ಆರೋಪಿಗಳನ್ನು ರಕ್ಷಣೆ ಮಾಡಲು ಇದು ಖಾದರ್ ಕಾಲವಲ್ಲ: ಶಾಸಕರಿಗೆ ಕೋಟ ಟಾಂಗ್

ಬೆಂಗಳೂರು/ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರನ್ನು ವರ್ಗಾವಣೆ ಮಾಡಿದ ವಿಚಾರ ಸಂಬಂಧ ಶಾಸಕ ಯು.ಟಿ ಖಾದರ್ ಹೇಳಿಕೆಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಟಾಂಗ್ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ಮೂಲಕ ಶಾಸಕರಿಗೆ ತಿರುಗೇಟು ನೀಡಿರುವ ಕೋಟ, ಆಡಳಿತಾತ್ಮಕ ದೃಷ್ಟಿಯಿಂದ ಸರಕಾರ ಮಾಡಿದ ವರ್ಗಾವಣೆಯನ್ನು ಖಾದರ್ ರಾಜಕೀಯಗೊಳಿಸಿದ್ದು ದುರದೃಷ್ಟ. ಯಾವುದೇ ಆರೋಪಿಗಳನ್ನು ರಕ್ಷಣೆ ಮಾಡಲು ಇದು ಖಾದರ್ ಕಾಲವಲ್ಲ ಎಂದು ಬರೆದುಕೊಂಡಿದ್ದಾರೆ.

- Advertisement -

ಇನ್ನೊಂದು ಟ್ವೀಟ್ ಮಾಡಿ, ಕೊರೊನಾ ನಿಯಂತ್ರಣಕ್ಕೆ ಪ್ರತಿಪಕ್ಷಗಳ ಸಹಕಾರ ಜಿಲ್ಲಾಡಳಿತ ಕೋರಿದೆ. ದುರಾದೃಷ್ಟಕ್ಕೆ, ಶವಸಂಸ್ಕಾರದ ಹೆಸರಿನಲ್ಲಿ ನಿಯಮಗಳನ್ನು ಉಲ್ಲಂಘಿಸಿ ಪ್ರಚಾರ ಪಡೆಯುತ್ತಿರುವುದು ವಿಪಕ್ಷದ ಜನಪ್ರತಿನಿಧಿಗಳಿಗೆ ಶೋಭೆಯಲ್ಲ ಎಂದು ಖಾದರ್ ಗೆ ಟ್ಯಾಗ್ ಮಾಡಿ ಕಿಡಿಕಾರಿದ್ದಾರೆ.

- Advertisement -

ಖಾದರ್ ಏನು ಹೇಳಿದ್ದರು?
ಕಾನೂನು ಕೈಗೆತ್ತಿಕೊಂಡರೆ, ನೈತಿಕ ಪೊಲೀಸ್ ಗಿರಿ ಮಾಡಿದ್ರೆ ಕ್ರಮ ಕೈಗೊಳ್ಳತ್ತೇನೆ ಎಂದಿದ್ದಕ್ಕೆ ದುಷ್ಕರ್ಮಿಗಳು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ರವರಿಗೆ ಕೊಲೆ ಬೆದರಿಕೆ ಹಾಕಿದರು. ಸರ್ಕಾರ ಕೊಲೆ ಬೆದರಿಕೆ ಹಾಕಿದವರಿಗೆ ಶಿಕ್ಷೆ ನೀಡುವ ಬದಲು ಜಿಲ್ಲಾಧಿಕಾರಿಗಳಿಗೆ ಶಿಕ್ಷೆ ನೀಡಿದೆ ಎಂದು ಖಾದರ್ ಟ್ವೀಟ್ ಮಾಡಿದ್ದರು.

ಇಂಥಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅಧಿಕಾರಿಗಳಿಗೆ ಧೈರ್ಯ ತುಂಬುವ ಬದಲು ಬಿಜೆಪಿ ಮುಖಂಡರುರಾಜಕೀಯ ಮೇಲಾಟ ಮಾಡುತ್ತಿದ್ದಾರೆ. ಮಾರಕ ಕೊರೋನಾ ಜನರನ್ನು ಉಸಿರುಗಟ್ಟಿಸುತ್ತಿದ್ದರೆ,ಬಿಜೆಪಿ ಜನಪ್ರತಿನಿಧಿಗಳು ಅಧಿಕಾರಿಗಳ ಉಸಿರುಗಟ್ಟಿಸುತ್ತಿದ್ದಾರೆ. ಉತ್ತರಿಸು ಸರ್ಕಾರ #ನ್ಯಾಯ ಎಲ್ಲಿದೆ? ಇದೇ ವೇಳೆ ತಮ್ಮ ಆಕ್ರೋಶ ಹೊರಹಾಕಿದ್ದರು.

ಡಿಸಿ ವರ್ಗಾವಣೆ ಯಾಕೆ?
ಜಾನುವಾರುಗಳನ್ನು ಸಾಗಾಟ ಮಾಡುವ ವಾಹನ ಹಾಗೂ ಜನರ ಮೇಲೆ ಹಲ್ಲೆ ನಡೆಸಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ ಇತ್ತೀಚೆಗೆ ನಡೆದ ಅಧಿಕಾರಿಗಳ ಸಭೆಯೊಂದರಲ್ಲಿ ಜಿಲ್ಲಾಧಿಕಾರಿ ಆದೇಶಿಸಿದ್ದರು. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ರಾಮ್ ಸೇನಾ ಅಭಿಮಾನಿ ಬಳಗ ಅನ್ನೋ ವಾಟ್ಸಾಪ್ ಗ್ರೂಪ್ ಒಂದರಲ್ಲಿ ಕಿಡಿಗೇಡಿಯೋರ್ವ ”ಮೊದಲು ಇವಳನ್ನು ಕಡಿದು ಕೊಲ್ಲಬೇಕು”(ಫಸ್ಟ್ ಮೊಲೆನ್ ಕರ್ತ್ ಕೆರೋಡು)ಎಂದು ತುಳುಭಾಷೆಯಲ್ಲಿ ಮೆಸೇಜ್ ಹಾಕಿದ್ದನು. ಈ ಮೆಸೇಜ್ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಜಿಲ್ಲಾಧಿಕಾರಿಯನ್ನು ವರ್ಗಾಯಿಸಲಾಗಿದೆ.

- Advertisement -