ಶಿವಮೊಗ್ಗ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ ಶಿವಮೊಗ್ಗದ ಸಿರಿಗೆರೆ ವಲಯ ಅರಣ್ಯಾಧಿಕಾರಿಗಳ ಕಥೆ. ಅಕ್ರಮ ಮರ ಸಾಗಾಣೆ ನಡೆಸಿ ತನ್ನ ಮನೆಯಲ್ಲಿಟ್ಟುಕೊಂಡಿದ್ದ ಅರಣ್ಯಾಧಿಕಾರಿ ವಿರುದ್ಧ ಕ್ರಮ ತೆಗೆದು ಕೊಳ್ಳುವುದನ್ನು ಬಿಟ್ಟು, ಕೇವಲ ಮರದ ತುಂಡುಗಳನ್ನು ವಶಕ್ಕೆ ಪಡೆದುಕೊಂಡು ತಿಪ್ಪೆ ಸಾರಿಸುವ ಕೆಲಸವನ್ನು ಸಿರಿಗೆರೆ ವಲಯ ಅರಣ್ಯಾಧಿಕಾರಿಗಳು ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕಳೆದ ಎರಡು ದಿನದ ಹಿಂದೆ ಕುಂಸಿಯ ಫಾರೆಸ್ಟರ್ ವಸಂತ ಎಂಬವರ ಮನೆಯಲ್ಲಿ ಅಕ್ರಮವಾಗಿ ಇಟ್ಟುಕೊಂಡಿದ್ದ ಬೀಟೆ ಮರದ ತುಂಡುಗಳನ್ನು ಇಲಾಖೆಯ ಅಧಿಕಾರಿಗಳು ಟ್ರ್ಯಾಕ್ಟರ್ ನಲ್ಲಿ ಆಯನೂರಿನ ಅರಣ್ಯ ಡಿಪೋಗೆ ತಂದು ಹಾಕಿದ್ದಾರೆ. ಆದರೆ ವಸಂತ ಅವರು ಓರ್ವ ಅಧಿಕಾರಿಯಾಗಿ ಮರದ ತುಂಡುಗಳನ್ನು ಇಲಾಖೆಯ ಗಮನಕ್ಕೆ ತರದೆ ತನ್ನ ಮನೆಯಲ್ಲಿ ಇಟ್ಟು ಕೊಂಡಿದ್ದು ಅಪರಾಧ. ಲಕ್ಷಾಂತರ ರೂ ಬೆಲೆ ಬಾಳುವ ಮರವನ್ನು ಅಕ್ರಮವಾಗಿ ಮನೆಯಲ್ಲಿಟ್ಟು ಕೊಂಡಿದ್ದ ವಸಂತ ಅವರ ಮೇಲೆ ಕ್ರಮ ತೆಗೆದುಕೊಳ್ಳುವುದನ್ನು ಬಿಟ್ಟು ಮನೆಯಲ್ಲಿ ಸಿಕ್ಕ ತುಂಡಗಳು ಅರಣ್ಯದಲ್ಲಿ ಗಾಳಿ, ಮಳೆಗೆ ಬಿದ್ದ ಮರವಾಗಿವೆ ಎಂದು ಅಧಿಕಾರಿಗಳು ಸುಳ್ಳು ಕೇಸು ದಾಖಲಿಸಿದ್ದಾರೆ.
Advertisement
Advertisement
ಸುಮಾರು 31 ತುಂಡುಗಳು ಸಿಕ್ಕಿವೆ. ಇವು ಲಕ್ಷಾಂತರ ರೂ ಬೆಲೆ ಬಾಳುವ ಮರವಾಗಿವೆ. ಅರಣ್ಯದಂಚಿನ ಗ್ರಾಮಸ್ಥರು ಮನೆಯ ಉರುವಲಿಗೆ ಎಂದು ಸೌದೆ ತಂದರೆ ಕೇಸು ದಾಖಲಿಸುವ ಅರಣ್ಯ ಅಧಿಕಾರಿಗಳು ತಮ್ಮ ಅಧಿಕಾರಿಯನ್ನು ಉಳಿಸಲು ಸುಳ್ಳು ಕೇಸು ದಾಖಲಿಸಿಕೊಂಡಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಲಾದರೂ ಅರಣ್ಯ ಇಲಾಖೆಯವರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.
Advertisement