– ಆರು ಮಂದಿ ಮಾಜಿ ಸಿಎಂಗಳಿದ್ದೇವೆ
– ಸರ್ಕಾರ, ಗೃಹ ಸಚಿವರಿಗೆ ಪತ್ರ ಬರೆಯುವೆ
ಬೆಂಗಳೂರು: ನಿರೂಪಕಿ, ನಟಿ ಅನುಶ್ರೀ ಪ್ರಕರಣದಲ್ಲಿ ‘ಮಾಜಿ ಸಿಎಂ’ ಹೆಸರು ಪ್ರಸ್ತಾಪ ಆಗಿದ್ದು, ಈ ಹಿನ್ನೆಲೆಯಲ್ಲಿ ಆ ಮಾಜಿ ಸಿಎಂ ಯಾರು ಎಂದು ಬಹಿರಂಗ ಪಡಿಸಿ ಎಂದು ಹೆಚ್. ಡಿ ಕುಮಾರಸ್ವಾಮಿ ಗರಂ ಆಗಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡ್ರಗ್ಸ್ ಕೇಸ್ ಪ್ರಕರಣ ಹಳ್ಳ ಹಿಡಿಯುತ್ತೆ ಎಂದು ನಾನು ಮೊದಲೇ ಹೇಳಿದ್ದೆ. ದಿನಕ್ಕೊಂದು ಕಪೋಲ ಕಲ್ಪಿತ ವರದಿಗಳು ಬರುತ್ತಿವೆ. ಇತ್ತೀಚೆಗೆ ಟಿವಿ ಆ್ಯಂಕರ್ ಅನುಶ್ರೀ ವಿಚಾರವಾಗಿ ಲಿಂಕ್ ಗಳು ಶುರುವಾಗಿವೆ. ಸಿಸಿಬಿ ಪೊಲೀಸರು ನೋಟಿಸ್ ನೀಡಿದ ತಕ್ಷಣ ರಾಜ್ಯದ ಮೂರು ರಾಜಕೀಯ ಪಕ್ಷಗಳ ಪ್ರಭಾವಿ ನಾಯಕರಿಗೆ ಒತ್ತಡ ತರಲು ಆ ಹೆಣ್ಣು ಮಗಳು ಫೋನ್ ಮೂಲಕ ಚರ್ಚೆ ಮಾಡಿದ್ದಾರೆ. ಸಿಸಿಬಿ ಅಧಿಕಾರಿಗಳಿಗೆ ನಂಬರ್ ಸಿಕ್ಕಿದೆ ಅಂತೆ. ಅವರ ಕಾಲ್ ಲಿಸ್ಟ್ನಲ್ಲಿ ಪ್ರಭಾವಿ ನಾಯಕರ ನಂಬರ್ ನೋಡಿ ಸಿಸಿಬಿ ಪೊಲೀಸ್ ಶಾಕ್ ಆಗಿದ್ದಾರಂತೆ ಎಂಬ ವರದಿಯನ್ನು ನಾನು ನೋಡಿದೆ ಎಂದರು.
Advertisement
Advertisement
ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿರೋದು ನಾನು. ನಾನು ಬದುಕಿದ್ದೇನೆ. ಮಾಜಿ ಮುಖ್ಯಮಂತ್ರಿಗಳಲ್ಲಿ ನಾನು, ಸಿದ್ದರಾಮಯ್ಯ, ಎಸ್.ಎಂ.ಕೃಷ್ಣ, ಮೊಯ್ಲಿ, ಜಗದೀಶ್ ಶೆಟ್ಟರ್, ಡಿವಿಎಸ್ ಇನ್ನೂ ಇದ್ದೇವೆ. ಯಾವ ಅಧಿಕಾರಿ ಮಾಜಿ ಸಿಎಂ ಅಂತ ಮಾಹಿತಿ ಕೊಟ್ಟಿದ್ದಾರೆ. ಯಾವ ಆಧಾರದ ಮೇರೆಗೆ ಮಾಜಿ ಮುಖ್ಯಮಂತ್ರಿ ಹೆಸರು ಬಂದಿದೆ. ಯಾರು ಆ ಮಾಜಿ ಸಿಎಂ ಹೇಳಬೇಕು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
Advertisement
Advertisement
ಆ ಹೆಣ್ಣು ಮಗಳು ಮಾಜಿ ಸಿಎಂ ಜೊತೆ ಮಾತಾಡಿದ್ದರೆ ಸತ್ಯ ಗೊತ್ತಾಗಲಿ. ಯಾರು ಆ ಮಾಜಿ ಸಿಎಂ ಅಂತ ಸಾರ್ವಜನಿಕವಾಗಿ ಮೊದಲು ಜನರ ಮುಂದೆ ಇಡಲಿ. ಆ ಮಾಜಿ ಸಿಎಂಗೆ ಶಿಕ್ಷೆ ಆಗಲಿ. ಯಾವ ಮಾಜಿ ಸಿಎಂ ಮಗನ ಹೆಸರು ಇದೆ ಗೊತ್ತಾಗಲಿ. ನಾನು ಯಾರು ಈ ವರದಿ ಕೊಟ್ಟಿದ್ದಾರೋ ಆ ವರದಿಗಾರರ ಬಳಿ ಬೇರೆ ಮೂಲದಿಂದ ತಿಳಿದುಕೊಂಡೆ. ಒಂದು ನಂಬರ್ನಿಂದ ಮಾಹಿತಿ ಕೊಟ್ಟಿದ್ದಾನೆ ಎಂದು ನನಗೆ ವರದಿಗಾರ ಫೋನ್ ನಂಬರ್ ಕೊಟ್ಟಿದ್ದಾರೆ. ಆ ನಂಬರ್ ಯಾರದು ಎಂದು ಪರಿಶೀಲಿಸಿದೆ. ಇದು ಶಿವಪ್ರಕಾಶ್ ನಾಯಕ್ ಬಳಸುತ್ತಿದ್ದ ನಂಬರ್ ಆಗಿದೆ. ಹೀಗಾಗಿ ಇದರ ಬಗ್ಗೆ ಅಧಿಕಾರಿ ಶಿವಪ್ರಕಾಶ್ ನಾಯಕ್ ಸತ್ಯ ಹೇಳಬೇಕು. ಮಾಹಿತಿ ಕೊಟ್ಟಿರೋದು ಸತ್ಯನಾ ಅನ್ನೋದನ್ನ ಹೇಳಲಿ ಎಂದರು.
ಯಾವ ಮಾಜಿ ಸಿಎಂ ಅಂತ ಜನರು ತಿಳಿದುಕೊಳ್ಳಬೇಕು. ನಾನು ಸರ್ಕಾರಕ್ಕೆ, ಸಿಎಂಗೆ, ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ. ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳಲ್ಲಿ ಸತ್ಯಾಸತ್ಯತೆ ಏನು ಅನ್ನೋದು ಗೊತ್ತಾಗಬೇಕಿದೆ. ಯಾರು ಮಾಹಿತಿ ಕೊಟ್ಟಿದ್ದಾರೆ? ಯಾರು ಇದ್ದಾರೆ? ಯಾವ ಮಾಜಿ ಸಿಎಂ ಇದ್ದಾರೆ ಅನ್ನೋ ಸತ್ಯ ಗೊತ್ತಾಗಲಿ. ಆ ಮಾಜಿ ಮುಖ್ಯಮಂತ್ರಿ ಯಾರು ಎಂಬುದನ್ನು ಸರ್ಕಾರ ಹೊರ ತರಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.
ಯಾರು ಆ ಮಾಜಿ ಮುಖ್ಯಮಂತ್ರಿ ಎಂಬುದನ್ನು ಮಾಧ್ಯಮಗಳಿಗೆ ಕೊಟ್ಟವರು ಯಾರು?, ಮಾಜಿ ಸಿಎಂ ಮಗ ಎಂದೂ ವರದಿಗಳು ಬರುತ್ತಿವೆ. ಈ ರೀತಿಯ ಕಪೋಲಕಲ್ಪಿತ ವರದಿಗಳನ್ನು ಸುಮ್ಮನೆ ಬಿಡಬಾರದು. ನಾನಂತೂ ಇದನ್ನು ತನಿಖೆಗೆ ಒತ್ತಾಯ ಮಾಡುತ್ತೇನೆ. ನಾನು ಅಷ್ಟು ಸುಲಭಕ್ಕೆ ಬಿಡೋನು ಅಲ್ಲ. ಯಾರು ಒತ್ತಡ ಹಾಕಿದವರು ಅನ್ನೋದು ಗೊತ್ತಾಗಬೇಕು?. ತನಿಖೆ ಹಳ್ಳ ಹಿಡಿಸಲು, ದಾರಿ ತಪ್ಪಿಸಲು ಬಿಡಲ್ಲ. ಒತ್ತಡ ಹಾಕಿದವನು ಯಾವನೇ ಆಗಿರಲಿ, ಅವನನ್ನ ಒದ್ದು ಒಳಗೆ ಹಾಕಲಿ. ಮಂಗಳೂರು ಕಮಿಷನರ್ಗೂ ನಾನು ಕರೆ ಮಾಡಿ ಮಾತಾಡಿದ್ದೇನೆ ಎಂದು ಎಚ್ಡಿಕೆ ಹೇಳಿದರು.