ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಣಕಾಸು ನೀತಿ ಸಮಿತಿಗೆ (ಎಂಪಿಸಿ) ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಶಾಂಕ್ ಭಿಡೆ ಸದಸ್ಯರಾಗಿ ನೇಮಕವಾಗಿದ್ದಾರೆ.
ಕೇಂದ್ರ ಸರ್ಕಾರ ಆರ್ಥಿಕ ತಜ್ಞರಾದ ಶಶಾಂಕ್ ಭಿಡೆ, ಆಶಿಮಾ ಗೋಯಲ್ ಹಾಗೂ ಜಯಂತ್. ಆರ್ ವರ್ಮಾ ಅವರನ್ನು ನೇಮಿಸಿದೆ. ಹೊಸ ಸದಸ್ಯರ ಅವಧಿ 4 ವರ್ಷ ಇರಲಿದೆ.
Advertisement
ಹಣಕಾಸು ನೀತಿ ಸಮಿತಿಯ ಸದಸ್ಯರ ಆಯ್ಕೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ನೇಮಕಾತಿ ಸಮಿತಿಯು (ಸಿಸಿಎ) ಅನುಮೋದನೆ ನೀಡಿತ್ತು. ಈ ಬಗ್ಗೆ ಕೇಂದ್ರ ಸರ್ಕಾರ ಸೋಮವಾರ ಅಧಿಸೂಚನೆ ಹೊರಡಿಸಿದೆ.
Advertisement
Advertisement
ಶಶಾಂಕ್ ಭಿಡೆ ಯಾರು?
ಬೆಳ್ತಂಗಡಿ ತಾಲೂಕಿನ ಮುಂಡಾಜೆಯಲ್ಲಿ ಜನಿಸಿದ್ದ ಶಶಾಂಕ್ ಭಿಡೆ ಅವರು ಅಲ್ಲಿಯೇ ಪ್ರಾಥಮಿಕ ಶಿಕ್ಷಣ ಪೂರೈಸಿ, ಪ್ರೌಢ ಶಾಲಾ ಶಿಕ್ಷಣವನ್ನು ಉಜಿರೆಯಲ್ಲಿ ಮಾಡಿ 1973ರಲ್ಲಿ ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ.
Advertisement
ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಿಂದ ಎಂಎಸ್ಸಿ ಓದಿ 1980ರಲ್ಲಿ ಅಮೆರಿಕದ ಅಯೋವಾ ವಿಶ್ವವಿದ್ಯಾಲಯದಿಂದ ಕೃಷಿ ಅರ್ಥಶಾಸ್ತ್ರದಲ್ಲಿ ಪಿಎಚ್ಡಿ ಪದವಿ ಪಡೆದಿದ್ದಾರೆ. 1980-82ರ ಅವಧಿಯಲ್ಲಿ ಅಯೋವಾ ವಿವಿಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಕೇಂದ್ರದಲ್ಲಿ ಸ್ಟಾಫ್ ಎಕನಾಮಿಸ್ಟ್ ಆಗಿ ಶಶಾಂಕ್ ಭಿಡೆ ಕೆಲಸ ಮಾಡಿದ್ದರು.
1982 ರಿಂದ1993ರವರೆಗೆ ರಾಷ್ಟ್ರೀಯ ಅನ್ವಯಿಕ ಆರ್ಥಿಕ ಸಂಶೋಧನಾ ಮಂಡಳಿ (ಎನ್ಸಿಎಇಆರ್)ಯಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು. 1993 ರಿಂದ 2002ರವರೆಗೆ ಎನ್ಸಿಎಇಆರ್ನಲ್ಲಿ ಮುಖ್ಯ ಆರ್ಥಿಕ ತಜ್ಞರಾಗಿ ಕರ್ತವ್ಯ ನಿರ್ವಹಿಸಿದ್ದರು. 1998 -1999ರಲ್ಲಿ ಆಸ್ಟ್ರೇಲಿಯಾದ ದಕ್ಷಿಣ ಏಷ್ಯಾ ಸಂಶೋಧನಾ ಕೇಂದ್ರದಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡಿದ್ದರು.
2003 – 2004ರಲ್ಲಿ ಬೆಂಗಳೂರಿನ ಇನ್ಸ್ಟಿಟ್ಯೂಟ್ ಫಾರ್ ಸೋಶಿಯಲ್ ಅಂಡ್ ಎಕಾನಮಿಕ್ ಚೇಂಜ್ನಲ್ಲಿ ಆರ್ಬಿಐ ಘಟಕದ ಪ್ರಾಧ್ಯಾಪಕರಾಗಿ ಮತ್ತು ಮುಖ್ಯಸ್ಥರಾಗಿ ಕೆಲಸ ಮಾಡಿದ್ದ ಅನುಭವ ಇವರಿಗಿದೆ. ಚೆನ್ನೈನ ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಡೆವಲಪ್ಮೆಂಟ್ ಸ್ಟಡೀಸ್ನ ನಿರ್ದೇಶಕರಾಗಿಯೂ ಇವರು ಕೆಲಸ ಮಾಡಿದ್ದರು. ಪ್ರಸ್ತುತ ನವದೆಹಲಿಯಲ್ಲಿರುವ ಎನ್ಸಿಎಇಆರ್ನ ಹಿರಿಯ ಸಲಹೆಗಾರರಾಗಿ ನೇಮಿಸಲಾಗಿತ್ತು.