– ಬಿಜೆಪಿ ಆಡಳಿತವಿರೋ ರಾಜ್ಯದಲ್ಲೇ ಘಟನೆ
ಶಿಮ್ಲಾ: ಕೊರೊನಾ ವೈರಸ್ ಭೀತಿಯಿಂದ ಮಕ್ಕಳಿಗೆ ಶಾಲೆ ಇನ್ನೂ ಆರಂಭವಾಗಿಲ್ಲ. ಹೀಗಾಗಿ ಶಾಲೆಯ ಶಿಕ್ಷಕರು ಆನ್‍ಲೈನ್ ತರಗತಿಗಳನ್ನು ಆರಂಭಿಸಿದ್ದಾರೆ. ಈ ಆನ್‍ಲೈನ್ ಕ್ಲಾಸಿಗೆ ಮೊಬೈಲ್ ಬಹುಮುಖ್ಯವಾಗಿದೆ. ಹೀಗಾಗಿ ಬಡ ತಂದೆಯೊಬ್ಬ ತನ್ನ ಕುಟುಂಬಕ್ಕೆ ಜೀವನಾಧಾರವಾಗಿದ್ದ ಹಸುವನ್ನೇ ಮಾರಿ ಮಕ್ಕಳಿಗೆ ಮೊಬೈಲ್ ಕೊಡಿಸಿದ್ದಾರೆ. ಈ ಮೂಲಕ ತನ್ನ ಮಕ್ಕಳು ವಿದ್ಯೆಯಿಂದ ವಂಚಿತರಾಗಬಾರದೆಂದು ಪಣತೊಟ್ಟಿದ್ದಾರೆ.
Advertisement
ಹೌದು. ಈ ಘಟನೆ ನಡೆದಿರುವುದು ಬಿಜೆಪಿ ಆಡಳಿತವಿರುವ ಹಿಮಾಚಲ ಪ್ರದೇಶದಲ್ಲಿ. ಕೋವಿಡ್ 19 ಲಾಕ್‍ಡೌನ್ ಪರಿಣಾಮ ಶಾಲೆಯ ಮಕ್ಕಳಿಗೆ ಆನ್‍ಕ್ಲಾಸ್ ಆರಂಭಿಸಿದ್ದಾರೆ. ಆದರೆ ಕಡು ಬಡ ಕುಟುಂಬದ ಕುಲ್ದೀಪ್ ಕುಮಾರ್ ತನ್ನ ಮಕ್ಕಳು ಇತರರಂತೆ ಓದಬೇಕು ಎಂದು ತಾನು ಸಾಕಿದ್ದ ಹಸುವನ್ನೇ ಮಾರಿ 6 ಸಾವಿರ ರೂ. ಕೊಟ್ಟು ಮೊಬೈಲ್ ಖರೀದಿಸಿದ್ದಾರೆ.
Advertisement
ಹಸುವನ್ನು ಪುಣ್ಯಕೋಟಿ ಎಂದು ಬಣ್ಣಿಸಲಾಗುತ್ತಿದೆ. ಅಲ್ಲದೆ ಗ್ರಾಮೀಣ ಭಾಗದಲ್ಲಿ ತಾಯಿಯಂತೆ ಹಸುವನ್ನು ಪೂಜಿಸಲಾಗುತ್ತಿದೆ. ಈ ಮಧ್ಯೆ ತನ್ನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಸುವನ್ನೇ ಮಾರಿರುವುದು ನಿಜಕ್ಕೂ ಬೇಸರದ ಸಂಗತಿ. ಪರಿಶಿಷ್ಠ ಜಾತಿಗೆ ಸೇರಿರುವ ಕುಲ್ದೀಪ್, ಕಾಂಗ್ರಾ ಜಿಲ್ಲೆಯ ತಹಸಿಲ್ ನ ಗುಮ್ಮರ್ ಗ್ರಾಮದಲ್ಲಿ ನೆಲೆಸಿದ್ದಾರೆ. ಇವರ ಮಗಳು ಅನು ಹಾಗೂ ಮಗ ವಾನ್ಶ್ ಸರ್ಕಾರಿ ಶಾಲೆಯಲ್ಲಿ 4 ಮತ್ತು 2ನೇ ತರಗತಿಯಲ್ಲಿ ಓದುತ್ತಿದ್ದಾರೆ.
Advertisement
Advertisement
ಕೊರೊನಾ ಎಂಬ ಮಹಾಮಾರಿ ವೈರಸ್ ಭೀತಿಯಿಂದ ರಾಜ್ಯದಲ್ಲಿ ಮಕ್ಕಳಿಗೆ ಆನ್‍ಲೈನ್ ಕ್ಲಾಸ್ ಗಳನ್ನು ಆರಂಭಿಸಲಾಯಿತು. ಆದರೆ ಕುಲ್ದೀಪ್ ಮಕ್ಕಳಿಗೆ ತರಗತಿಗೆ ಹಾಜರಾಗಲು ಮೊಬೈಲ್ ಫೋನ್ ಹಾಗೂ ನೆಟ್ ಕನೆಕ್ಷನ್ ಇರಲಿಲ್ಲ. ಇದರಿಂದ ಬೇಸರಗೊಂಡು ತನ್ನ ಮಕ್ಕಳ ಓದು ಅರ್ಧಕ್ಕೆ ನಿಲ್ಲಬಾರದೆಂದು ಮೊಬೈಲ್ ಖರೀದಿ ಮಾಡಿದ್ದೇನೆ ಎಂದು ಕುಮಾರ್ ತಿಳಿಸಿದ್ದಾರೆ.
ನನ್ನ ಮಕ್ಕಳು ಆನ್‍ಲೈನ್ ತರಗತಿಗೆ ಹಾಜರಾಗಲು ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಲು ನನ್ನ ಕೈಯಲ್ಲಿ ಸಾಧ್ಯವಿರಲಿಲ್ಲ. ಹೀಗಾಗಿ ನಾನು ಸಾಕಿದ್ದ ಹಸುವನ್ನು ಮಾರಲು ನಿರ್ಧರಿಸಿದೆ. ಅಲ್ಲದೆ 6 ಸಾವಿರ ರೂಪಾಯಿಗೆ ಹಸುವನ್ನು ಮಾರಿಬಿಟ್ಟೆ ಎಂದು ಕುಮಾರ್ ಗದ್ಗದಿತರಾದರು. ಕುಮಾರ್ ಹಾಲು ಮಾರಾಟ ಮಾಡುತ್ತಿದ್ದರೆ, ಪತ್ನಿ ಕೂಲಿ ಕೆಸ ಮಾಡುತ್ತಿದ್ದರು. ಈ ಮೂಲಕ ಇಬ್ಬರು ತಮ್ಮ ಬದುಕಿನ ಬಂಡಿ ಸಾಗಿಸುತ್ತಿದ್ದರು.
ಹಸು ಮಾರುವ ಮೊದಲು ಕುಮಾರ್ ಕುಟುಂಬ, ಬ್ಯಾಂಕ್ ಬಾಗಿಲು ತಟ್ಟಿದೆ. ಅಲ್ಲದೆ ಖಾಸಗಿ ಸಾಲಗಾರರ ಮೊರೆಯೂ ಹೋಗಿದ್ದಾರೆ. ಆದರೆ ಎಲ್ಲಿಯೂ ಕುಮಾರ್ ಗೆ ಸಾಲ ದೊರಕಿರಲಿಲ್ಲ. ಇತ್ತ ಅದಾಗಲೇ ಆನ್‍ಕ್ಲಾಸ್ ಆರಂಭಿಸಿರುವ ಶಿಕ್ಷಕರು, ನಿಮ್ಮ ಮಕ್ಕಳ ಓದು ಮುಂದುವರಿಯಬೇಕಾದರೆ ಅವರಿಗೆ ಮೊಬೈಲ್ ಕೊಡಿಸಿ ತರಗತಿಗೆ ಹಾಜರುಪಡಿಸಿ ಎಂದು ಒತ್ತಡ ಹಾಕಲು ಆರಂಭಿಸಿದ್ದಾರೆ. ಪರಿಣಾಮ ಬೇರೆ ದಾರಿ ಇಲ್ಲದೆ ಹಸುವನ್ನು ಮಾರಬೇಕಾದ ಪರಿಸ್ಥಿತಿ ಎದುರಾಯಿತು ಎಂದು ಕುಮಾರ್ ಬೇಸರ ವ್ಯಕ್ತಪಡಿಸಿದರು.
ಸದ್ಯ ಅವರಲ್ಲಿ ಉಳಿದ ಇನ್ನೊಂದು ಹಸುವೇ ಜೀವನಾಧಾರವಾಗಿದೆ. ಇಷ್ಟು ಮಾತ್ರವಲ್ಲದೆ ಇದೀಗ ಕುಟುಂಬ ಮತ್ತೊಂದು ಕಷ್ಟವನ್ನು ಅನುಭವಿಸುತ್ತಿದೆ. ಅದೇನೆಂದರೆ, ಒಂದೇ ಫೋನಿನಲ್ಲಿ ಇಬ್ಬರು ಮಕ್ಕಳು ಏಕಕಾಲದಲ್ಲಿ ತರಗತಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಪರಿಣಾಮ ತರಗತಿಗೆ ಹಾಜರಾಗಲು ಇಬ್ಬರು ಮಕ್ಕಳು ಬೆಳಗೆದ್ದು ಜಗಳವಾಡುತ್ತಿರುವುದನ್ನು ನೋಡಲು ಕುಮಾರ್ ಕೈಯಲ್ಲಿ ಆಗುತ್ತಿಲ್ಲ.
ಬಡವರಿಗೆ ನೀಡುವ ಸೌಲಭ್ಯಗಳನ್ನು ಪಡೆಯುವಲ್ಲಿ ಕುಮಾರ್ ವಂಚಿತರಾಗಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವ(ಬಿಪಿಎಲ್) ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಸಮಗ್ರ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ಸರ್ಕಾರದ ಸವಲತ್ತುಗಳನ್ನು ಪಡೆಯುವ ಅರ್ಹತೆ ಕುಮಾರ್ ಕುಟುಂಬಕ್ಕಿದೆ. ಕುಮಾರ್ ಅವರ ಆರ್ಥಿಕ ಸ್ಥಿತಿಯ ಬಗ್ಗೆ ಸ್ಥಳೀಯ ಬಿಜೆಪಿ ಶಾಸಕ ರಮೇಶ್ ಧವಾಲಾಗೆ ತಿಳಿಸಿದಾಗ, ಸರ್ಕಾರದಿಂದ ಕುಮಾರ್ ಕುಟುಂಬಕ್ಕೆ ಸಹಾಯ ಮಾಡುವುದಾಗಿ ಭರವಸೆ ನಿಡಿದ್ದಾರೆ.