– ಲಾಕ್ಡೌನ್ ವೇಳೆ ರಾಜ್ಯದಲ್ಲೇ ಅತಿ ಹೆಚ್ಚು ಅಕ್ರಮ ಮದ್ಯ ಮಾರಾಟ
ಕೋಲಾರ: ಜಿಲ್ಲೆಯಲ್ಲಿ ಶಾಶ್ವತ ಕುಡಿಯೋ ನೀರಿಗೂ ಬರ ಇದೆ. ಆದರೆ ಕೊರೊನಾ ಸಂಕಷ್ಟದ ಮಧ್ಯೆ ಮದ್ಯ ಮಾರಾಟಕ್ಕೆ ಬರವಿಲ್ಲ ಅನ್ನೋ ಅಂಶವೊಂದು ಬಯಲಾಗಿದೆ. ಲಾಕ್ಡೌನ್ ಬಳಿಕ ಶೇ. 54 ರಷ್ಟು ಮದ್ಯ ಮಾರಾಟ ಹೆಚ್ಚಾಗಿದ್ದು, ರಾಜ್ಯದಲ್ಲೆ ಎಣ್ಣೆ ಸಚಿವರ ತವರು ಜಿಲ್ಲೆ ಅಕ್ರಮ ಮದ್ಯ ಮಾರಾಟದಲ್ಲಿ 1 ನೇ ಸ್ಥಾನ ಪಡೆದಿದೆ.
Advertisement
ಕೋಲಾರ, ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಿಗೆ ಹೊಂದಿಕೊಂಡಿರುವ ಗಡಿ ಜಿಲ್ಲೆ, ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ನೀರಿಗೆ ಇಲ್ಲಿ ಬರವಿದೆ. ಆದರೆ ಅಬಕಾರಿ ಸಚಿವ ಹೆಚ್.ನಾಗೇಶ್ ತಮ್ಮ ಒಂದು ವರ್ಷದ ಅವಧಿಯಲ್ಲೆ ತನ್ನ ತವರು ಜಿಲ್ಲೆಯಲ್ಲಿ ಮದ್ಯ ಮಾರಾಟ ಹೆಚ್ಚು ಮಾಡುವ ಮೂಲಕ ವಿನೂತನ ರೀತಿಯ ಸಾಧನೆ ಮಾಡಿದ್ದಾರೆ.
Advertisement
Advertisement
ಹೌದು. ಅಂಕಿ ಅಂಶಗಳ ಪ್ರಕಾರ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಕೋಲಾರ ಜಿಲ್ಲೆಯಲ್ಲಿ ಶೇ. 54 ರಷ್ಟು ಮದ್ಯ ಮಾರಾಟ ಹೆಚ್ಚಾಗಿದೆ. ಕಳೆದ ಜುಲೈ ತಿಂಗಳಿಗೂ 2020 ರ ಜುಲೈ ತಿಂಗಳಲ್ಲಿ 66 ಸಾವಿರ ಮದ್ಯದ ಬಾಕ್ಸ್ ಗಳು ಹೆಚ್ಚಾಗಿ ಮಾರಾಟವಾಗಿದೆ ಅನ್ನೋ ಅಂಶ ಬೆಳಕಿಗೆ ಬಂದಿದೆ. ಇದಕ್ಕೆ ಆಂಧ್ರಪ್ರದೇಶದಲ್ಲಿ ಮದ್ಯದಂಗಡಿಗಳ ಸಂಖ್ಯೆ ಕಡಿಮೆ ಮಾಡುತ್ತಿರುವುದು ಹಾಗೂ ರಾಜ್ಯದ ಮದ್ಯಕ್ಕೆ ಹೆಚ್ಚಿನ ಬೇಡಿಕೆ ಇರುವುದೇ ಮದ್ಯ ಮಾರಾಟ ಹೆಚ್ಚಾಗುವುದಕ್ಕೆ ಕಾರಣ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಆಂಧ್ರ ಹಾಗೂ ತಮಿಳುನಾಡು ಗಡಿಗಳಲ್ಲಿ ಹೆಚ್ಚಾಗಿ ಮದ್ಯದಂಗಡಿಗಳು ತಲೆ ಎತ್ತಿದ್ದು, ನೆರೆಯ ಮದ್ಯ ಪ್ರಿಯರನ್ನ ಆಕರ್ಷಿಸುತ್ತಿರುವುದೇ ಮತ್ತೊಂದು ಕಾರಣ.
Advertisement
ನೆರೆಯ ಆಂಧ್ರ ಹಾಗೂ ತಮಿಳುನಾಡು ರಾಜ್ಯದ ಬಾರ್ಗಳು ಗಡಿಯಿಂದ ದೂರಕ್ಕೆ ಇದ್ದು, ಮದ್ಯ ಪ್ರಿಯರು ಹೋಗಿ ಬರಲು ಕಷ್ಟ. ರಾಜ್ಯದ ಮದ್ಯ ಕ್ವಾಲಿಟಿ ಹಾಗೂ ಕ್ವಾಂಟಿಟಿಗೆ ಮೂರು ರಾಜ್ಯದ ಮದ್ಯಪ್ರಿಯರು ಮನಸೋತಿದ್ದಾರೆ. ಪರಿಣಾಮ ಲಾಕ್ಡೌನ್ ವೇಳೆ ಲಕ್ಷಾಂತರ ರೂಪಾಯಿ ಅಕ್ರಮವಾಗಿ ಮಾರಾಟ ಕೂಡ ನಡೆದಿದೆ. ಲಾಕ್ಡೌನ್ ವೇಳೆ ಮದ್ಯ ನಿಷೇಧ ಮಾಡಿದ ಹಿನ್ನೆಲೆಯಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆದಿತ್ತು. ಹಾಗಾಗಿ ಲಾಕ್ ಡೌನ್ ಅವಧಿಯಲ್ಲಿ ದಾಳಿ ಮಾಡಿ ಲಕ್ಷಾಂತರ ರೂಪಾಯಿ ಮದ್ಯವನ್ನ ಅಬಕಾರಿ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 2075 ಲೀ ಮದ್ಯ, 989 ಲೀ ಬಿಯರ್, 120 ಲೀ ವೈನ್, 111 ಲೀ ಸೇಂಧಿ, 75 ಲೀ ಕಳ್ಳ ಭಟ್ಟಿ, 462 ಲೀ ಬೆಲ್ಲದ ಕೊಳೆ ಹಾಗೂ ಅರೋಪಿಗಳಿಂದ 16 ದ್ವಿಚಕ್ರ ವಾಹನಗಳನ್ನ ವಶಕ್ಕೆ ಪಡೆಯಲಾಗಿದೆ. ಅದರಲ್ಲೂ ರಾಜ್ಯದಲ್ಲೆ ಜಿಲ್ಲೆಯಲ್ಲಿ ಅತಿ ಹೆಚ್ಚು ಅಕ್ರಮ ಮದ್ಯ ಮಾರಾಟ ಪ್ರಕರಣಗಳು ದಾಖಲಾಗಿವೆ ಅನ್ನೋದು ಮತ್ತೊಂದು ವಿಶೇಷ.
ಅಬಕಾರಿ ಸಚಿವ ನಾಗೇಶ್ ಕಳೆದ ಒಂದು ವರ್ಷದಲ್ಲಿ ಜಿಲ್ಲೆಗೆ ಯಾವುದೇ ಉಪಯೋಗವಾಗುವ ಸಾಧನೆ ಮಾಡಿಲ್ಲವಾದ್ರು, ಜಿಲ್ಲೆಯಲ್ಲಿ ಮದ್ಯ ಮಾರಾಟ ಹೆಚ್ಚು ಮಾಡಿದ್ದು ವಿಶೇಷ ಸಾಧನೆ ಅಂದರೆ ತಪ್ಪಲ್ಲ. ಇನ್ನಾದ್ರೂ ಜಿಲ್ಲೆಯ ಸಮಗ್ರ ಅಭಿವೃದ್ದಿ ಕಡೆ ಗಮನ ಹರಸಿ, ಸರ್ಕಾರಕ್ಕೆ ಒಳ್ಳೆಯ ಹೆಸರು ಸಿಗಲಿ ಅನ್ನೋದೆ ಎಲ್ಲರ ಆಶಯ.