಳು ತಿರುಪತಿ ನಗರವೊಂದರಲ್ಲೇ ಕಂಡು ಬಂದಿದೆ. ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದೇ ಲಾಕ್‍ಡೌನ್ ಜಾರಿ ಮಾಡಲು ಪ್ರಮುಖ ಕಾರಣ ಎಂದು ತಿಳಿಸಿದ್ದಾರೆ.

ಕೊರೊನಾ ಆತಂಕದ ನಡುವೆಯೂ ತಿರುಮಲದಲ್ಲಿ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಇದುವರೆಗೂ 140 ಮಂದಿ ಟಿಟಿಡಿ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಉಳಿದಂತೆ ಲಡ್ಡು ಮಾಡುವ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ 14 ಮಂದಿ ಸಹಾಯಕ ಅರ್ಚಕರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. 140 ಮಂದಿ ಸೋಂಕಿತರಲ್ಲಿ ಇದುವರೆಗೂ ಕೊರೊನಾಗೆ ಚಿಕಿತ್ಸೆ ಪಡೆದುಕೊಂಡು 70 ಮಂದಿ ಚೇತರಿಕೆ ಕಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರತಿದಿನ ಸುಮಾರು 12 ಸಾವಿರ ಮಂದಿ ದೇವರ ದರ್ಶನ ಪಡೆಯುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *