ಅಖಿಲಾ ಪಜಿಮಣ್ಣು ಜೇನ್ದನಿಯಲ್ಲಿ ಬೆಳದಿಂಗಳಂಥ ಕವರ್ ಸಾಂಗ್!

Public TV
2 Min Read
akhila pajimannu 3

– ಮತ್ತೆ ಮತ್ತೆ ಕೇಳಿದರೂ ಮುಸುಕಾಗದ ಪುಳಕ!

ಬೆಂಗಳೂರು: ಕನ್ನಡದ ಮ್ಯೂಸಿಕ್ ರಿಯಾಲಿಟಿ ಶೋಗಳಿಂದ ಒಂದಷ್ಟು ಗಟ್ಟಿ ಪ್ರತಿಭೆಗಳು ಬೆಳಕು ಕಂಡಿವೆ. ಅಂಥವರೆಲ್ಲ ಸಿನಿಮಾ ಸೇರಿದಂತೆ ನಾನಾ ಸ್ವರೂಪದಲ್ಲಿ ಸಂಗೀತ ಪ್ರೇಮಿಗಳನ್ನು ತಾಕುತ್ತಾ, ಮುದ ನೀಡುತ್ತಾ ಮುಂದುವರಿಯುತ್ತಿದ್ದಾರೆ. ಈ ರೀತಿಯ ಪ್ರತಿಭಾವಂತ ಗಾಯಕಿಯರ ಸಾಲಿಗೆ ಇತ್ತೀಚಿನ ಸೇರ್ಪಡೆ ದಕ್ಷಿಣ ಕನ್ನಡ ಮೂಲದ ಹುಡುಗಿ ಅಖಿಲಾ ಪಜಿಮಣ್ಣು.

‘ಕನ್ನಡ ಕೋಗಿಲೆ’ ರಿಯಾಲಿಟಿ ಶೋ ಮೂಲಕ ಪ್ರವರ್ಧಮಾನಕ್ಕೆ ಬಂದ ಅಖಿಲಾ ಇತ್ತೀಚಿನ ದಿನಗಳಲ್ಲಿ ಕನ್ನಡದ ಅಚ್ಚಳಿಯದ ಹಾಡುಗಳ ಕವರ್ ಸಾಂಗ್ ಮೂಲಕ ಸುದ್ದಿಯಲ್ಲಿದ್ದಾರೆ. ಇದೀಗ ಕನ್ನಡ ಸಿನಿಮಾ ಪ್ರೇಮಿಗಳು ಎಂದೂ ಮರೆಯದ ‘ಅಮೃತವರ್ಷಿಣಿ’ ಚಿತ್ರದ ಚೆಂದದ ಹಾಡೊಂದು ಅಖಿಲಾ ಜೇನ್ದನಿಗೆ ಅದ್ದಿಕೊಂಡು ಹೊಸ ಸ್ವರೂಪದಲ್ಲಿ ಕೇಳುಗರನ್ನು ತಲುಪಿಕೊಂಡಿದೆ.

akhila pajimannu

ರಿಯಾಲಿಟಿ ಶೋಗಳಲ್ಲಿ ವೆರೈಟಿ ಸಾಂಗುಗಳನ್ನು ಹಾಡೋ ಮೂಲಕ ಸಂಗೀತಾಸಕ್ತರನ್ನು ಸಮ್ಮೊಹನಗೊಳಿಸಿದ್ದರು ಅಖಿಲಾ ಪಜಿಮಣ್ಣು. ಇತ್ತೀಚೆಗಷ್ಟೇ ಅವರು ಹಾಡಿರೋ `ಸಂಗಾತಿ ನಿನ್ನ ಸಂಪ್ರೀತಿಯಿಂದ…’ ಕವರ್ ಸಾಂಗ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಬಿಟ್ಟಿತ್ತು. ಈಗ ಅಮೃತವರ್ಷಿಣಿ ಚಿತ್ರದ `ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ’ ಕವರ್ ಸಾಂಗ್ ಬಿಡುಗಡೆಯಾಗಿದೆ. ಅಖಿಲಾ ಸ್ವರದಲ್ಲಿ ಮೂಡಿ ಬಂದಿರುವ ಈ ಹಾಡು ಯಥಾಪ್ರಕಾರ ಮತ್ತೆ ಮತ್ತೆ ಕೇಳಿ ಪುಳಕಗೊಳ್ಳುವಂತಿದೆ.

akhila pajimannu 5

ಅಖಿಲಾ ಅವರ ಅಫಿಶಿಯಲ್ ಯೂಟ್ಯೂಬ್ ಚಾನಲ್‍ನಲ್ಲಿಯೇ ಈ ಕವರ್ ಸಾಂಗ್ ಬಿಡುಗಡೆಯಾಗಿದೆ. ಅದು ಬಿಡುಗಡೆಯಾಗಿ ಎರಡ್ಮೂರು ಘಂಟೆಗಳು ಕಳೆಯೋದರೊಳಗಾಗಿಯೇ ಸಾವಿರಗಟ್ಟಲೆ ವೀವ್ಸ್ ಪಡೆಯೋ ಮೂಲಕ ವೈರಲ್ ಆಗುವ ಮುನ್ಸೂಚನೆಯನ್ನೂ ನೀಡುತ್ತಿದೆ. ಕಮೆಂಟುಗಳ ಮೂಲಕ ಅಖಿಲಾಭಿಮಾನಿಗಳೆಲ್ಲ ವ್ಯಾಪಕವಾಗಿ ಈ ಕವರ್ ಸಾಂಗ್ ಅನ್ನು ಮೆಚ್ಚಿ ಕೊಂಡಾಡುತ್ತಿದ್ದಾರೆ. ಅಷ್ಟಕ್ಕೂ ಈ ಕವರ್ ಸಾಂಗ್ ಕೇಳಿದ ಯಾರೇ ಆದರೂ ಒಂದರೆಕ್ಷಣ ಕಣ್ಮುಚ್ಚಿ ಕಾಣದ ಲೋಕದಲ್ಲಿ ತೇಲಾಡುವಷ್ಟು ಚೆಂದಗಿದೆ.

akhila pajimannu 2

ಅಮೃತವರ್ಷಿಣಿ ಮ್ಯೂಸಿಕಲ್ ಹಿಟ್ ಚಿತ್ರ. ಇದರ ಮೂಲಕವೇ ಕೆ ಕಲ್ಯಾಣ್ ಎಂಬ ಪ್ರತಿಭಾವಂತ ಸಾಹಿತಿ ಕನ್ನಡಕ್ಕಾಗಮಿಸಿದ್ದರು. ಅವರು ಬರೆದ ಈ ಸುಂದರ ಬೆಳದಿಂಗಳ ಹಾಡನ್ನು ಎಸ್.ಪಿ ಬಾಲಸುಬ್ರಹ್ಮಣ್ಯಂ ಮತ್ತು ಕೆ.ಎಸ್ ಚಿತ್ರಾ ಹಾಡಿದ್ದರು. ಆ ಬಳಿಕ ಯಾವ್ಯಾವ ಥರದ ಹಾಡುಗಳು ಬಂದರೂ ಈ ಹಾಡುಗಳನ್ನು ಮಂಕಾಗಿಸಲು ಸಾಧ್ಯವಾಗಿಲ್ಲ. ಇಂಥಾ ಹಾಡುಗಳ ಕವರ್ ವರ್ಷನ್ ಮಾಡೋದೆಂದರೆ ಅದೇನು ಸಲೀಸಿನ ಸಂಗತಿಯಲ್ಲ. ಎಸ್‍ಪಿಬಿ ಮತ್ತು ಚಿತ್ರಾ ಎಂಬ ಮೇರು ಗಾಯಕ ಗಾಯಕಿಯರಿಗೆ ಗೌರವ ಸಲ್ಲಿಸುವಂತೆ ರೂಪಿಸುವ ಘನವಾದ ಜವಾಬ್ದಾರಿ ಇರುತ್ತದೆ.

akhila pajimannu6

ಅಖಿಲಾ ಪಜಿಮಣ್ಣು ಈ ಹಾಡನ್ನು ಮತ್ತಷ್ಟು ಹೊಳಪುಗಟ್ಟಿಸುವಂತೆ ಕವರ್ ವರ್ಷನ್ನಿಗೆ ಧ್ವನಿಯಾಗಿದ್ದಾರೆ. ಇನ್ನುಳಿದಂತೆ ದೃಶ್ಯವಾಗಿಯೂ ಈ ಕವರ್ ಸಾಂಗ್ ಅನ್ನು ಅಕ್ಷಯ್ ನಾಯಕ್ ಅವರ ಕ್ಯಾಮೆರಾ ವರ್ಕ್ ಕಳೆಗಟ್ಟಿಸಿದೆ. ಬೇರೆ ಭಾಷೆಗಳಿಗೆ ಹೋಲಿಸಿದರೆ ಈ ಕವರ್ ಸಾಂಗ್‍ಗಳ ಸಂಖ್ಯೆ ಕನ್ನಡದಲ್ಲಿ ತುಸು ಕಡಿಮೆಯಿತ್ತು. ಅಖಿಲಾ ಪಜಿಮಣ್ಣು ಅದಕ್ಕೊಂದು ಹೊಸ ಓಘ ನೀಡುವಂಥಾ ಕವರ್ ಸಾಂಗ್‍ಗಳನ್ನು ಸೃಷ್ಟಿಸುತ್ತಿದ್ದಾರೆ. ಯಾವ ಥರದ ಹಾಡುಗಳಿಗಾದರೂ ಒಗ್ಗಿಕೊಳ್ಳುವಂಥಾ, ಯಾವ ಹಾಡನ್ನಾದರೂ ಮತ್ತೆ ಮತ್ತೆ ಕೇಳಬೇಕೆಂಬ ಆಸೆ ಮೂಡಿಸುವಂತೆ ಹಾಡುವ ಕಲೆ ಹೊಂದಿರೋ ಯುವ ಗಾಯಕಿ ಅಖಿಲಾ. ಈ ಕವರ್ ಸಾಂಗ್ ಕೂಡಾ ಹೆಚ್ಚು ವೀಕ್ಷಣೆ ಪಡೆಯುವ ಸಾಧ್ಯತೆಯಿದೆ.

 

Share This Article