ರಾಯಚೂರು: ಭೀಮನ ಅಮಾವಾಸ್ಯೆ ಹಾಗೂ ಶ್ರಾವಣ ಆರಂಭ ಹಿನ್ನೆಲೆ ರಾಯಚೂರಿನಲ್ಲಿ ಕೊರೊನಾ ಹರಡುವಿಕೆ ಭೀತಿ ಮರೆತು ಭಕ್ತರು ದೇವಾಲಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿದ್ದಾರೆ.
ನಗರದ ಉರುಕುಂದಿ ಈರಣ್ಣ ದೇವಾಲಯದಲ್ಲಿ ಭಕ್ತರ ದಂಡು ಹರಿದು ಬಂದಿದೆ. ಲಾಕ್ಡೌನ್ ಮಧ್ಯೆ ಅಮಾವಾಸ್ಯೆ ಹಿನ್ನೆಲೆ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು, ಇದರಿಂದ ದೇವರ ದರ್ಶನಕ್ಕೆ ಭಕ್ತರು ಸಾಲುಗಟ್ಟಿ ನಿಂತಿದ್ದರು. ಸಾಮಾಜಿಕ ಅಂತರ, ಮಾಸ್ಕ್ ಸೇರಿದಂತೆ ಎಲ್ಲವನ್ನೂ ಮರೆತು ಭಕ್ತರು ದೇವರ ದರ್ಶನ ಪಡೆಯುತ್ತಿದ್ದಾರೆ.
Advertisement
Advertisement
ಮುನ್ನೆಚ್ಚರಿಕೆಯಾಗಿ ಕೆಲ ದೇವಾಲಯಗಳಿಗೆ ಬೀಗ ಹಾಕಲಾಗಿದೆ. ನಗರದ ಚಂದ್ರಮೌಳೇಶ್ವರ ದೇವಾಲಯ ಸೇರಿ ಕೆಲವಡೆ ಭಕ್ತರಿಗೆ ನಿರ್ಭಂದ ಹೇರಿದ್ದರೂ ಭಕ್ತರು ದೇವಾಲಯಕ್ಕೆ ಬಂದು ಹೋಗುತ್ತಿದ್ದಾರೆ. ಅಮಾವಾಸ್ಯೆ ನಿಮಿತ್ಯ ತೆಂಗಿನ ಕಾಯಿ, ಹೂ, ಹಣ್ಣು ಖರೀದಿಗೆ ಮಾರ್ಕೆಟ್ನಲ್ಲಿ ಜನ ಮುಗಿಬಿದ್ದಿದ್ದರು. ರಾಯಚೂರು, ಸಿಂಧನೂರು ನಗರಗಳಲ್ಲಿ ಜುಲೈ 22ರವರೆಗೆ ಲಾಕ್ಡೌನ್ ಇದ್ದರೂ ಜನರಿಗೆ ಯಾವುದೂ ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ.
Advertisement
Advertisement
ನಗರದ ತೀನ್ ಕಂದಿಲ್ನಿಂದ ಸರಫ್ ಬಜಾರ್ ವರೆಗೆ ವ್ಯಾಪರ ಜೋರಾಗಿ ನಡೆದಿತ್ತು. ಜನಸಂದಣಿ ಹೆಚ್ಚಾಗುತ್ತಿದ್ದಂತೆ ಪೊಲೀಸರು ಬಂದು ಜನರನ್ನು ಚದುರಿಸಿದ್ದಾರೆ. ಪೊಲೀಸರಿಗೆ ಹೆದರಿ ಕೆಲ ವ್ಯಾಪಾರಿಗಳು ಅಂಗಡಿಗಳನ್ನು ಹಾಗೇ ಬಿಟ್ಟು ಓಡಿಹೋಗಿದ್ದಾರೆ. ಉಳಿದವರು ವ್ಯಾಪಾರ ನಿಲ್ಲಿಸಿ ಅಂಗಡಿಗಳನ್ನು ಮುಚ್ಚಿದ್ದಾರೆ.