ಮಡಿಕೇರಿ: ಸರ್ಕಾರದ ಕಾರ್ಯಕ್ರಮಗಳನ್ನು ಜನರ ಬಳಿಗೆ ಮತ್ತಷ್ಟು ಪರಿಣಾಮಕಾರಿಯಾಗಿ ತಲುಪಿಸುವಲ್ಲಿ ಕಂದಾಯ ಇಲಾಖೆಯಲ್ಲಿ ಮಹತ್ತರ ಯೋಜನೆ ರೂಪಿಸಿದ್ದು, ಅರ್ಜಿ ಸಲ್ಲಿಸದೆ ವೃದ್ಧಾಪ್ಯ ವೇತನವನ್ನು ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ರಮ ಇನ್ನು 15-20 ದಿನಗಳಲ್ಲಿ ಜಾರಿಗೆ ಬರಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
Advertisement
ಕಂದಾಯ ಇಲಾಖೆ ಹಾಗೂ ಕೊಡಗು ಜಿಲ್ಲಾಡಳಿತದಿಂದ ಜಿಲ್ಲೆಯ ಪೊನ್ನಂಪೇಟೆಯಲ್ಲಿ ನೂತನ ತಾಲೂಕು ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಆಧಾರ್ ಕಾರ್ಡ್ ಹೊಂದಿರುತ್ತಾರೆ. ಅಲ್ಲದೆ ತಾಲೂಕು ಕಚೇರಿಯಲ್ಲಿ ಬಿಪಿಎಲ್ ಕಾರ್ಡ್ ಸಹ ಹೊಂದಿರುತ್ತಾರೆ. ಅಂತಹ 60 ವರ್ಷ ಪೂರ್ಣಗೊಂಡವರ ಮನೆ ಬಾಗಿಲಿಗೆ ಬ್ಯಾಂಕ್ ಖಾತೆಯ ಮಾಹಿತಿ ಒದಗಿಸುವಂತೆ ತಾಲೂಕು ಅಥವಾ ಜಿಲ್ಲಾಡಳಿತದಿಂದ ಪತ್ರ ಹೋಗಲಿದೆ. ನಂತರ ಅರ್ಜಿ ಸಲ್ಲಿಸದೆ ವೃದ್ಧಾಪ್ಯ ವೇತನ ಪಡೆಯಬಹುದಾಗಿದೆ ಎಂದರು.
Advertisement
Advertisement
ಸಾಮಾಜಿಕ ಭದ್ರತಾ ಯೋಜನೆಯಡಿ ರಾಜ್ಯದಲ್ಲಿ ಏಳೂವರೆ ಸಾವಿರ ಕೋಟಿ ವಿನಿಯೋಗ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 67 ಕೋಟಿ ರೂ ಹಣವಿದೆ. ಪ್ರಕೃತಿ ವಿಕೋಪ ಸಂದರ್ಭದಲ್ಲಿ 5 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಜೊತೆಗೆ ಬೆಳೆಹಾನಿಯ ಪ್ರಥಮ ಹಾಗೂ ದ್ವಿತೀಯ ಹಂತದಲ್ಲಿ ಹಣ ಬಿಡುಗಡೆ ಮಾಡಲಾಗಿದ್ದು, ಈಗಾಗಲೇ 9 ಸಾವಿರಕ್ಕೂ ಹೆಚ್ಚು ರೈತರಿಗೆ ಬೆಳೆಹಾನಿ ಪರಿಹಾರ ಪಾವತಿಸಲಾಗಿದೆ. ಪ್ರವಾಹ ಸಂದರ್ಭದಲ್ಲಿ ಗೃಹೋಪಯೊಗಿ ವಸ್ತುಗಳ ಕಳೆದುಕೊಂಡವರ ಪರಿಹಾರಕ್ಕಾಗಿ 50 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಕೋವಿಡ್ ನಿರ್ವಹಣೆಗೆ 15 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
Advertisement
ಮಡಿಕೇರಿ ಮತ್ತು ವಿರಾಜಪೇಟೆ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಹಣ ಬಿಡುಗಡೆ, ಜಿಲ್ಲಾಡಳಿತ ತಡೆಗೋಡೆ ನಿರ್ಮಾಣ, ಹೀಗೆ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಹಣ ಬಿಡುಗಡೆ ಮಾಡಲಾಗಿದೆ. ಕೋವಿಡ್ ಸಂದರ್ಭದಲ್ಲಿನ ಆರ್ಥಿಕ ಸಂಕಷ್ಟದ ನಡುವೆಯೂ ಹಲವು ಅಭಿವೃದ್ಧಿ ಕಾರ್ಯಗಳನ್ನು ಸರ್ಕಾರ ಕೈಗೊಂಡಿದೆ. ಪೊನ್ನಂಪೇಟೆಯನ್ನು ತಾಲೂಕು ಕೇಂದ್ರವನ್ನಾಗಿ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಪೊನ್ನಂಪೇಟೆ ನೂತನ ತಾಲೂಕಿನ ಮೂಲ ಸೌಲಭ್ಯಕ್ಕೆ ಹಣ ಬಿಡುಗಡೆ ಮಾಡಲಾಗುವುದು. ಈಗಾಗಲೇ ತಾಲೂಕು ಆಡಳಿತಕ್ಕೆ 12 ಹುದ್ದೆಗಳಿಗೆ ಮಂಜೂರಾತಿ ನೀಡಲಾಗಿದ್ದು, 25 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ ಎಂದರು.