– ಬ್ಯಾಂಕುಗಳಲ್ಲಿದೆ 14 ಸಾವಿರ ಕೋಟಿ ನಗದು
– 8 ಸಾವಿರ ಕೆಜಿ ಚಿನ್ನ, ವಾರ್ಷಿಕ 750 ಕೋಟಿ ರೂ. ಬಡ್ಡಿ
ಹೈದರಾಬಾದ್: ಕೋವಿಡ್ 19 ಲಾಕ್ಡೌನ್ ನಿಂದ ಸೃಷ್ಟಿಯಾಗಿರುವ ಹಣಕಾಸು ಸಮಸ್ಯೆಯನ್ನು ಪರಿಹಾರ ಮಾಡಲು ತನ್ನ ಕೆಲ ಸ್ಥಿರಾಸ್ತಿಗಳನ್ನು ಮಾರಾಟ ಮಾಡಲು ತಿರುಪತಿ ತಿರುಮಲ ದೇಗುಲ (ಟಿಟಿಡಿ)ದ ಆಡಳಿತ ಮಂಡಳಿ ಚಿಂತನೆ ನಡೆಸಿದೆ.
ಹೌದು. ಮಾರ್ಚ್ ಮೂರನೇ ವಾರದಲ್ಲಿ ತಿರುಪತಿ ದೇಗುಲದ ಬಾಗಿಲು ಮುಚ್ಚಿದ್ದು, ಜೂನ್ ತಿಂಗಳಿನಲ್ಲಿ ಬಾಗಿಲು ತೆರೆಯಲು ತೆರೆಯಲು ಅನುಮತಿ ಸಿಗುತ್ತದೆಯೋ ಇಲ್ಲವೋ ಎನ್ನುವುದು ಸ್ಪಷ್ಟವಾಗಿಲ್ಲ. ಒಂದು ವೇಳೆ ಜೂನ್ ತಿಂಗಳಿನಲ್ಲೂ ದೇವಾಲಯದ ಬಾಗಿಲು ತೆರೆಯದಿದ್ದರೆ ಭಕ್ತರು ದೇಣಿಗೆ ರೂಪದಲ್ಲಿ ನೀಡಿದ್ದ ಕೆಲ ಸ್ಥಿರಾಸ್ತಿಯನ್ನು ಮಾರಾಟ ಮಾಡಲು ಟಿಟಿಡಿ ಮುಂದಾಗಿದೆ.
Advertisement
Advertisement
ಚೆನ್ನೈ, ಮುಂಬೈ, ಸೇರಿದಂತೆ ಕೆಲ ಮಹಾನಗರಗಳಲ್ಲಿ ಭಕ್ತರು ಆಸ್ತಿ ನೀಡಿದ್ದು, ಆ ಸ್ಥಿರಾಸ್ತಿಗಳು ದಶಕಗಳಿಂದ ನಿರುಪಯುಕ್ತ ಸ್ಥಿತಿಯಲ್ಲಿದೆ. ಇವುಗಳ ಪೈಕಿ 500 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮಾರಾಟ ಮಾಡಿ ಹಣ ತುಂಬಿಸಲು ಚಿಂತನೆ ನಡೆಸಿದೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.
Advertisement
ಟಿಟಿಡಿಯಲ್ಲಿ ಖಾಯಂ ಮತ್ತು ಗುತ್ತಿಗೆ ರೂಪದಲ್ಲಿ ಒಟ್ಟು 22 ಸಾವಿರ ಸಿಬ್ಬಂದಿ ಇದ್ದು, ಇವರ ತಿಂಗಳ ವೇತನ ಪಾವತಿಗೆ 115 ಕೋಟಿ ರೂ. ಬೇಕಾಗುತ್ತದೆ. ಆದಾಯ ಸಮಸ್ಯೆಯಾದ ಹಿನ್ನೆಲೆಯಲ್ಲಿ 7 ಸಾವಿರ ರೂ. ಕಾಯಂ ಸಿಬ್ಬಂದಿಗೆ ಅರ್ಧ ಸಂಬಳ ಪಾವತಿಸಲಾಗುತ್ತಿದೆ. ಜೂನ್ ತಿಂಗಳಿನಲ್ಲಿ ದೇವಾಲಯ ತೆರೆಯದಿದ್ದರೆ ಭಾರೀ ಕಷ್ಟವಾಗುವ ಸಾಧ್ಯತೆಯಿದೆ. ಈ ಕಾರಣಕ್ಕೆ ಮೇ 28ಕ್ಕೆ ಟಿಟಿಡಿ ಆಡಳಿತ ಮಂಡಳಿ ಸಭೆಯಲ್ಲಿ ಸ್ಥಿರಾಸ್ತಿ ಮಾರಾಟದ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ.
Advertisement
2020-21ನೇ ಸಾಲಿನಲ್ಲಿ ಹುಂಡಿ ಮೂಲಕ 1,350 ಕೋಟಿ ರೂ., ಲಡ್ಡು, ವಿಶೇಷ ದರ್ಶನ ಟಿಕೆಟ್ ಮೂಲಕ 900 ಕೋಟಿ ರೂ. ಸಂಗ್ರಹವಾಗಬಹುದು ಎಂದು ಟಿಟಿಡಿ ಅಂದಾಜಿಸಿತ್ತು. ಆದರೆ ಲಾಕ್ಡೌನ್ ನಿಂದಾಗಿ ದೇವಾಲ ಮುಚ್ಚಿದ್ದು, ಪ್ರತಿ ತಿಂಗಳು 115 ಕೋಟಿ ರೂ. ಆದಾಯ ನಷ್ಟವಾಗುತ್ತಿದೆ.
ವಿವಿಧ ಬ್ಯಾಂಕ್ಗಳಲ್ಲಿ 14 ಸಾವಿರ ಕೋಟಿ ನಗದು, ಮತ್ತು 8 ಸಾವಿರ ಕೆಜಿ ಚಿನ್ನವನ್ನು ಟಿಟಿಡಿ ಇಟ್ಟಿದ್ದು, ಇದರಿಂದ ಒಟ್ಟು ವರ್ಷಕ್ಕೆ 750 ಕೋಟಿ ರೂ. ಬಡ್ಡಿ ಬರುತ್ತದೆ. ಈ ಆಸ್ತಿಯನ್ನು ಮಾರಾಟ ಮಾಡುವುದಿಲ್ಲ ಎಂದು ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ಹೇಳಿದ್ದಾರೆ.