– ಇಂದು ಡಿಸ್ಚಾರ್ಜ್, 14 ದಿನ ಹೋಮ್ ಕ್ವಾರಂಟೈನ್ನಲ್ಲಿರಲು ಸೂಚನೆ
ಬೆಂಗಳೂರು: ಕೊರೊನಾ ಸೋಂಕು ತಗುಲಿದರೂ ಆಸ್ಪತ್ರೆಗೆ ಹೋಗಲು ನಿರಾಕರಿಸಿ, ಮನೆ ಮುಂದೆ ಹೈ ಡ್ರಾಮಾ ಮಾಡಿದ್ದ ಪಾದರಾಯನಪುರ ಕಾರ್ಪೋರೇಟರ್ ಇಮ್ರಾನ್ ಪಾಷಾ ಗುಣಮುಖವಾಗಿದ್ದು, ಆಸ್ಪತ್ರೆಯಿಂದ ಇಂದು ಡಿಸ್ಚಾರ್ಜ್ ಆಗಲಿದ್ದಾರೆ.
ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಇಮ್ರಾನ್ ಪಾಷಾ ಅವರನ್ನು 7 ದಿನಕ್ಕೊಮ್ಮೆ ಕೋವಿಡ್-19 ಟೆಸ್ಟ್ ಮಾಡಲಾಗಿತ್ತು. ವರದಿಯಲ್ಲಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಡಿಸ್ಚಾರ್ಜ್ ಮಾಡಲು ನಿರ್ಧರಿಸಲಾಗಿದೆ.
Advertisement
Advertisement
ಡಿಸ್ಚಾರ್ಜ್ ಮಾಡಿದ ತಕ್ಷಣ ಮನಸೋ ಇಚ್ಛೆ ಓಡಾಡುವಂತಿಲ್ಲ, 14 ದಿನಗಳ ಕಾಲ ಹೋಮ್ ಕ್ವಾರಂಟೈನ್ನಲ್ಲಿರಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಸೀಲ್ ಹಾಕಿ ಕ್ವಾರಂಟೈನ್ನಲ್ಲಿರುವಂತೆ ಸೂಚನೆ ನೀಡಿದ್ದಾರೆ. ಈ ಹಿಂದೆ ಕೊರೊನಾ ಸೋಂಕು ತಗುಲಿದರೂ ಆಸ್ಪತ್ರೆಗೆ ಹೋಗಲು ನಿರಾಕರಿಸಿ, ಮನೆ ಮುಂದೆ ಹೈ ಡ್ರಾಮಾ ಮಾಡಿದ್ದರು. ಈ ಮೂಲಕ ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದ್ದರು. ಇದೀಗ ಚಿಕಿತ್ಸೆ ಪಡೆದು ಗುಣಮುಖವಾಗಿದ್ದಾರೆ.
Advertisement
ಇಮ್ರಾನ್ ಪಾಷಾ ಡಿಸ್ಚಾರ್ಜ್ ಹಿನ್ನೆಲೆಯಲ್ಲಿ ಬೆಳಗ್ಗೆ 11.45ಕ್ಕೆ ಇಮ್ರಾನ್ ಆಸ್ಪತ್ರೆಯಿಂದ ಹೊರ ಬರಲಿದ್ದು, ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತ ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪೊಲೀಸರಿಂದ ಬಿಗಿ ಬಂದೋಬಸ್ತ್ಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇಮ್ರಾನ್ ನೇರವಾಗಿ ಪಾದರಾಯನಪುರ ಮನೆಗೆ ಬರಲಿದ್ದಾರೆ.
Advertisement
ಕಾರ್ಪೊರೇಟರ್ ಹೈಡ್ರಾಮಾ:
ಪಾದರಾಯನಪುರ ವಾರ್ಡ್ ಕಾರ್ಪೊರೇಟರ್ ಇಮ್ರಾನ್ ಪಾಷಾ ಅವರಿಗೆ ಮೇ 29ರಂದು ಕೊರೊನಾ ಸೋಂಕು ದೃಢಪಟ್ಟಿದ್ದರೂ ಆಸ್ಪತ್ರೆ ಸೇರಿದ್ದು ಮೇ 30 ಮಧ್ಯಾಹ್ನದ ಹೊತ್ತಿಗೆ. ಇಮ್ರಾನ್ ಪಾಷಾ ಆಸ್ಪತ್ರೆಗೆ ದಾಖಲಗಲು ನಿರಾಕರಿಸಿ ಮೊಂಡಾಟ ಪ್ರದರ್ಶಿಸಿದ್ದರು. ಮನೆ ಬಳಿಗೆ ಪೊಲೀಸರು, ಆರೋಗ್ಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಬಂದರೂ ಇಮ್ರಾನ್ ಪಾಷಾ ಮನೆಯಿಂದ ಹೊರಬಂದಿರಲಿಲ್ಲ.
ಕಾರ್ಪೊರೇಟರ್ ಇಮ್ರಾನ್ ತಂದೆ ಆರೀಫ್, ಶಾಸಕ ಜಮೀರ್ ಅಹ್ಮದ್ ಮಾತನ್ನೂ ಕೇಳಲಿಲ್ಲ. ಕೊನೆಗೆ ಪೊಲೀಸರು, ನೀವು ಆಸ್ಪತ್ರೆಗೆ ಬರಲಿಲ್ಲ ಅಂದ್ರೆ ಪ್ರಕರಣ ದಾಖಲಿಸಿ ಅರೆಸ್ಟ್ ಮಾಡ್ತೀವಿ ಎಂದು ವಾರ್ನಿಂಗ್ ಕೊಟ್ಟರು. ಸತತ ಮೂರು ಗಂಟೆಗಳ ಹೈಡ್ರಾಮಾ ಬಳಿಕ ಇಮ್ರಾನ್ ಪಾಷಾ ಪಿಪಿಇ ಕಿಟ್ ಸಮೇತ ಮನೆಯಿಂದ ಹೊರಬಂದು, ಜನರತ್ತ ಕೈಬೀಸಿ ಅಂಬುಲೆನ್ಸ್ ಹತ್ತಿ ವಿಕ್ಟೋರಿಯಾ ಆಸ್ಪತ್ರೆ ಸೇರಿದ್ದರು.
ಇಮ್ರಾನ್ ಬೆಂಬಲಿಗರನ್ನು ನಿಯಂತ್ರಿಸುವುದು ಪೊಲೀಸರಿಗೆ ಕಷ್ಟವಾಗಿಬಿಟ್ಟಿತ್ತು. ಇಮ್ರಾನ್ ಪಾಷಾ 200ಕ್ಕೂ ಹೆಚ್ಚು ಮಂದಿ ಜೊತೆ ಸಂಪರ್ಕದಲ್ಲಿದ್ದು, ಎಲ್ಲರನ್ನೂ ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲಾಗುತ್ತಿದೆ. ಕಾರ್ಪೊರೇಟರ್ ನಡುವಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇಂಥಾದ್ದೆಲ್ಲಾ ಸಹಿಸೋಕೆ ಆಗಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಶನಿವಾರ ಗರಂ ಆಗಿದ್ದರು. ಅಷ್ಟೇ ಅಲ್ಲದೆ ಕಾರ್ಪೊರೇಟರ್ ಇಮ್ರಾನ್ ಪಾಷಾ ವಿರುದ್ಧ ಕ್ರಮಕ್ಕೆ ಕಂದಾಯ ಸಚಿವ ಅಶೋಕ್ ಆಗ್ರಹಿಸಿದ್ದರು. ಅಲ್ಲದೆ ಬೆಂಗಳೂರಿನ ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 188 (ಸರ್ಕಾರಿ ಅಧಿಕಾರಿಗಳ ಕೆಲಸಕ್ಕೆ ಅಡ್ಡಿ), 270 (ವೈರಸ್ ಹಬ್ಬಿಸಲು ಯತ್ನ), 271 (ರೋಗ ನಿರೋಧಕ ನಿರ್ಬಂಧ ನಿಯಮವನ್ನು ಉಲ್ಲಂಘಿಸುವುದು) ಹಾಗೂ ಕ್ವಾರಂಟೈನ್ ನಿಯಮ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಾಗಿದೆ.