ಅಯೋಧ್ಯೆಯ ರಾಮ ಮಂದಿರಕ್ಕೆ ಮರಳು ರವಾನಿಸಿದ ವಿನಯ್ ಗುರೂಜಿ

– ರಾಮಮಂದಿರಕ್ಕೆ ಕರ್ನಾಟಕದ ಅಯೋಧ್ಯೆಯ ಮಣ್ಣು

ಚಿಕ್ಕಮಗಳೂರು: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ ಜಿಲ್ಲೆಯ ಕೊಪ್ಪ ತಾಲೂಕಿನ ಗೌರಿಗದ್ದೆ ದತ್ತಾಶ್ರಮದ ಅವಧೂತ ವಿನಯ್ ಗುರೂಜಿ ದತ್ತಾತ್ರೇಯರ ಆಶೀರ್ವಾದದ ಮರಳನ್ನ ರವಾನೆ ಮಾಡಿದ್ದಾರೆ. ಇದನ್ನೂ ಓದಿ: 800 ಕಿ.ಮೀ ನಡ್ಕೊಂಡೇ ಅಯೋಧ್ಯೆ ಭೂಮಿ ಪೂಜೆಗೆ ಹೊರಟ ಫಯಾಜ್ ಖಾನ್!

ಅವಧೂತ ವಿನಯ್ ಗುರೂಜಿ ಭಿಕ್ಷಾ ಪಾತ್ರೆಗೆ ಮರಳು ಹಾಕಿ ಆಶೀರ್ವಾದ ಮಾಡಿ ಕಳುಹಿಸಿದ್ದಾರೆ. ಗೌರಿಗದ್ದೆಯ ಆಶ್ರಮದ ಜೌಧಂಬರ ವೃಕ್ಷದ ಕೆಳಗೆ ರಾಮೇಶ್ವರದಿಂದ ತಂದ ಮರಳಿನಲ್ಲಿ ಲಿಂಗ ಪೂಜೆ ಮಾಡಿದ್ದಾರೆ. ನಂತರ ವಿನಯ್ ಗುರೂಜಿ ಆಶೀರ್ವದಿಸಿ ಅಯೋಧ್ಯೆಗೆ ರವಾನಿಸಿದ್ದಾರೆ. ವಿನಯ್ ಗುರೂಜಿ ರಾಮೇಶ್ವರದಿಂದ ಪ್ರತಿ ವರ್ಷ ಮರಳನ್ನ ತಂದು ಆ ಮರಳಿನಲ್ಲಿ ಜೌಧಂಬರ ವೃಕ್ಷದ ಕೆಳಗೆ ಲಿಂಗವನ್ನ ಪ್ರತಿಷ್ಠಾಪಿಸಿ ಪ್ರತಿದಿನ ಪೂಜೆ ಮಾಡುತ್ತಾರೆ. ಇದೀಗ ಪ್ರತಿದಿನ ಮರಳಿನಲ್ಲಿ ಲಿಂಗ ಪೂಜೆ ಸಲ್ಲಿಸುತ್ತಿದ್ದ ಮರಳನ್ನ ಅಯೋಧ್ಯೆಗೆ ಕಳುಹಿಸಿದ್ದಾರೆ.

- Advertisement -

ದೇಶದ 18 ದತ್ತ ಕ್ಷೇತ್ರದ ಮಣ್ಣು ತರುವಂತೆ ಪ್ರಧಾನಿ ಮೋದಿ ಸಂದೇಶ ರವಾನಿಸಿದ್ದರು. ಬಜರಂಗದಳದ ಪ್ರಮುಖ ಕಾರ್ಕಳದ ಸುನೀಲ್ ಕಡೆಯಿಂದ ಮರಳನ್ನ ವಿನಯ್ ಗುರೂಜಿ ಅಯೋಧ್ಯೆಗೆ ಕಳಿಸಿದ್ದಾರೆ.

- Advertisement -

ಇದೇ ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ನಡೆಯುವ ಭೂಮಿ ಪೂಜೆಗೆ ಜಿಲ್ಲೆಯ ಪುಣ್ಯ ಕ್ಷೇತ್ರದ ಮರಳು ಹಾಗೂ ಮಣ್ಣು ತಲುಪಲಿದೆ. ಇತ್ತೀಚಿಗೆ ಜಿಲ್ಲೆಯ ಬಾಳೆಹೊನ್ನೂರು ರಂಭಾಪುರಿ ಪೀಠದ ರಂಭಾಪುರಿ ಶ್ರೀಗಳು ಕೂಡ ಪೀಠದ ಮಣ್ಣನ್ನು ಅಯೋಧ್ಯೆಗೆ ಕಳುಹಿಸಿ ಕೊಟ್ಟಿದ್ದರು. ರಾಮಮಂದಿರ ನಿರ್ಮಾಣಕ್ಕೆ ಶುಭಹಾರೈಸಿದ ಶ್ರೀಗಳು ವಿಶ್ವ ಹಿಂದೂ ಪರಿಷತ್ ಪದಾಧಿಕಾರಿಗಳ ಮೂಲಕ ಮಣ್ಣನ್ನ ಹಸ್ತಾಂತರಿಸಿದ್ದರು.

ಶೃಂಗೇರಿ ಶಾರದಾಂಭೆ ಸನ್ನಿದಿ ಹಾಗೂ ಕರ್ನಾಟಕದ ಅಯೋಧ್ಯೆ ಚಿಕ್ಕಮಗಳೂರಿನ ದತ್ತಪೀಠದ ಮಣ್ಣು ಹಾಗೂ ಹೊನ್ನಮ್ಮನಹಳ್ಳದ ನೀರನ್ನ ಅಯೋಧ್ಯೆಗೆ ಕಳುಹಿಸಿದ್ದರು. ಜೊತೆಗೆ ನಾಡಿನ ಜೀವನದಿಗಳಾದ ತುಂಗಾ-ಭದ್ರೆ ನದಿ ನೀರನ್ನ ಕೂಡ ಅಯೋಧ್ಯೆಗೆ ತಲುಪಿಸಿದ್ದಾರೆ. ಆಗಸ್ಟ್ 5ರಂದು ನಡೆಯುವ ರಾಮಮಂದಿರ ಭೂಮಿ ಪೂಜೆಗೆ ಕಾಫಿನಾಡಿನ ಪುಣ್ಯ ಕ್ಷೇತ್ರಗಳಿಂದ ಮಣ್ಣು ಹಾಗೂ ಮರಳನ್ನ ರವಾನೆ ಮಾಡಲಾಗಿದೆ. ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಆ ಮಣ್ಣು ಮತ್ತು ನೀರನ್ನ ರಾಮಮಂದಿರಕ್ಕೆ ತಲುಪಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

- Advertisement -