– ದಿನನಿತ್ಯ 50ಕ್ಕೂ ಹೆಚ್ಚು ಮನೆಗಳಿಗೆ ಶಿಕ್ಷಕರು ಭೇಟಿ
– ಪಾಠದ ಜೊತೆಗೆ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆಯೂ ಕಾಳಜಿ
ಬೆಳಗಾವಿ/ಚಿಕ್ಕೋಡಿ: ಕೊರೊನಾ ಮಹಾಮಾರಿಯಿಂದ ಶಾಲೆಗಳನ್ನ ಯಾವಾಗ ಆರಂಭ ಮಾಡಬೇಕು ಎನ್ನುವ ಗೊಂದಲದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಗೊಂದಲದಲ್ಲಿವೆ. ಕೆಲ ಶಾಲೆಗಳು ಸರ್ಕಾರ ಬೇಡ ಎಂದರೂ ಆನ್ಲೈನ್ ಮೂಲಕ ಮಕ್ಕಳಿಗೆ ಪಾಠ ಮಾಡುತ್ತಿವೆ. ಆದರೆ ಇಲ್ಲೊಂದು ಶಾಲಾ ಆಡಳಿತ ಮಂಡಳಿ ಮಕ್ಕಳಿಗೆ ವಿಭಿನ್ನವಾಗಿ ಪಾಠ ಮಾಡುವ ಹೊಸ ಐಡಿಯಾ ಕಂಡು ಕೊಂಡಿದೆ.
ಬೈಕ್ ಮೇಲೆ ಹಾಗೂ ನಡೆದುಕೊಂಡು ಶಾಲಾ ಮಕ್ಕಳ ಮನೆಗಳಿಗೆ ತೆರಳಿ ಶಿಕ್ಷಕರು ಪಾಠ ಮಾಡುತ್ತಿರುವ ಹೊಸ ಐಡಿಯಾವನ್ನ ಮಾಡಿದೆ. ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದ ಜಿ.ಎಂ.ಹಂಜಿ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಆಡಳಿತ ಮಂಡಳಿ ಮಾಡಿದೆ. ಮಹಾಮಾರಿ ಕೊರೊನಾದಿಂದ ವಿದ್ಯಾರ್ಥಿಗಳು ಪಾಠ ಬಿಟ್ಟು ಕೇವಲ ಆಟ ಆಡಿ ಕಾಲಹರಣ ಮಾಡುವುದನ್ನ ಗಮನಿಸಿ ಹಾಗೂ ಆನ್ಲೈನ್ ಶಿಕ್ಷಣದಿಂದ ಮಕ್ಕಳಿಗೆ, ಪಾಲಕರಲ್ಲಿ ತೊಂದರೆಯಾಗುವುದನ್ನ ಮನಗಂಡು ವಿದ್ಯಾರ್ಥಿಗಳ ಮನೆಗಳಿಗೆ ಶಿಕ್ಷಕರು ತೆರಳಿ ಪಾಠ ಹೇಳುವ ಹೊಸ ಐಡಿಯಾ ಕಂಡುಕೊಂಡಿದೆ.
Advertisement
Advertisement
600ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮನೆಗಳಿಗೆ ಶಿಕ್ಷಕರೇ ಖುದ್ದಾಗಿ ತೆರಳಿ ಪಾಠ ಮಾಡುತ್ತಿದ್ದಾರೆ. ದಿನನಿತ್ಯ 50ಕ್ಕೂ ಹೆಚ್ಚು ಮನೆಗಳಿಗೆ ಶಿಕ್ಷಕರು ತೆರಳಿ ಹೋಂವರ್ಕ್ ಕೊಟ್ಟು ಬರುತ್ತಾರೆ. ಬಳಿಕ ಮತ್ತೆ ಮೂರು ದಿನಗಳ ಬಳಿಕ ಹೋಂವರ್ಕ್ ಚೆಕ್ ಮಾಡಿ ಹೊಸ ಹೋಂವರ್ಕ್ ಕೊಟ್ಟು ಬರುವ ಕೆಲಸವನ್ನ ಶಿಕ್ಷಕರು ಮಾಡುತ್ತಿದ್ದಾರೆ. 1 ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ 28 ಶಿಕ್ಷಕರ ತಂಡ ದಿನನಿತ್ಯ ಹೋಗಿ ಪಾಠ ಮಾಡಿ ಬರುತ್ತಿದ್ದಾರೆ. ಈ ಹೊಸ ವ್ಯವಸ್ಥೆಯಿಂದ ವಿದ್ಯಾರ್ಥಿಗಳ ಪಾಲಕರು ಸಂತಸ ವ್ಯಕ್ತಪಡಿಸಿದ್ದು, ಲಾಕ್ಡೌನ್ನಿಂದ ನಮ್ಮ ಮಕ್ಕಳು ವಿದ್ಯಾಭ್ಯಾಸ ಮರೆತು ಬಿಟ್ಟಿದ್ದರು. ಆದರೆ ಈ ಹೊಸ ವ್ಯವಸ್ಥೆಯಿಂದ ದಿನನಿತ್ಯ ಅಭ್ಯಾಸದ ಕಡೆಗೆ ಗಮನ ಕೊಡುವಂತಾಗಿದೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ.
Advertisement
Advertisement
ಅನುದಾನಿತ ಶಾಲೆ ಆದರೂ ಶಿಕ್ಷಕರು ಹೆಚ್ಚು ಇರುವ ಈ ಶಾಲೆಯಲ್ಲಿ ಶಾಲೆಗಳು ಬಂದ ಆಗಿದ್ದ ಕಾರಣ ವೇತನವಿಲ್ಲದೇ ಪರದಾಡುತ್ತಿದ್ದರು. ಇದನ್ನ ಗಮನಿಸಿದ ಆಡಳಿತ ಮಂಡಳಿ ಈಗ ಶಿಕ್ಷಕರಿಗೆ ಹೊಸ ಕಾಯಕ ನೀಡಿ ವೇತನ ನೀಡುತ್ತಿರುವುದಕ್ಕೆ ಶಿಕ್ಷಕರ ಕುಟುಂಬಗಳು ನಿಟ್ಟುಸಿರು ಬಿಟ್ಟಿವೆ. ಅಲ್ಲದೇ ದಿನನಿತ್ಯ ಶಿಕ್ಷಕರು ಪಾಠ ಮಾಡುವುದಷ್ಟೇ ಅಲ್ಲದೇ ವಿದ್ಯಾರ್ಥಿಗಳ ಹಾಗೂ ವಿದ್ಯಾರ್ಥಿಗಳ ಮನೆಯವರ ಆರೋಗ್ಯದ ಮಾಹಿತಿ ಪಡೆದು, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ ಅವರಿಗೆ ಸಲಹೆ ನೀಡಿ ಆಸ್ಪತ್ರೆಗೆ ಕಳಿಸಿಕೊಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಪಾಠದ ಜೊತೆಗೆ ಆರೋಗ್ಯದ ಕಡೆಯೂ ಈ ಶಾಲೆಯ ಶಿಕ್ಷಕರು ಕಾಳಜಿವಹಿಸುತ್ತಿದ್ದಾರೆ.
ಕೊರೊನಾ ಮಹಾಮಾರಿಗೆ ಶಿಕ್ಷಣ ವ್ಯವಸ್ಥೆಯೇ ಅದಲು ಬದಲಾಗಿದೆ. ಆನ್ಲೈನ್ ಶಿಕ್ಷಣ ಬೇಕಾ ಅಥವಾ ಶಾಲೆ ಆರಂಭಿಸಬೇಕಾ ಎನ್ನುವ ಗೊಂದಲದಲ್ಲಿ ಸರ್ಕಾರ ಇದೆ. ಆದರೆ ಈ ಎಲ್ಲ ಗೊಂದಲಗಳನ್ನ ಬದಿಗಿಟ್ಟು ಜಿ.ಎಂ.ಹಂಜಿ ಶಿಕ್ಷಣ ಸಂಸ್ಥೆಯು ಕಂಡುಕೊಂಡಿರುವ ಈ ಹೊಸ ಐಡಿಯಾ ಇತರರಿಗೂ ಮಾದರಿಯಾಗಿದೆ.